ಮತ್ಸ್ಯ ಪ್ರಿಯರಿಗೊಂದು ಸಿಹಿ ಸುದ್ದಿ: ಶೀಘ್ರದಲ್ಲೇ ಬೆಂಗಳೂರಿನಲ್ಲಿ 100 ರೂ. ಗೆ ಸಿಗಲಿದೆ 'ಫುಲ್ ಫಿಶ್ ಮೀಲ್ಸ್'!
ಮೀನು ಪ್ರಿಯರಿಗೆ ಇಲ್ಲಿದೆ ಸಿಹಿ ಸುದ್ದಿ. ಬೆಂಗಳೂರಿನಾದ್ಯಂತ 100 ಸ್ಥಳಗಳಲ್ಲಿ ಮೀನು ಕ್ಯಾಂಟೀನ್ ಆರಂಭಿಸಲು ಮೀನುಗಾರಿಕೆ ಇಲಾಖೆ ಮುಂದಾಗಿದೆ.
Published: 01st February 2023 08:35 AM | Last Updated: 01st February 2023 07:05 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಮೀನು ಪ್ರಿಯರಿಗೆ ಇಲ್ಲಿದೆ ಸಿಹಿ ಸುದ್ದಿ. ಬೆಂಗಳೂರಿನಾದ್ಯಂತ 100 ಸ್ಥಳಗಳಲ್ಲಿ ಮೀನು ಕ್ಯಾಂಟೀನ್ ಆರಂಭಿಸಲು ಮೀನುಗಾರಿಕೆ ಇಲಾಖೆ ಮುಂದಾಗಿದೆ.
ಈ ಕ್ಯಾಂಟೀನ್‌ಗಳಲ್ಲಿ ಸಂಪೂರ್ಣ ಮೀನಿನ ಊಟ ಸಿಗಲಿದ್ದು, ಫುಲ್ ಫಿಶ್ ಮೀಲ್ಸ್'ಗೆ 100 ರೂ. ನಿಗದಿಪಡಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಕ್ಯಾಂಟೀನ್ ನಲ್ಲಿ ಸೂಪ್, ಫಿಶ್ ಕರಿ, ಅನ್ನ ಮತ್ತು ಉಪ್ಪಿನಕಾಯಿ ಸ್ಟಾರ್ಟರ್‌ಗಳು ಸೇರಿದಂತೆ 24 ಬಗೆಯ ಮೀನಿನ ಭಕ್ಷ್ಯಗಳನ್ನು ಗ್ರಾಹಕರು ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ಮೀನುಗಾರಿಕಾ ಸಚಿವ ಎಸ್ ಅಂಗಾರ ಅವರು ಮಾತನಾಡಿ, ಬೆಂಗಳೂರಿನ ಪ್ರತಿ ವಾರ್ಡ್‌ನಲ್ಲಿ ಈ ಕ್ಯಾಂಟೀನ್ ಪ್ರಾರಂಭಿಸಲು ಚಿಂತನೆ ನಡೆಸಿದ್ದೇವೆ. ಮೊದಲಿಗೆ ನಗರದ 100 ಕಡೆ ಕ್ಯಾಂಟೀನ್ ಆರಂಭಿಸುತ್ತಿದ್ದೇವೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಹಯೋಗದಲ್ಲಿ ಮೀನುಗಳನ್ನು ಮಾರಾಟ ಮಾಡುವುದರ ಜೊತೆಗೆ ಊಟವನ್ನು ಒದಗಿಸುವ ಮಳಿಗೆಗಳನ್ನು ಸ್ಥಾಪಿಸುತ್ತಿದ್ದೇವೆಂದು ಹೇಳಿದ್ದಾರೆ.
