'ಆಪರೇಷನ್ ದೋಸ್ತ್': ಭೂಕಂಪ ಪೀಡಿತ ಟರ್ಕಿ, ಸಿರಿಯಾಗೆ ಭಾರತದ ಸರ್ವಾಂಗೀಣ ನೆರವು- ಸಚಿವ ಜೈಶಂಕರ್

ಭೂಕಂಪ ಪೀಡಿತ ಟರ್ಕಿ, ಸಿರಿಯಾ ನೆರವು ನೀಡುವ ಉದ್ದೇಶದಿಂದ ಭಾರತ ಸರ್ಕಾರ ಆರಂಭಿಸಿರುವ “ಆಪರೇಷನ್ ದೋಸ್ತ್” ಕಾರ್ಯಾಚರಣೆ ಅಡಿಯಲ್ಲಿ ಫೀಲ್ಡ್ ಆಸ್ಪತ್ರೆ, ಔಷಧಗಳು, ರಕ್ಷಣಾ ತಂಡಗಳನ್ನು ರವಾನಿಸುತ್ತಿದೆ ಎಂದು ಕೇಂದ್ರ ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.
ಆಪರೇಷನ್ ದೋಸ್ತ್ ಕಾರ್ಯಾಚರಣೆ
ಆಪರೇಷನ್ ದೋಸ್ತ್ ಕಾರ್ಯಾಚರಣೆ

ನವದೆಹಲಿ: ಭೂಕಂಪ ಪೀಡಿತ ಟರ್ಕಿ, ಸಿರಿಯಾ ನೆರವು ನೀಡುವ ಉದ್ದೇಶದಿಂದ ಭಾರತ ಸರ್ಕಾರ ಆರಂಭಿಸಿರುವ “ಆಪರೇಷನ್ ದೋಸ್ತ್” ಕಾರ್ಯಾಚರಣೆ ಅಡಿಯಲ್ಲಿ ಫೀಲ್ಡ್ ಆಸ್ಪತ್ರೆ, ಔಷಧಗಳು, ರಕ್ಷಣಾ ತಂಡಗಳನ್ನು ರವಾನಿಸುತ್ತಿದೆ ಎಂದು ಕೇಂದ್ರ ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.

ಈ ಕುರಿತು ಬುಧವಾರ ಟ್ವೀಟ್ ಮಾಡಿ ಮಾಹಿತಿ ನೀಡಿರುವ ಜೈಶಂಕರ್ ಅವರು, “ಆಪರೇಷನ್ ದೋಸ್ತ್” ಕಾರ್ಯಾಚರಣೆ ಅಡಿಯಲ್ಲಿ ಸಿರಿಯಾ ಮತ್ತು ಟರ್ಕಿಗೆ ಭಾರತ ಸರ್ಕಾರ ಫೀಲ್ಡ್ ಆಸ್ಪತ್ರೆ, ಔಷಧಗಳು, ರಕ್ಷಣಾ ತಂಡಗಳು ಸೇರಿದಂತೆ ಸರ್ವಾಂಗೀಣ ನೆರವು ನೀಡುತ್ತಿದೆ. ಭೂಕಂಪದಿಂದ ಧರೆಗುರುಳಿದ ಕಟ್ಟಡಗಳ ಅಡಿಯಲ್ಲಿ ಸಿಲುಕಿರುವವರನ್ನು ರಕ್ಷಿಸಲು ರಕ್ಷಣಾ ಸಿಬ್ಬಂದಿ ಹರಸಾಹಸ ಪಡುತ್ತಿದ್ದು, ಈ ಕಾರ್ಯಾಚರಣೆಯಲ್ಲಿ ಭಾರತೀಯ ರಕ್ಷಣಾ ಪಡೆಗಳೂ ಕೂಡ ಕೈ ಜೋಡಿಸಲಿವೆ ಎಂದು ಹೇಳಿದ್ದಾರೆ.

ಟರ್ಕಿ ಮತ್ತು ಸಿರಿಯಾದಲ್ಲಿ ಸೋಮವಾರ ಸಂಭವಿಸಿದ ಪ್ರಬಲ ಭೂಕಂಪದಿಂದ 9 ಸಾವಿರಕ್ಕೂ ಅಧಿಕ ಜನರು ಮೃತಪಟ್ಟಿದ್ದು ಮೃತರ ಸಂಖ್ಯೆ 10 ಸಾವಿರ ಗಡಿ ದಾಟುವ ಆತಂಕ ಎದುರಾಗಿದೆ. ಟರ್ಕಿ ಮತ್ತು ಸಿರಿಯಾ ಉಭಯ ದೇಶಗಳಲ್ಲಿ ಸಾವು– ನೋವಿನ ಸಂಖ್ಯೆ ಹೆಚ್ಚಾಗುತ್ತಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ. 

