ಭೂಕಂಪ ಪೀಡಿತ ಟರ್ಕಿಯಲ್ಲಿ ಬೆಂಗಳೂರು ಮೂಲದ ಟೆಕಿ ನಾಪತ್ತೆ: ಕುಟುಂಬಸ್ಥರಲ್ಲಿ ಆತಂಕ, ಸಾವಿನ ಸಂಖ್ಯೆ 22 ಸಾವಿರಕ್ಕೆ ಏರಿಕೆ

ಭೂಕಂಪ ಪೀಡಿತ ಟರ್ಕಿಗೆ  ಔದ್ಯೋಗಿಕ ಕೆಲಸ ನಿಮಿತ್ತ ಹೋಗಿದ್ದ ಬೆಂಗಳೂರಿನ ಎಂಜಿನಿಯರ್ ವಿಜಯ್‌ಕುಮಾರ್ (36 ವರ್ಷ) ಎಂಬುವವರು ನಾಪತ್ತೆಯಾಗಿದ್ದಾರೆ.
ಟರ್ಕಿಯಲ್ಲಿ ಬೆಂಗಳೂರು ಮೂಲದ ಟೆಕಿ ನಾಪತ್ತೆ
ಟರ್ಕಿಯಲ್ಲಿ ಬೆಂಗಳೂರು ಮೂಲದ ಟೆಕಿ ನಾಪತ್ತೆ

ಬೆಂಗಳೂರು: ಭೂಕಂಪ ಪೀಡಿತ ಟರ್ಕಿಗೆ  ಔದ್ಯೋಗಿಕ ಕೆಲಸ ನಿಮಿತ್ತ ಹೋಗಿದ್ದ ಬೆಂಗಳೂರಿನ ಎಂಜಿನಿಯರ್ ವಿಜಯ್‌ಕುಮಾರ್ (36 ವರ್ಷ) ಎಂಬುವವರು ನಾಪತ್ತೆಯಾಗಿದ್ದಾರೆ.

ಪೀಣ್ಯದಲ್ಲಿರುವ ಆಮ್ಲಜನಕ ಹಾಗೂ ನೈಟ್ರೋಜನ್ ತಯಾರಿಕೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವಿಜಯ್‌ಕುಮಾರ್, ಕಂಪನಿಯ ಹೊಸ ಘಟಕ ಸ್ಥಾಪನೆ ಕೆಲಸಕ್ಕಾಗಿ ಟರ್ಕಿಗೆ ಹೋಗಿದ್ದರು. ಇದೇ ಟರ್ಕಿಯಲ್ಲಿ ಭೂಕಂಪ ಸಂಭವಿಸಿದ್ದು, ವಿಜಯ್‌ಕುಮಾರ್ ಎಲ್ಲಿದ್ದಾರೆಂಬ ಮಾಹಿತಿ ಇದುವರೆಗೂ ಲಭ್ಯವಾಗಿಲ್ಲ.

ಈ ಬಗ್ಗೆ ಪತ್ರಿಕೆಯೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರಮೇಶ್ ಸಿದ್ದಪ್ಪ ಅವರು, 'ಡೆಹ್ರಾಡೂನ್‌ನ ವಿಜಯ್‌ಕುಮಾರ್, ಹಲವು ವರ್ಷಗಳಿಂದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಉತ್ತಮ ಎಂಜಿನಿಯರ್ ಆಗಿದ್ದರು. ಹೊಸ ಘಟಕಕ್ಕೆ ಅಗತ್ಯವಿದ್ದ ಸಾಮಗ್ರಿಗಳನ್ನು ನಾಲ್ಕು ತಿಂಗಳ ಹಿಂದೆಯೇ ಕಳುಹಿಸಲಾಗಿತ್ತು. ಘಟಕ ಸ್ಥಾಪನೆ ಕೆಲಸಕ್ಕಾಗಿ ವಿಜಯ್, ಜನವರಿ 25ರಂದು ಟರ್ಕಿಗೆ ಹೋಗಿದ್ದರು’ ಎಂದು ಹೇಳಿದ್ದಾರೆ.

ಅಂತೆಯೇ ‘ವಿಜಯ್‌ಕುಮಾರ್ ಉಳಿದುಕೊಂಡಿದ್ದ ಟರ್ಕಿಯ ಹೋಟೆಲ್ ಸಂಪೂರ್ಣ ನೆಲಸಮವಾಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆದಿರುವ ಮಾಹಿತಿ ಇದೆ. ಆದರೆ, ವಿಜಯ್‌ಕುಮಾರ್ ಎಲ್ಲಿದ್ದಾರೆಂಬ ಮಾಹಿತಿ ಇದುವರೆಗೂ ಗೊತ್ತಾಗಿಲ್ಲ. ಘಟಕ ಸ್ಥಾಪನೆಗೆ ಕೈಜೋಡಿಸಿದ್ದ ಟರ್ಕಿಯ ಕಂಪನಿಯ ಕಟ್ಟಡವೂ ನೆಲಸಮವಾಗಿದೆ. ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ವಿಜಯ್‌ಕುಮಾರ್ ನಾಪತ್ತೆ ಬಗ್ಗೆ ಭಾರತೀಯ ರಾಯಭಾರಿ ಕಚೇರಿಗೂ ಪತ್ರ ಬರೆಯಲಾಗಿದೆ’ ಎಂದು ತಿಳಿಸಿದರು.

