ಬೆಂಗಳೂರು: ಚರಂಡಿ ಒತ್ತುವರಿ ತೆರವು ಕಾರ್ಯಾಚರಣೆ ಪುನರಾರಂಭಿಸಿದ ಬಿಬಿಎಂಪಿ

ಮಳೆ ನೀರು ಚರಂಡಿ (ಎಸ್‌ಡಬ್ಲ್ಯುಡಿ) ಅತಿಕ್ರಮಣ ತೆರವು ಕಾರ್ಯಾಚರಣೆಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಂಗಳವಾರ ಪುನರಾರಂಭಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮಳೆ ನೀರು ಚರಂಡಿ (ಎಸ್‌ಡಬ್ಲ್ಯುಡಿ) ಅತಿಕ್ರಮಣ ತೆರವು ಕಾರ್ಯಾಚರಣೆಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಂಗಳವಾರ ಪುನರಾರಂಭಿಸಿದೆ.

ಕರ್ನಾಟಕ ಭೂಕಂದಾಯ ಸೆಕ್ಷನ್ 104 ರ ಅಡಿಯಲ್ಲಿ ಬೆಂಗಳೂರು ಪೂರ್ವ ತಾಲ್ಲೂಕು ತಹಶೀಲ್ದಾರ್ ಅವರ ಆದೇಶದ ಮೇರೆಗೆ ಬಿಬಿಎಂಪಿ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಪುನರಾರಂಭಿಸಿದೆ ಎಂದು ತಿಳಿದುಬಂದಿದೆ.

ಚಿನ್ನಪನಹಳ್ಳಿ ಹಾಗೂ ಪಟ್ಟಂದೂರು ಅಗ್ರಹಾರದಲ್ಲಿ ಕೆಲ ಮನೆಗಳ ಕಾಂಪೌಂಡ್ ಗೋಡೆಗಳನ್ನು ಬಿಬಿಎಂಪಿ ಸೋಮವಾರ ಮತ್ತು ಮಂಗಳವಾರ ನೆಲಸಮಗೊಳಿಸಿದೆ.

ಮಹದೇವಪುರ ವಲಯದ ದೊಡ್ಡನೆಕುಂದಿ ವಾರ್ಡ್‌ನ ರಾಜಕಾಲುವೆಯಲ್ಲಿ ನಿರ್ಮಿಸಲಾಗಿದ್ದ ಎರಡು, ಮೂರು ಮತ್ತು ನಾಲ್ಕು ಅಂತಸ್ತಿನ ಕಟ್ಟಡಗಳು ಸೇರಿದಂತೆ ಮೂರು ಕಟ್ಟಡಗಳನ್ನು ಸೋಮವಾರ ನೆಲಸಮಗೊಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಂಗಳವಾರ ಗರುಡಾಚಾರ್ ಪಾಳ್ಯ ವಾರ್ಡ್‌ನ ಪಟ್ಟಂದೂರು ಅಗ್ರಹಾರದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಯಿತು. ರಾಜಕಾಲುವೆಯಲ್ಲಿ ಅಪಾರ್ಟ್‌ಮೆಂಟ್ ಸಮುಚ್ಚಯದಿಂದ ನಿರ್ಮಿಸಲಾಗಿದ್ದ 300 ಮೀಟರ್ ಉದ್ದದ ಕಾಂಪೌಂಡ್ ಗೋಡೆಯನ್ನು ಪಾಲಿಕೆ ಅಧಿಕಾರಿಗಳು ಕೆಡವಿ ಹಾಕಿದ್ದಾರೆ.

ಮಹದೇವಪುರ ವಲಯದ 289 ಸರ್ವೆ ನಂಬರ್‌ಗಳಲ್ಲಿ ಅತಿಕ್ರಮಣ ಕಂಡುಬಂದಿದ್ದು, ಈ ಪೈಕಿ 81 ಸರ್ವೆ ನಂಬರ್‌ಗಳಲ್ಲಿ ಈವರೆಗೆ ಒತ್ತುವರಿ ತೆರವುಗೊಳಿಸಲಾಗಿದೆ. 157 ಸರ್ವೆ ನಂಬರ್‌ಗಳಲ್ಲಿ ಮರು ಸಮೀಕ್ಷೆ ನಡೆಸಿ 28 ಸರ್ವೆ ನಂಬರ್‌ಗಳ ವಿರುದ್ಧ ಆದೇಶ ಹೊರಡಿಸಲಾಗಿದೆ. ತಹಶೀಲ್ದಾರ್ ನಿರ್ದೇಶನದ ಮೇರೆಗೆ ಅಧಿಕಾರಿಗಳು ತೆರವು ಕಾರ್ಯಾಚರಣೆ ಆರಂಭಿಸಿದ್ದಾರೆಂದು ಬಿಬಿಎಂಪಿ ಮಾಹಿತಿ ನೀಡಿದೆ.

ಬಿಬಿಎಂಪಿಯ ಎಸ್‌ಡಬ್ಲ್ಯುಡಿ ಇಲಾಖೆಯು ಪೊಲೀಸ್ ಭದ್ರತೆಯೊಂದಿಗೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಡೆಸುತ್ತಿದೆ. ಕಾರ್ಯಾಚರಣೆ ವೇಳೆ ಬಿಬಿಎಂಪಿ ಮಾರ್ಷಲ್‌ಗಳನ್ನು ನಿಯೋಜಿಸುತ್ತಿದೆ,

ಈ ನಡುವೆ ಮಹದೇವಪುರ ವಲಯದ ಕೆಆರ್ ಪುರಂ ವ್ಯಾಪ್ತಿಯ ನಿವಾಸಿಗಳು ಕಾರ್ಯಾಚರಣೆಯನ್ನು ಕೈಬಿಡುವಂತೆ ಅಧಿಕಾರಿಗಳಿಗೆ ಮನವಿಮಾಡಿಕೊಂಡಿದ್ದಾರೆ.

ಸ್ಥಳಗಳ ಆಯ್ಕೆ ಮಾಡಿಕೊಂಡು ಒತ್ತುವರಿ ತೆರವು ಕಾರ್ಯಾಚರಣೆ ಮಾಡುತ್ತಿಲ್ಲ. ರಾಜಕಾಲುವೆಗಳ ಎಲ್ಲಾ ಅತಿಕ್ರಮಣಗಳನ್ನು ತೆರವುಗೊಳಿಸುವವರೆಗೆ ಈ ಕಾರ್ಯಾಚರಣೆಯನ್ನು ಕೈಬಿಡಲು ಸಾಧ್ಯವಿಲ್ಲ. ಕೆಲ ಮಾಲೀಕರು ನ್ಯಾಯಾಲಯದ ಮೆಟ್ಟಿಲೇರಿದ ಕಾರಣ ಹಾಗೂ ಚರಂಡಿಗಳ ಮರು ಸಮೀಕ್ಷೆ ನಡೆಸಬೇಕಿದ್ದ ಕಾರಣ ಕೆಲಕಾಲ ಕಾರ್ಯಾಚರಣೆ ಸ್ಥಗಿತಗೊಂಡಿತ್ತಷ್ಟೇ. ಮರು ಸಮೀಕ್ಷೆ ಮತ್ತು ತಹಶೀಲ್ದಾರ್ ಅವರ ವಿಚಾರಣೆ ಮತ್ತು ಅಗತ್ಯ ಆದೇಶಗಳ ಆಧಾರದ ಮೇಲೆ ಇದೀಗ ಮರಳಿ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ. ಎಂದು ಬಿಬಿಎಂಪಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com