ಅಧಿಕೃತ ಮೂಲಗಳ ಪ್ರಕಾರ ಟರ್ಕಿಯಲ್ಲಿ ಇಲ್ಲಿಯವರೆಗೂ 5,894 ಜನರು ಮೃತಪಟ್ಟಿದ್ದು, 34,810 ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ಟರ್ಕಿ ಉಪಾಧ್ಯಕ್ಷ ಮಾಹಿತಿ ನೀಡಿದ್ದಾರೆ. ಇನ್ನು ಸಿರಿಯಾದಲ್ಲಿ ಸಾವಿನ ಸಂಖ್ಯೆ 2,032ಕ್ಕೆ ಏರಿಕೆಯಾಗಿದ್ದು, 2600ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಸಿರಿಯಾ ಅಧಿಕಾರಿಗಳು ಹೇಳಿದ್ದಾರೆ. ಆದರೆ ಈ ಅಂಕಿ ಸಂಖ್ಯೆಗಳು ಗ್ರೌಂಡ್ ರಿಪೋರ್ಟ್ ಅಂಕಿಸಂಖ್ಯೆಗಳಿಗಿಂತ 5 ರಿಂದ 6 ಪಟ್ಟು ಕಡಿಮೆಯಾಗಿದ್ದು, ಸಾವಿಗೀಡಾದವರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ ಎಂದು ರಕ್ಷಣಾ ಪಡೆ ಮೂಲಗಳು ತಿಳಿಸಿವೆ.

ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಬಾಗ್ಚಿ ಅವರು, '6 ಟನ್‌ಗೂ ಹೆಚ್ಚು ತುರ್ತು ಪರಿಹಾರ ನೆರವು ಸಿರಿಯಾವನ್ನು ತಲುಪಿದೆ. ಡಮಾಸ್ಕಸ್ ವಿಮಾನ ನಿಲ್ದಾಣದಲ್ಲಿ ಸ್ಥಳೀಯ ಆಡಳಿತ ಮತ್ತು ಪರಿಸರದ ಉಪ ಸಚಿವ ಮೌತಾಜ್ ಡೌಜಿ ಅವರು ಇವುಗಳನ್ನು ಸ್ವೀಕರಿಸಿದ್ದಾರೆ. 3 ಟ್ರಕ್-ಲೋಡ್ ರಕ್ಷಣಾತ್ಮಕ ಉಪಕರಣಗಳು, ತುರ್ತು ಬಳಕೆಯ ಔಷಧಗಳು, ಇಸಿಜಿ ಯಂತ್ರಗಳು ಮತ್ತು ಇತರ ವೈದ್ಯಕೀಯ ವಸ್ತುಗಳನ್ನು ಇದು ಒಳಗೊಂಡಿದೆ' ಎಂದು ಟ್ವೀಟ್ ಮಾಡಿದ್ದಾರೆ.

ಅಸ್ಥಿರ ಕಟ್ಟಡಗಳು ಮತ್ತು ಕೊರೆಯುವ ಚಳಿ, ರಕ್ಷಣಾ ಕಾರ್ಯಕ್ಕೆ ಸವಾಲಾಗಿದ್ದು, ಉಭಯ ದೇಶಗಳಲ್ಲಿ 24,400ಕ್ಕೂ ಹೆಚ್ಚು ತುರ್ತುಸೇವಾ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಸಿರಿಯಾದ ಅಲೆಪ್ಪೊ ಮತ್ತು ಹಮಾ ನಗರ ಹಾಗೂ ಟರ್ಕಿಯ ದಿಯಾರ್‌ ಬಕೀರ್‌ವರೆಗೆ ಸಾವಿರಾರು ಕಟ್ಟಡಗಳು ಕುಸಿದಿವೆ. ಟರ್ಕಿಯ ಗಡಿ ಪ್ರದೇಶದಲ್ಲಿ ಸುಮಾರು 6 ಸಾವಿರ ಕಟ್ಟಡಗಳು ನೆಲಸಮವಾಗಿವೆ. ಆಗ್ನೇಯದ ಹತ್ತು ಪ್ರಾಂತ್ಯಗಳಲ್ಲಿ ಮೂರು ತಿಂಗಳ ಕಾಲ ತುರ್ತು ಸ್ಥಿತಿಯನ್ನು ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಘೋಷಣೆ ಮಾಡಿದ್ದಾರೆ.

ಭಾರತ, ಅಮೆರಿಕ, ಬ್ರಿಟನ್‌ ಸೇರಿ ವಿಶ್ವದ ಹಲವು ರಾಷ್ಟ್ರಗಳು ಸಂತ್ರಸ್ತರ ನೆರವಿಗಾಗಿ ಔಷಧ, ಪರಿಹಾರ ಸಾಮಗ್ರಿ ಹಾಗೂ ವಿಪತ್ತು ಸ್ಪಂದನಾ ಪಡೆಗಳನ್ನು ಟರ್ಕಿಗೆ ಕಳುಹಿಸಿವೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com