ಏರೋ ಇಂಡಿಯಾ 2023ಕ್ಕೆ ಕ್ಷಣಗಣನೆ: 5 ದಿನಗಳ ಚಿತ್ತಾಕರ್ಷಕ ಪ್ರದರ್ಶನಕ್ಕಿಂದು ಪ್ರಧಾನಿ ಮೋದಿ ಚಾಲನೆ, ವಿಶ್ವೇಶ್ವರಯ್ಯಗೆ ಅರ್ಪಣೆ

ಭಾರತದ ವೈಮಾನಿಕ ಸಾಮರ್ಥ್ಯದ ಕುರುಹಾಗಿರುವ ಏರೋ ಇಂಡಿಯಾ ಶೋನ 14ನೇ ಆವೃತ್ತಿಗೆ ಕ್ಷಣಗಣನೆ ಆರಂಭವಾಗಿದ್ದು, 5 ದಿನಗಳ ಚಿತ್ತಾರ್ಷಕ ಪ್ರದರ್ಶಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ಚಾಲನೆ ನೀಡಲಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಭಾರತದ ವೈಮಾನಿಕ ಸಾಮರ್ಥ್ಯದ ಕುರುಹಾಗಿರುವ ಏರೋ ಇಂಡಿಯಾ ಶೋನ 14ನೇ ಆವೃತ್ತಿಗೆ ಕ್ಷಣಗಣನೆ ಆರಂಭವಾಗಿದ್ದು, 5 ದಿನಗಳ ಚಿತ್ತಾರ್ಷಕ ಪ್ರದರ್ಶಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ಚಾಲನೆ ನೀಡಲಿದ್ದಾರೆ.

ಏರೋ ಇಂಡಿಯಾ ಶೋ ಅನ್ನು ಸರ್ ಎಂ ವಿಶ್ವೇಶ್ವರಯ್ಯಗೆ ಸಮರ್ಪಣೆ ಮಾಡುತ್ತಿರುವುದು ಈ ಬಾರಿಯ ವಿಶೇಷವಾಗಿದೆ. ಮೋಕ್ಷಗುಂಡಂ ವಿಶ್ವೇಶ್ವರಯ್ಯ ಭಾರತ ಕಂಡ ಅತ್ಯುತ್ತಮ ಎಂಜಿನಿಯರುಗಳಲ್ಲೊಬ್ಬರು. ಸ್ವಾತಂತ್ರ್ಯಕ್ಕೂ ಮುನ್ನ ಹಲವು ಕೈಗಾರಿಕೆಗಳನ್ನು ಅವರು ನಿರ್ಮಿಸಿದ್ದರು. ಅವರ ಪ್ರೇರಣೆಯಲ್ಲಿ ಈ ಬಾರಿ ಸ್ವಾವಲಂಬಿ ಭಾರತ ಮತ್ತು ಭವಿಷ್ಯದ ರೆಕ್ಕೆ ಥೀಮ್​ನಲ್ಲಿ ಏರೋ ಇಂಡಿಯಾ ಶೋನ ಪ್ರದರ್ಶನ ಸಾಗಲಿದೆ.

ಕಳೆದ ರಾತ್ರಿ ರಾತ್ರಿ‌ ಬೆಂಗಳೂರಿಗೆ ಆಗಮಿಸಿರುವ ಪ್ರಧಾನಿ ಮೋದಿಯವರು ರಾಜಭವನದಲ್ಲಿ ತಂಗಿದ್ದು, ಇಂದು ಬೆಳಗ್ಗೆ 8.50ಕ್ಕೆ ರಾಜಭವನದಿಂದ ಹೊರಟು ರಸ್ತೆ ಮಾರ್ಗವಾಗಿ ಮೇಖ್ರಿ ರಸ್ತೆಯಲ್ಲಿರುವ ಹೆಚ್'ಕ್ಯೂಟಿಸಿ ಹೆಲಿಪ್ಯಾಡ್‌ಗೆ ಬರಲಿದ್ದಾರೆ.

8.55ಕ್ಕೆ ಹೆಚ್'ಕ್ಯೂಟಿಸಿ ತಲುಪಿ ಅಲ್ಲಿಂದ 9 ಗಂಟೆಗೆ ಎಂಐ-17 ಹೆಲಿಕಾಪ್ಟರ್ ಮೂಲಕ ಹೊರಟು 9.20ಕ್ಕೆ ಯಲಹಂಕ ಎಎಫ್ಎಸ್‌ಗೆ ತಲುಪಲಿದ್ದಾರೆ. 9.25ಕ್ಕೆ ರಸ್ತೆ ಮಾರ್ಗವಾಗಿ ಕಾರ್ಯಕ್ರಮಕ್ಕೆ ಆಗಮಿಸಿ, 9.30ಕ್ಕೆ ಸರಿಯಾಗಿ ಏರೋ ಇಂಡಿಯಾ ಪ್ರದರ್ಶನ- 2023 ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ನಂತರ 9.30ರಿಂದ 11.30ರ ವರೆಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಪ್ರದರ್ಶನವನ್ನು ವೀಕ್ಷಿಸಲಿದ್ದು, 11.35ಕ್ಕೆ ರಸ್ತೆ ಮಾರ್ಗವಾಗಿ‌ ತೆರಳಿ 11.40ಕ್ಕೆ ಯಲಹಂಕ ಎಎಫ್ಎಸ್‌ಗೆ ಬಂದು 11.45ಕ್ಕೆ ವಿಶೇಷ ವಿಮಾನ ಮೂಲಕ ತ್ರಿಪುರಾಗೆ ಪ್ರಯಾಣ ಬೆಳೆಸಲಿದ್ದಾರೆ.

