114 ಖಾಸಗಿ ಶಾಲಾ ಕಾಲೇಜುಗಳಿಗೆ ಅನುದಾನಕ್ಕೆ ನಕಾರ: ರಾಜ್ಯ ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ಕಿಡಿ!
ರಾಜ್ಯದ ಆರ್ಥಿಕ ಸ್ಥಿತಿ ಸದೃಢವಾಗಿದೆ ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೇಳಿಕೆ ನಡುವೆಯೇ 114 ಖಾಸಗಿ ಶಾಲಾ-ಕಾಲೇಜುಗಳಿಗೆ ಅನುದಾನ ನೀಡುವ ಪ್ರಸ್ತಾವನೆಯನ್ನು ತಿರಸ್ಕರಿಸಿದ ರಾಜ್ಯ ಹಣಕಾಸು ಇಲಾಖೆ ವಿರುದ್ಧ ವಿಧಾನಪರಿಷತ್ ಸದಸ್ಯರು ತೀವ್ರವಾಗಿ ಕಿಡಿಕಾರಿದರು.
Published: 14th February 2023 01:11 PM | Last Updated: 14th February 2023 01:14 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ರಾಜ್ಯದ ಆರ್ಥಿಕ ಸ್ಥಿತಿ ಸದೃಢವಾಗಿದೆ ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೇಳಿಕೆ ನಡುವೆಯೇ 114 ಖಾಸಗಿ ಶಾಲಾ-ಕಾಲೇಜುಗಳಿಗೆ ಅನುದಾನ ನೀಡುವ ಪ್ರಸ್ತಾವನೆಯನ್ನು ತಿರಸ್ಕರಿಸಿದ ರಾಜ್ಯ ಹಣಕಾಸು ಇಲಾಖೆ ವಿರುದ್ಧ ವಿಧಾನಪರಿಷತ್ ಸದಸ್ಯರು ತೀವ್ರವಾಗಿ ಕಿಡಿಕಾರಿದರು.
1986-87ರಿಂದ 1994-95ರ ಅವಧಿಯಲ್ಲಿ ಆರಂಭವಾದ ಕನ್ನಡ ಮಾಧ್ಯಮ ಶಾಲೆಗಳು ನಿರಂತರವಾಗಿ ನಡೆಯುತ್ತಿದ್ದು, ಈ ಶಾಲೆಗಳಿಗೆ ಅನುದಾನ ನೀಡಬೇಕು ಎಂದು ಬಿಜೆಪಿಯ ಪುಟ್ಟಣ್ಣ, ಜೆಡಿಎಸ್‌ನ ಮರಿತಿಬ್ಬೇಗೌಡ, ಕಾಂಗ್ರೆಸ್‌ನ ನಾಗರಾಜ್ ಯಾದವ್ ಒತ್ತಾಯಿಸಿದರು. ಸದನದ ಬಾವಿಗಿಳಿದು ಪ್ರತಿಭಟಿಸಲು ಆರಂಭಿಸಿದರು.
ಮತ್ತೋರ್ವ ಬಿಜೆಪಿ ಸದಸ್ಯ ಎಸ್ ವಿ ಸಂಕನೂರು ಕೂಡ ವಾಗ್ದಾಳಿ ನಡೆಸಿ, ಹಣಕಾಸು ಇಲಾಖೆಯ ನಕಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಮಾಡಿದ ಅವಮಾನವಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಶಾಲೆಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ: ಸಿಎಂ ಬೊಮ್ಮಾಯಿ
ಶಿಕ್ಷಕರು, 29 ಗುಮಾಸ್ತರು ಸೇರಿದಂತೆ 547 ಸಿಬ್ಬಂದಿಗಳ ಹಿತ ಕಾಪಾಡಲು ವಿಫಲವಾದರೆ ಬಿಜೆಪಿಗೆ ಮುಖಭಂಗವಾಗಲಿದೆ ಎಂದು ಪುಟ್ಟಣ್ಣ ಅವರು ಹೇಳಿದರು.
ಬಜೆಟ್ ಭರವಸೆಗೆ ದ್ರೋಹ ಬಗೆದಿರುವ ಇಲಾಖೆಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಮುಖ್ಯ ಸಚೇತಕ ವೈ.ಎ.ನಾರಾಯಣಸ್ವಾಮಿ ಅವರು ಹೇಳಿದರು.
ಈ ವೇಳೆ ಮಾತನಾಡಿದ ಸದಸ್ಯರಾದ ಬೋಜೇಗೌಡ, ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಸಚಿವ ಬಿ.ಸಿ.ನಾಗೇಶ್, ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರು ಮುಖ್ಯಮಂತ್ರಿ ಬೊಮ್ಮಾಯಿ ಅವರ ಬಳಿ ಸಮಸ್ಯೆ ಮಾಹಿತಿ ನೀಡುವುದಾಗಿ ಭರವಸೆ ನೀಡಿದರು.
ಜನವರಿ 19, 2023 ರಂದು ನೀಡಿದ ಆದೇಶದಲ್ಲಿ ರಾಜ್ಯ ಹಣಕಾಸು ಇಲಾಖೆಯು, ಸರ್ಕಾರವು ಅನುದಾನಿತ ಶಾಲೆಗಳು ಮತ್ತು ಕಾಲೇಜುಗಳ ಸಿಬ್ಬಂದಿಯ ವೇತನಕ್ಕಾಗಿ 1,800 ಕೋಟಿ ರೂ.ಗೂ ಹೆಚ್ಚು ಖರ್ಚು ಮಾಡುತ್ತಿರುವುದರಿಂದ, ಆದಾಯ ಕೊರತೆ ಮತ್ತು ಆರ್ಥಿಕ ಮುಗ್ಗಟ್ಟು ಉಂಟಾಗಬಹುದು ಎಂದು ಹೇಳಿ, ಅನುದಾನವನ್ನು ತಿರಸ್ಕರಿಸಿತ್ತು.