ಪೋಂಜಿ ಸ್ಕೀಮ್: 700 ಮಂದಿಗೆ ಟೋಪಿ ಹಾಕಿದ್ದ ಇಬ್ಬರು ವಂಚಕರ ಬಂಧನ

ಅಧಿಕ ಲಾಭ ನೀಡುವುದಾಗಿ ನಂಬಿಸಿ, 700 ಮಂದಿಯಿಂದ ಹಣ ಹೂಡಿಕೆ ಮಾಡಿಸಿಕೊಂಡು ಟೋಪಿ ಹಾಕಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಅಧಿಕ ಲಾಭ ನೀಡುವುದಾಗಿ ನಂಬಿಸಿ, 700 ಮಂದಿಯಿಂದ ಹಣ ಹೂಡಿಕೆ ಮಾಡಿಸಿಕೊಂಡು ಟೋಪಿ ಹಾಕಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಕೋಣನಕುಂಟೆಯ ಜಿ.ಎಸ್.ಪ್ರದೀಪ್ ಹಾಗೂ ನಾಗವಾರದ ವಸಂತ್ ಕುಮಾರ್ ಎಂದು ಗುರ್ತಿಸಲಾಗಿದೆ. ಪ್ರಕರಣದಲ್ಲಿ ಪ್ರದೀಪ್ ಪತ್ನಿ ಸೌಮ್ಯಾಳ ಪಾತ್ರದ ಬಗ್ಗೆಯೂ ಸಿಸಿಬಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಹೂಡಿಕೆ ಮಾಡಿದ ಹಣಕ್ಕೆ ಅಧಿಕ ಹಣ ನೀಡುವುದಾಗಿ ಆರೋಪಿಗಳು ಜಾಹೀರಾತು ನೀಡಿದ್ದರು. ಇದನ್ನೇ ನಂಬಿದ್ದ ಸಾರ್ವಜನಿಕರು ರೂ.25 ಕೋಟಿಯಷ್ಟು ಹೂಡಿಕೆ ಮಾಡಿದ್ದರು.

ಆರೋಪಿಗಳು, 2021ರಿಂದ ಜೆ.ಪಿ.ನಗರದ 9ನೇ ಹಂತದ ದೊಡ್ಡಕಲ್ಲಸಂದ್ರದ ನಾರಾಯಣನಗರದಲ್ಲಿ ‘ಪ್ರಮ್ಯಾ ಇಂಟರ್‌ನ್ಯಾಷನಲ್‌’ ಎಂಬ ಹೆಸರಿನಲ್ಲಿ ಅಕ್ರಮವಾಗಿ ಕಚೇರಿ ತೆರೆದಿದ್ದು, ಇದೇ ಹೆಸರಿನಲ್ಲಿ ವೆಬ್‌ಸೈಟ್ ಕೂಡ ನಡೆಸುತ್ತಿದ್ದರು. ಈ ವೆಬ್‌ಸೈಟ್‌ನಲ್ಲಿ ಸಾರ್ವಜನಿಕರು ಹಣ ಹೂಡಿಕೆ ಮಾಡಿದರೆ ಶೇ 2.5ರಷ್ಟು ಪ್ರತಿ ತಿಂಗಳು ಲಾಭ ಬರುತ್ತದೆ ಎಂಬ ತಲೆಬರಹದಲ್ಲಿ ಆಯ್ದ ಹೂಡಿಕೆದಾರರಿಗೆ ಮಾತ್ರ ಹೂಡಿಕೆಗೆ ಅವಕಾಶ ಇರುತ್ತದೆ ಎಂದು ಹೇಳಿಕೊಂಡಿದ್ದರು.

ಪತಿ-ಪತ್ನಿಯಾಗಿರುವ ಪ್ರದೀಪ್ ಹಾಗೂ ಸೌಮ್ಯ ಇಬ್ಬರು ಮೊದಲು ಟೆಕ್ಕಿಗಳಾಗಿ ಕೆಲಸ ಮಾಡುತ್ತಿದ್ದರು. ನಂತರ ಇಬ್ಬರು ತಮ್ಮದೇ ಆದ ಕಂಪನಿಯನ್ನು ತೆರೆದು, ವೇಗವಾಗಿ ಹಣ ಗಳಿಸಲು ನಿರ್ಧರಿಸಿದ್ದರು. ಇದರಂತೆ ಉದ್ಯೋಗ ತೊರೆದ ದಂಪತಿಗಳು ಪ್ರದೀಪ್ ಅವರ ಹೆಸರಿನಲ್ಲಿರುವ ಮೊದಲ ಅಕ್ಷರ ಪ್ರ ಹಾಗೂ ಸೌಮ್ಯ ಅವರ ಹೆಸರಿನ ಕೊನೆಯ ಮ್ಯಾ ಅಕ್ಷರಗಳನ್ನು ಬಳಸಿ ಪ್ರಮ್ಯಾ ಎಂದು ಹೆಸರಿಸಿಟ್ಟು, ಕಂಪನಿ ತೆರೆದಿದ್ದರು ಎಂದು ತಿಳಿದುಬಂದಿದೆ.

ಆರೋಪಿಗಳ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದ್ದು, ಹಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಂಪನಿಯಲ್ಲಿ ಹೂಡಿಕೆ ಮಾಡಿರುವವರು ಸಿಸಿಬಿ ಅಧಿಕಾರಿಗಳನ್ನು ಸಂಪರ್ಕಿಸಿ ತಮ್ಮ ಹೇಳಿಕೆಗಳನ್ನು ದಾಖಲಿಸಿಕೊಳ್ಳುವಂತೆ ತಿಳಿಸಲಾಗಿದೆ. ಹೆಚ್ಚಿನ ತನಿಖೆಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ವಿರುದ್ಧ 2019 ರ ಅನಿಯಂತ್ರಿತ ಠೇವಣಿ ಯೋಜನೆಗಳ (BUDS) ನಿಷೇಧ ಕಾಯ್ದೆ ಮತ್ತು ವಂಚನೆ ಪ್ರಕರಣದ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com