ಆವೃತ್ತಿಯಿಂದ ಆವೃತ್ತಿಗೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿರುವ ಏರೋ ಇಂಡಿಯಾ ಈ ಬಾರಿಯೂ ತನ್ನ ಪ್ರದರ್ಶನ ವ್ಯಾಪ್ತಿಯನ್ನು ಶೇ.3ರಷ್ಟು ವಿಸ್ತಾರಗೊಳಿಸಿಕೊಂಡಿದೆ. ಹೀಗಾಗಿ ಕಳೆದ ವರ್ಷಕ್ಕಿಂತ ರಕ್ಷಣಾ ಕ್ಷೇತ್ರಕ್ಕೆ ಹೆಚ್ಚು ಹೂಡಿಕೆ ಬರುವ ನಿರೀಕ್ಷೆಗಳಿವೆ.

2021ರಲ್ಲಿ ನಡೆದ 13ನೇ ಆವೃತ್ತಿಯ ವೈಮಾನಿಕ ಪ್ರದರ್ಶನದಲ್ಲಿ 600 ಮಂದಿ ಪ್ರದರ್ಶಕರು ಭಾಗವಹಿಸಿದ್ದರು. ಈ ಸಂಖ್ಯೆ ಪ್ರಸಕ್ತ ವೈಮಾನಿಕ ಪ್ರದರ್ಶನದಲ್ಲಿ 809ಕ್ಕೆ ಕಹೆಚ್ಚಳವಾಗಿದೆ. ಕಳೆದ ವರ್ಷ 55 ರಾಷ್ಟ್ರಗಳು ಮಾತ್ರ ಪ್ರದರ್ಶನದಲ್ಲಿ ಭಾಗವಹಿಸಿದ್ದು, ಪ್ರಸ್ತುತ 98 ರಾಷ್ಟ್ರಗಳು ತಮ್ಮ ಭಾಗವಹಿಸುವಿಕೆಯನ್ನು ಖಚಿತಪಡಿಸಿವೆ. ಒಟ್ಟು 251 ಒಡಂಬಡಿಕೆ ಸಿದ್ಧಗೊಂಡಿದ್ದು, ಕಳೆದ ವರ್ಷ 23 ಸಾವಿರ ಚದರ ಮೀಟರ್ ವ್ಯಾಪ್ತಿಗೆ ಸೀಮಿತವಾಗಿದ್ದ ಪ್ರದರ್ಶನ ವ್ಯವಸ್ಥೆಯು ಈ ಬಾರಿ 35,000 ಚದರ ಮೀಟರ್ ವ್ಯಾಪ್ತಿಗೆ ವಿಸ್ತರಿಸಿದೆ. ಎರಡು ಹೆಚ್ಚುವರಿ ಪ್ರದರ್ಶನ ಹಾಲ್ ಗಳನ್ನು ಸೇರಿಸಿದ್ದೇವೆಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಹೇಳಿದ್ದಾರೆ.

ಕಳೆದ ಬಾರಿ 67 ವಿಮಾನಗಳು ವೈಮಾನಿಕ ಪ್ರದರ್ಶನ ನೀಡಿದ್ದವು. ಈ ಬಾರಿ ಸಾರಂಗ್, ಸೂರ್ಯಕಿರಣ್ ವೈಮಾನಿಕ ಪ್ರದರ್ಶನ ತಂಡ, ಸುಖೋಯ್, ರಫೇಲ್, ತೇಜಸ್ ಸೇರಿದಂತೆ ಒಟ್ಟು 67 ವಿಮಾನಗಳು ಪ್ರದರ್ಶನ ನೀಡಲಿವೆ. ಉಳಿದಂತೆ ಸ್ವ್ಯಾಟಿಕ್ ಡಿಸ್ ಪ್ಲೇಯಲ್ಲಿ 36 ವಿಮಾನಗಳು ಪ್ರದರ್ಶನಗೊಳ್ಳಲಿವೆ.

ಭಾರತ ನಿರ್ಮಿತ ಯುದ್ಧ ವಿಮಾನ, ಹೆಲಿಕಾಪ್ಟರ್ ಹಾಗೂ ತಂತ್ರಜ್ಞಾನಗಳ ಪ್ರದರ್ಶನಕ್ಕಾಗಿಯೇ ಪ್ರತ್ಯೇಕವಾಗಿ ಇಂಡಿಯನ್ ಪೆವಿಲಿಯನ್ ನಿರ್ಮಾಣ ಮಾಡಲಾಗಿದೆ. ಇದರಲ್ಲಿ 115 ಕಂಪನಿಗಳು ಹಾಗೂ 227 ಉತ್ಪನ್ನಗಳ ಪ್ರದರ್ಶನ ನಡೆಯಲಿದೆ. ಇದರಲ್ಲಿ 149 ಉತ್ಪನ್ನಗಳನ್ನು ಭೌತಿಕವಾಗಿಯೇ ಪ್ರದರ್ಶಿಸಲಾಗುವುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com