ಸಿರಿಧಾನ್ಯಕ್ಕೆ ಉತ್ತೇಜನ: ಸರ್ಕಾರಿ ಸಭೆ, ಸಮಾರಂಭಗಳಲ್ಲಿ ಸಿರಿಧಾನ್ಯದ ತಿಂಡಿ ತಿನಿಸು, ಪಾನೀಯ ಬಳಸಲು ಸುತ್ತೋಲೆ

ಸಿರಿಧಾನ್ಯಗಳ ಕೃಷಿಯು ಕೇವಲ ಸಾಂಪ್ರದಾಯಿಕ ಕೃಷಿಯಲ್ಲ. ಇದೊಂದು ವಿಶೇಷ ಮತ್ತು ವಿಶಿಷ್ಟ ಕೃಷಿಯಾಗಿದೆ. ಈ ನಿಟ್ಟಿನಲ್ಲಿ  ಸಿರಿಧಾನ್ಯ ಬಳಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಸರ್ಕಾರದ ಎಲ್ಲಾ ಸಭೆ, ಸಮಾರಂಭಗಳಲ್ಲಿ ಸಿರಿಧಾನ್ಯ ಆಧಾರಿತ ತಿಂಡಿ ತಿನಿಸು, ಪಾನೀಯಗಳನ್ನು ಬಳಸುವಂತೆ ಸರ್ಕಾರ ಆದೇಶ ಹೊರಡಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸಿರಿಧಾನ್ಯಗಳ ಕೃಷಿಯು ಕೇವಲ ಸಾಂಪ್ರದಾಯಿಕ ಕೃಷಿಯಲ್ಲ. ಇದೊಂದು ವಿಶೇಷ ಮತ್ತು ವಿಶಿಷ್ಟ ಕೃಷಿಯಾಗಿದೆ. ಈ ನಿಟ್ಟಿನಲ್ಲಿ  ಸಿರಿಧಾನ್ಯ ಬಳಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಸರ್ಕಾರದ ಎಲ್ಲಾ ಸಭೆ, ಸಮಾರಂಭಗಳಲ್ಲಿ ಸಿರಿಧಾನ್ಯ ಆಧಾರಿತ ತಿಂಡಿ ತಿನಿಸು, ಪಾನೀಯಗಳನ್ನು ಬಳಸುವಂತೆ ಸರ್ಕಾರ ಆದೇಶ ಹೊರಡಿಸಿದೆ.

ಅಂತರಾಷ್ಟ್ರೀಯ ಸಿರಿಧಾನ್ಯಗಳ ವರ್ಷ 2023ನ್ನು ಅರ್ಥಪೂರ್ಣವಾಗಿ ಆಚರಿಸುವ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ಕಾರ್ಯದರ್ಶಿ ಶಿವಯೋಗಿ ಕಳಸದ ಅವರು, ಈ ಸುತ್ತೋಲೆಯನ್ನು ಹೊರಡಿಸಿದ್ದಾರೆಂದು ತಿಳಿದುಬಂದಿದೆ.

ಸುತ್ತೋಲೆಯಲ್ಲಿ ರಾಜ್ಯದ ಎಲ್ಲಾ ಇಲಾಖೆಗಳು ಹಾಗೂ ಎಲ್ಲಾ ಅಧೀನ ಕಛೇರಿಗಳಲ್ಲಿ ಮತ್ತು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್​​ ರಾಜ್ ಇಲಾಖಾ ವತಿಯಿಂದ ಎಲ್ಲಾ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ಗ್ರಾಮ ಪಂಚಾಯತ್‌ಗಳಲ್ಲಿ ಆಯೋಜಿಸಲಾಗುವ ಎಲ್ಲಾ ಸಭೆ, ಸಮಾರಂಭಗಳಲ್ಲಿ ಸಿರಿಧಾನ್ಯ ಆಧಾರಿತ ತಿಂಡಿ ತಿನಿಸು/ಪಾನೀಯಗಳನ್ನು ಬಳಸುವಂತೆ ಸೂಚನೆ ನೀಡಲಾಗಿದೆ.

