ಸಿರಿಧಾನ್ಯ ಬೆಳೆಯುವ ರೈತರಿಗೆ ಸರ್ಕಾರದಿಂದ ಪ್ರೋತ್ಸಾಹ ಧನ: ಸಚಿವ ಚೆಲುವರಾಯ ಸ್ವಾಮಿ

ರಾಜ್ಯದಲ್ಲಿ ಸಿರಿದಾನ್ಯ ಬೆಳೆಯುವ ರೈತರಿಗೆ ಪ್ರೋತ್ಸಾಹ ಧನ ನೀಡಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ರಾಜ್ಯ ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ಅವರು ಗುರುವಾರ ಹೇಳಿದರು.
ಸಚಿವ ಚೆಲುವರಾಯ ಸ್ವಾಮಿ
ಸಚಿವ ಚೆಲುವರಾಯ ಸ್ವಾಮಿ
Updated on

ಬೆಂಗಳೂರು: ರಾಜ್ಯದಲ್ಲಿ ಸಿರಿದಾನ್ಯ ಬೆಳೆಯುವ ರೈತರಿಗೆ ಪ್ರೋತ್ಸಾಹ ಧನ ನೀಡಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ರಾಜ್ಯ ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ಅವರು ಗುರುವಾರ ಹೇಳಿದರು.

ಜನವರಿ 5 ರಿಂದ 7ರವರೆಗೆ ನಡೆಯಲಿರುವ ಅಂತರರಾಷ್ಟ್ರೀಯ ಸಾವಯವ ಸಿರಿಧಾನ್ಯ ಮೇಳದ ಪೂರ್ವಭಾವಿಯಾಗಿ ನಗರದ ಮೌಂಟ್‌ ಕಾರ್ಮೆಲ್ ಕಾಲೇಜಿನಲ್ಲಿ ಗುರುವಾರ ನಡೆದ ‘ನನ್ನ ತಟ್ಟೆಯಲ್ಲಿ ಸಿರಿಧಾನ್ಯಗಳ ಪುನರುತ್ಥಾನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಿರಿಧಾನ್ಯ ಪೌಷ್ಟಿಕಾಂಶದ ಪ್ರಯೋಜನಗಳನ್ನು ಒತ್ತಿ ಹೇಳಿದ ಸಚಿವರು, ಎಲ್ಲರೂ ಜಂಕ್ ಫುಡ್ ಬಿಟ್ಟು, ಸಿರಿಧಾನ್ಯ ಸೇವನೆ ಮಾಡಿ ಎಂದು ಸಲಹೆ ನೀಡಿದರು.

ಸಿರಿ ಧಾನ್ಯಗಳು ದೇಹಕ್ಕೆ ಪುಷ್ಠಿ ನೀಡುತ್ತದೆ. ಧೀರ್ಘಕಾಲ ದೇಹಕ್ಕೆ ಸ್ಥಿರತೆ ನೀಡಲು ನೆರವಾಗುತ್ತದೆ. ಅಲ್ಲದೇ ನೀರಿನಲ್ಲಿ ಸಿರಿಧಾನ್ಯ ಬೆಳೆಯುವುದರಿಂದ ರೈತರಿಗೆ ವೆಚ್ಚ ಕಡಿಮೆಯಾಗಿ, ಹೆಚ್ಚು ಆದಾಯ ತಂದುಕೊಡುತ್ತದೆ ಎಂದು ಹೇಳಿದರು.

ಹೆಚ್ಚು ಪೌಷ್ಠಿಕತೆ ಹೊಂದಿರುವ ಸಿರಿಧಾನ್ಯ ಸದೃಡ ದೇಹ ಹಾಗೂ ಮನಸ್ಸಿನ ನಿರ್ಮಾಣಕ್ಕೆ ಸಹಕಾರಿಯಾಗಿದೆ. ಯುವ ಸಮುದಾಯ ಇದನ್ನು ಹೆಚ್ಚು ಬಳಸಿ ಸಾರ್ವಜನಿಕರಿಗೂ ಅರಿವು ಮೂಡಿಸಬೇಕು. ಸಿರಿಧಾನ್ಯ ಅತ್ಯಂತ ಪರಿಪೂರ್ಣ ಆಹಾರ, ಜಾಗತಿಕ ಮಾರುಕಟ್ಟೆಯಲ್ಲಿಯೂ ಇದಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ವಿದ್ಯಾರ್ಥಿಗಳೂ ಕೂಡ ಜಂಕ್ ಪುಡ್ ಬಿಟ್ಟು ಪ್ರತಿದಿನ ಸಿರಿಧಾನ್ಯ ಬಳಸುವುದು ಉತ್ತಮ.