ಈ ಮೀನಿನ ಊಟದ ಬೆಲೆಯನ್ನು ಎಲ್ಲಾ ಸ್ಥಳಗಳಲ್ಲಿ ಏಕರೂಪವಾಗಿಡಲು ಕೇಂದ್ರೀಕೃತ ಅಡುಗೆ ಕೋಣೆಯನ್ನು ಸ್ಥಾಪಿಸಲಾಗುತ್ತಿದ್ದು, ಅಲ್ಲಿಂದ ಈ ಕ್ಯಾಂಟೀನ್‌ಗಳಿಗೆ ಆಹಾರವನ್ನು ಸರಬರಾಜು ಮಾಡಲಾಗುತ್ತದೆ. ರಾಜ್ಯ ಸರ್ಕಾರವೂ ಊಟದ ಬೆಲೆಯನ್ನು ಇನ್ನೂ ನಿಗದಿ ಮಾಡಿಲ್ಲ. ಪ್ರಸ್ತುತ ಕ್ಯಾಂಟೀನ್‌ಗಳ ಸ್ಥಾಪಿಸುವ ಸ್ಥಳಗಳನ್ನು ಅಂತಿಮಗೊಳಿಸುತ್ತಿದ್ದೇವೆ. ಈ ಉಪಕ್ರಮವು ಮೀನುಗಾರರಿಗೆ ಉತ್ತೇಜನವನ್ನು ನೀಡುತ್ತದೆ. ಜನರು ಮೀನಿನ ಊಟವನ್ನು ಹೆಚ್ಚು ಸೇವಿಸಲು ಆರಂಭಿಸಿದರೆ, ಮೀನಿಗೆ ಬೇಡಿಕೆ ಹೆಚ್ಚಾಗುತ್ತದೆ. ಸಮುದ್ರಾಹಾರ ಸೇವಿಸುವವರ ಸಂಖ್ಯೆ ಹೆಚ್ಚಿರುವುದರಿಂದ ಬೆಂಗಳೂರಿನಂತಹ ನಗರವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ರಾಜ್ಯದ ಮೊದಲ ಸುರಂಗ ಅಕ್ವೇರಿಯಂ ಕಬ್ಬನ್ ಪಾರ್ಕ್ ನಲ್ಲಿ ಸ್ಥಾಪನೆ!
ಈ ಉಪಕ್ರಮದ ಮೂಲಕ ಇಲಾಖೆಯು ಯುವಕರಿಗೆ ಉದ್ಯೋಗ ಸೃಷ್ಟಿಸುವತ್ತ ಗಮನಹರಿಸುತ್ತಿದೆ. ಇದನ್ನು ಖಾಸಗಿ ಸಾರ್ವಜನಿಕ ಸಹಭಾಗಿತ್ವದ (ಪಿಪಿಪಿ) ಮಾದರಿಯಲ್ಲಿ ನಡೆಸಬೇಕೆ ಅಥವಾ ಸರ್ಕಾರದ ಅನುದಾನದ ಮೂಲಕ ನಡೆಸಬೇಕೆ ಎಂಬುದರ ಕುರಿತು ಚಿಂತನೆಗಳು ನಡೆಯುತ್ತಿವೆ. ಇತರ ಜಿಲ್ಲೆಗಳಲ್ಲಿಯೂ ಇಂತಹ ಕ್ಯಾಂಟೀನ್‌ಗಳನ್ನು ಸ್ಥಾಪಿಸುವ ಯೋಜನೆಯನ್ನು ರಾಜ್ಯ ಸರ್ಕಾರ ಹೊಂದಿದೆ. ಬೆಂಗಳೂರಿನಲ್ಲಿ ಕ್ಯಾಂಟೀನ್ ಆರಂಭಿಸಿದ ಬಳಿಕ, ಇತರೆ ಪ್ರದೇಶಗಳಲ್ಲಿ ಇದೇ ರೀತಿಯ ಕ್ಯಾಂಟೀನ್‌ಗಳನ್ನು ಆರಂಭಿಸಲಾಗುತ್ತದದೆ ಎಂದು ಮಾಹಿತಿ ನೀಡಿದ್ದಾರೆ.
ಇಲಾಖೆಯು ಈಗಾಗಲೇ ಬೆಂಗಳೂರಿನ ಕಬ್ಬನ್ ಪಾರ್ಕ್, ಬಳ್ಳಾರಿ, ಶಿವಮೊಗ್ಗ ಮತ್ತು ಮಂಗಳೂರು ಸೇರಿದಂತೆ ಕೆಲವು ಸ್ಥಳಗಳಲ್ಲಿ ಗಣಿತ ದರ್ಶಿನಿ ರೆಸ್ಟೋರೆಂಟ್‌ಗಳನ್ನು ನಡೆಸುತ್ತಿದ್ದು, ಪ್ರಸ್ತುತ ಕಬ್ಬನ್ ಪಾರ್ಕ್‌ನಲ್ಲಿರುವ ಕ್ಯಾಂಟೀನ್‌ನಲ್ಲಿ ಒಂದು ಮೀನಿನ ಊಟಕ್ಕೆ ರೂ.130 ನಿಗದಿಪಡಿಸಲಾಗಿದೆ.