ಅನಧಿಕೃತ ಕಟ್ಟಡಗಳ ತೆರವಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಲಾಗುತ್ತಿದೆ: ಬಿಬಿಎಂಪಿ
ಹೈಕೋರ್ಟ್ ಸೂಚನೆಯ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿಯಲ್ಲಿ ಒತ್ತುವರಿ ಮಾಡಿಕೊಂಡಿರುವ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಲು ಕ್ರಿಯಾ ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಮಂಗಳವಾರ ಹೇಳಿದ್ದಾರೆ.
Published: 23rd August 2023 09:22 AM | Last Updated: 23rd August 2023 01:03 PM | A+A A-

ತುಷಾರ್ ಗಿರಿನಾಥ್.
ಬೆಂಗಳೂರು: ಹೈಕೋರ್ಟ್ ಸೂಚನೆಯ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿಯಲ್ಲಿ ಒತ್ತುವರಿ ಮಾಡಿಕೊಂಡಿರುವ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಲು ಕ್ರಿಯಾ ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಮಂಗಳವಾರ ಹೇಳಿದ್ದಾರೆ.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ನ್ಯಾಯಾಲಯದ ಸೂಚನೆ ಅನ್ವಯ ಅನಧಿಕೃತ ಕಟ್ಟಡ ತೆರವಿಗೆ ಕ್ರಮ ಕೈಗೊಳ್ಳಲಾಗುವುದು. ನಗರದಲ್ಲಿ ಇರುವ ಅನಧಿಕೃತ ಕಟ್ಟಡಗಳ ತೆರವಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಲಾಗುವುದು. ಇನ್ನೂ, ಕ್ರಿಯಾ ಯೋಜನೆ ಸಿದ್ಧಪಡಿಸಿದ ನಂತರ ವರದಿಯನ್ನು ಕೋರ್ಟ್ಗೆ ಸಲ್ಲಿಕೆ ಮಾಡಲಾಗುವುದು ಎಂದು ಹೇಳಿದರು.
ಇದನ್ನೂ ಓದಿ: ಅನಧಿಕೃತ ಹೋರ್ಡಿಂಗ್: ಕೆಪಿಸಿಸಿಯ ಹಿಂದುಳಿದ ವರ್ಗಗಳ ಸೆಲ್ ಗೆ 50 ಸಾವಿರ ರೂ. ದಂಡ ವಿಧಿಸಿದ ಬಿಬಿಎಂಪಿ!
ಅನಧಿಕೃತ ಬ್ಯಾನರ್ ಕುರಿತು ಮಾತನಾಡಿ, ಎಲ್ಲಾ ವಲಯದ ಆಯುಕ್ತರಿಗೆ ಅನಧಿಕೃತ ಫ್ಲೆಕ್ಸ್ ವಿಚಾರವಾಗಿ ದಂಡ ಹಾಕಿ ಕ್ರಮ ಕೈಗೊಳ್ಳಲು ಸೂಚನೆ ಕೊಟ್ಟಿದ್ದೆ. ಆ ಪ್ರಕಾರ ಎಲ್ಲೆಡೆ ಅನಧಿಕೃತವಾಗಿ ಅಳವಡಿಕೆಯಾಗಿರುವ ಫ್ಲೆಕ್ಸ್ ತೆರವು ಕಾರ್ಯಾಚರಣೆ ಆರಂಭಿಸಲಾಗಿದೆ. ಅದರಲ್ಲೂ, ಪೂರ್ವ ವಲಯದ ಆಯುಕ್ತರು ಕೆಪಿಸಿಸಿ ಕಚೇರಿಯಲ್ಲಿದ್ದ ಫ್ಲೆಕ್ಸ್ ತೆರವು ಮಾಡಿಸಿದ್ದಾರೆ. ಈ ಮೊದಲು ನಿಗದಿ ಮಾಡಿರುವಂತೆ ದಂಡವನ್ನೂ ವಸೂಲಿ ಮಾಡಲಾಗಿದೆ ಎಂದು ತಿಳಿಸಿದರು.
ಕುಡಿಯುವ ನೀರಿನ ಅಗತ್ಯತೆ ಕುರಿತು ಮಾತನಾಡಿ, ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲು ಅನುದಾನ ಕೊಡಲಾಗಿದೆ. ಹತ್ತು ಹಳ್ಳಿಗಳಲ್ಲಿ ಕುಡಿಯುವ ನೀರಿನ ವ್ಯತ್ಯಯ ಆಗಿದೆ. ಹೀಗಾಗಿ ಪಾಲಿಕೆಯ ಹೊರ ವಲಯಗಳಲ್ಲಿ ಅನುದಾನ ಮಂಜೂರು ಮಾಡಲಾಗಿದೆ. ಅದರಂತೆ ಯಶವಂತಪುರ ಕ್ಷೇತ್ರಕ್ಕೂ ಅನುದಾನ ಕೊಡಲಾಗಿದೆ. ಹೊರ ವಲಯಗಳಿಗೆ ಸುಮಾರು 10 ಕೋಟಿವರೆಗೆ ಅನುದಾನ ಕೊಡಲಾಗಿದೆ. ವಲಯ ಆಯುಕ್ತರ ವಿವೇಚನೆಗೆ ತಕ್ಕಂತೆ ಹಣ ಖರ್ಚು ಮಾಡಲು ಹೇಳಲಾಗಿದೆ ಎಂದರು.