ಸಿರಿಧಾನ್ಯ ಕಡಿಮೆ ವೆಚ್ಚ, ಮಿತ ನೀರಿನಲ್ಲಿ ಬೆಳೆಯುವ ಆಹಾರವಾಗಿದೆ. ಕರ್ನಾಟಕ ಸರ್ಕಾರ 2013 ರಿಂದಲೂ ಇದರ ಪ್ರೋತ್ಸಾಹಕ್ಕೆ ಹಲವು ಯೋಜನೆ ಜಾರಿಗೆ ತಂದಿದೆ. ಪ್ರತಿವರ್ಷ ಮೇಳಗಳನ್ನು ಆಯೋಜಿಸುತ್ತಿದ್ದು, ಈ‌ ಬಾರಿ ಜ 5-7ರ ವರಗೆ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಅಂತರ ರಾಷ್ಟ್ರೀಯ ಮಟ್ಟದ ಸಾವಯವ, ಸಿರಿಧಾನ್ಯ ವಾಣಿಜ್ಯ ಮೇಳ ಆಯೋಜಿಸಲಾಗಿದೆ. ದೇಶ ವಿದೇಶಗಳ ವಿಜ್ಞಾನಿಗಳು, ತಜ್ಞರು ಈ ಮೇಳದಲ್ಲಿ ಪಾಲ್ಗೊಳ್ಳಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಅನುಕೂಲ ಪಡೆಯಬೇಕು ಎಂದು ತಿಳಿಸಿದರು.

ಕೃಷಿ ಇಲಾಖೆ ಆಯುಕ್ತ ವೈ.ಎಸ್. ಪಾಟೀಲ್ ಮಾತನಾಡಿ, ‘ಬರಗಾಲವನ್ನು ಎದುರಿಸಿ ಬೆಳೆಯುವ ಶಕ್ತಿ ಸಿರಿಧಾನ್ಯಗಳಿಗಿದೆ. ಕಡಿಮೆ ನೀರಿನಿಂದ ಬೆಳೆಯುವ ಇಂಥ ಉತ್ಪನ್ನಗಳನ್ನು ಪ್ರೋತ್ಸಾಹಿಸಬೇಕು’ ಎಂದರು.

‘ಸಿರಿಧಾನ್ಯಗಳಿಂದ ಹಲವು ರೀತಿಯ ಖಾದ್ಯಗಳನ್ನು ತಯಾರಿಸಲಾಗುತ್ತಿದೆ. ಯುವ ಸಮೂಹ ಇಷ್ಟಪಡುವ ಪಿಜ್ಜಾ, ಬರ್ಗರ್‌ನಂತಹ ಉತ್ಪನ್ನಗಳನ್ನು ಸಹ ಸಿರಿಧಾನ್ಯಗಳಿಂದ ತಯಾರಿಸಲಾಗುತ್ತಿದೆ’ ಎಂದು ಹೇಳಿದರು.

ಕೃಷಿ ಇಲಾಖೆ ಕಾರ್ಯದರ್ಶಿ ವಿ. ಅನ್ಬುಕುಮಾರ್ ಮಾತನಾಡಿ, ‘ಕೆಲ ದಶಕಗಳ ಹಿಂದೆ ಸಿರಿಧಾನ್ಯಗಳು ನಮ್ಮ ದೈನಂದಿನ  ಆಹಾರವಾಗಿದ್ದವು. ಈಗ ಸಿರಿಧಾನ್ಯವನ್ನು ಮತ್ತೆ ಪರಿಚಯಿಸಬೇಕಾದ ಪರಿಸ್ಥಿತಿ ಉಂಟಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಕರ್ನಾಟಕ ವಾರ್ಷಿಕ ರೂ.270 ಕೋಟಿ ಮೌಲ್ಯದ ಸಿರಿಧಾನ್ಯಗಳನ್ನು ರಫ್ತು ಮಾಡುತ್ತಿದ್ದು, ವಿದೇಶಗಳಲ್ಲೂ ಸಿರಿಧಾನ್ಯಗಳಿಗೆ ಬೇಡಿಕೆ ಇದೆ. ವಿದ್ಯಾರ್ಥಿಗಳು ಸಿರಿಧಾನ್ಯ ವಲಯದಲ್ಲಿ ನವೋದ್ಯಮಿಗಳಾಗಿ ಹೊರ ಹೊಮ್ಮಬೇಕು ಎಂದು ಸಲಹೆ ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com