ರಾಜ್ಯ ಸರ್ಕಾರದ ವಿವಿಧ ಯೋಜನೆಗಳಡಿಯಲ್ಲಿ ಸಿರಿಧಾನ್ಯಗಳ ಉತ್ಪಾದನೆ ಮತ್ತು ಬಳಕೆಯನ್ನು ಉತ್ತೇಜಿಸುವ ಸಲುವಾಗಿ ಹಾಗೂ ಸಿರಿಧಾನ್ಯಗಳಿಗೆ ದೇಶೀಯ ಮತ್ತು ಜಾಗತಿಕ ಬೇಡಿಕೆಯನ್ನು ಸೃಷ್ಟಿಸಲು ಮತ್ತು ಜನರಿಗೆ ಪೌಷ್ಟಿಕಾಂಶದ ಆಹಾರವನ್ನು ಒದಗಿಸಲು ಅಂತಾರಾಷ್ಟ್ರೀಯ ಸಿರಿಧಾನ್ಯಗಳು ವರ್ಷ ಎಂದು ಘೋಷಿಸಲು ವಿಶ್ವಸಂಸ್ಥೆಗೆ ಭಾರತ ಸರ್ಕಾರ 2021ರಲ್ಲಿ ಪುಸ್ತಾಪಿಸಿದ ಮೇರೆಗೆ ವಿಶ್ವಸಂಸ್ಥೆ '2023ನೇ ವರ್ಷವನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ' ಎಂದು ಘೋಷಿಸಿದೆ.

ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಹಯೋಗದಿಂದ ಸಿರಿಧಾನ್ಯಗಳ ಉತ್ಪಾದನೆ ಮತ್ತು ಬಳಕೆಗೆ ಹಲವಾರು ಕಾರ್ಯಕ್ರಮಗಳನ್ನು ಕೃಷಿ ಇಲಾಖೆ ರೂಪಿಸುತ್ತಿದೆ. 'ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ-2023'ವನ್ನು ಅರ್ಥಪೂರ್ಣವಾಗಿ ಹಾಗೂ ಯಶಸ್ವಿಯಾಗಿ ಆಚರಿಸುವ ಸಲುವಾಗಿ, ನಾಗರಿಕ ಚಳವಳಿ ಮೂಲಕ ಭಾರತೀಯ ಸಿರಿಧಾನ್ಯಗಳು ಹಾಗೂ ಇವುಗಳ ಆಧಾರಿತ ತಿಂಡಿ ತಿನಿಸು/ಖಾದ್ಯ, ಪಾನೀಯಗಳನ್ನು ದೇಶದಲ್ಲಿ, ಅಲ್ಲದೇ ವಿಶ್ವದಾದ್ಯಂತ ಪರಿಚಯಿಸಬೇಕಾಗಿರುವ ಅವಶ್ಯಕತೆ ಇದೆ.

ಸಿರಿಧಾನ್ಯ ಆಧಾರಿತ ತಿಂಡಿ ತಿನಿಸು/ಖಾದ್ಯ/ಪಾನೀಯಗಳು ಕೆಎಂಎಫ್​​ ಸಂಖ್ಯೆಯ ನಂದಿನಿ ಔಟ್​ಲೆಟ್​ (ಸಿರಿಧಾನ್ಯ ಮಾಲ್ಟ್, ಲಡ್ಡು, ಬರ್ಫಿ, ಬಿಸ್ಕತ್) ರಾಜ್ಯದ ಎಲ್ಲಾ ಕೃಷಿ ಸಂಬಂಧಿತ ವಿಶ್ವ ವಿದ್ಯಾಲಯಗಳ ಫುಡ್​ ಮತ್ತು ನ್ಯೂಟ್ರಿಷನ್​ ವಿಭಾಗ, ಸ್ವಸಹಾಯ ಸಂಘಗಳು ಹಾಗೂ ರಾಜ್ಯದ ಸಾವಯವ ರೈತರ ಪ್ರಾಂತೀಯ ಒಕ್ಕೂಟಗಳು, ಪ್ರಮುಖ ಪಟ್ಟಣಗಳ ಸೂಪರ್ ಮಾರುಕಟ್ಟೆಗಳು ಹಾಗೂ ನಿಯಮಿತವಾಗಿ ಆಯೋಜಿಸಲಾಗುವ ಸಾವಯವ ಸಂತೆಗಳಲ್ಲಿ ಲಭ್ಯವಿದೆ.

ಕೆಲ ದಿನಗಳ ಹಿಂದಷ್ಟೇ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ್ದ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು, ಕೃಷಿ ಇಲಾಖೆ, ಸಾರ್ವಜನಿಕ ಶಿಕ್ಷಣ, ಉನ್ನತ ಶಿಕ್ಷಣ, ಸಮಾಜ ಕಲ್ಯಾಣ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳು ಸೇರಿದಂತೆ ವಿವಿಧ ಇಲಾಖೆಗಳು ಸಿರಿಧಾನ್ಯವನ್ನು ದೊಡ್ಡ ರೀತಿಯಲ್ಲಿ ಉತ್ತೇಜಿಸಲು ಪ್ರಯತ್ನಗಳನ್ನು ನಡೆಸಲಿದೆ ಎಂದು ತಿಳಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com