ಫೆ. 5ರಂದು ಕೊನೆ ಕರೆ
ಟರ್ಕಿಯಿಂದ ಫೆ. 5ರಂದು ಕುಟುಂಬದವರಿಗೆ ಕರೆ ಮಾಡಿದ್ದ ವಿಜಯ್‌ಕುಮಾರ್, ಕುಶಲೋಪರಿ ವಿಚಾರಿಸಿದ್ದರು. ವಿಜಯ್‌ಕುಮಾರ್ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಅಣ್ಣ ಅರುಣ್‌ಕುಮಾರ್, ‘ನನ್ನ ತಮ್ಮ ವಿಜಯ್‌ಕುಮಾರ್ ಬದುಕಿ ಬಂದರೆ ಸಾಕು. ಆತ ಯಾವುದೇ ಸ್ಥಿತಿಯಲ್ಲಿದ್ದರೂ ಆರೈಕೆ ಮಾಡುತ್ತೇವೆ’ ಎಂದಿದ್ದಾರೆ.

ಆದಾನಾದಲ್ಲಿ ಕೇಂದ್ರ ಸರ್ಕಾರದಿಂದ ಕಂಟ್ರೋಲ್ ರೂಂ ಸೇವೆ
ಇನ್ನು ಟರ್ಕಿಯಲ್ಲಿ ಸಿಲುಕಿರುವ ಭಾರತೀಯರ ರಕ್ಷಣಾರ್ತವಾಗಿ ಕೇಂದ್ರ ಸರ್ಕಾರ ಟರ್ಕಿಯ ಅದಾನದಲ್ಲಿ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದ್ದು, ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ವಿದೇಶಾಂಗ ಇಲಾಖೆಯ ಕಾರ್ಯದರ್ಶಿ (ಪಶ್ಚಿಮ) ಸಂಜಯ್ ವರ್ಮಾ, 'ನಾವು ಟರ್ಕಿಯ ಅದಾನದಲ್ಲಿ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದ್ದೇವೆ. ಹತ್ತು ಭಾರತೀಯರು ಭೂಕಂಪನ ಪೀಡಿತ ಪ್ರದೇಶಗಳ ದೂರದ ಭಾಗಗಳಲ್ಲಿ ಸಿಲುಕಿಕೊಂಡಿದ್ದಾರೆ. ಆದರೆ ಅವರೆಲ್ಲರೂ ಸುರಕ್ಷಿತವಾಗಿದ್ದಾರೆ. ಟರ್ಕಿಗೆ ವ್ಯಾಪಾರ ಭೇಟಿಗೆ ಬಂದಿದ್ದ ಒಬ್ಬ ಭಾರತೀಯ ಪ್ರಜೆ ನಾಪತ್ತೆಯಾಗಿದ್ದಾರೆ. ಕಳೆದ ಎರಡು ದಿನಗಳಿಂದ ಈತನ ಪತ್ತೆಯಾಗಿಲ್ಲ. ನಾವು ಅವರ ಕುಟುಂಬ ಮತ್ತು ಬೆಂಗಳೂರಿನಲ್ಲಿರುವ ಕಂಪನಿಯೊಂದಿಗೆ ಸಂಪರ್ಕದಲ್ಲಿದ್ದೇವೆ" ಎಂದು ಹೇಳಿದ್ದಾರೆ.

ಸಾವಿನ ಸಂಖ್ಯೆ 22 ಸಾವಿರಕ್ಕೇರಿಕೆ
ಏತನ್ಮಧ್ಯೆ ಭೂಕಂಪ ಪೀಡಿತ ಟರ್ಕಿಯಲ್ಲಿ ಕಟ್ಟಡಗಳ ಅವಶೇಷಗಳ ತೆರವು ಕಾರ್ಯಾಚರಣೆ ಸಮರೋಪಾದಿಯಲ್ಲಿ ನಡೆಯುತ್ತಿದ್ದು, ಕಟ್ಟಡಗಳ ಅವಶೇಷಗಳಡಿಯಲ್ಲಿ ಪತ್ತೆಯಾಗುತ್ತಿರುವ ಮೃತದೇಹಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಮೂಲಗಳ ಪ್ರಕಾರ ಈ ವರೆಗೂ ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೂಕಂಪನದಲ್ಲಿ 22 ಸಾವಿರಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ.. ಟರ್ಕಿಯಲ್ಲಿ 17,674 ಜನರು ಸಾವನ್ನಪ್ಪಿದ್ದು, 72,879 ಜನರು ಗಾಯಗೊಂಡಿದ್ದಾರೆ. ಇತ್ತ ಸಿರಿಯಾದಲ್ಲಿ ಕನಿಷ್ಠ 3,377 ಮಂದಿ ಸಾವಿಗೀಡಾಗಿದ್ದು, ಈ ಪೈಕಿ 2,030 ಬಂಡುಕೋರರ ಹಿಡಿತದಲ್ಲಿರುವ ವಾಯುವ್ಯ ಪ್ರದೇಶಗಳಲ್ಲಿ ಮತ್ತು 1,347 ಸರ್ಕಾರಿ ನಿಯಂತ್ರಿತ ಪ್ರದೇಶಗಳಲ್ಲಿ ಸಂಭವಿಸಿದ ಭೂಕಂಪನದಲ್ಲಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com