ನಿರ್ವಹಣೆ ಕೊರತೆ; ರಾಜ್ಯದಲ್ಲಿನ ಬಹುತೇಕ ಶೌಚಾಲಯಗಳು ಬಳಕೆಗೆ ಯೋಗ್ಯವಾಗಿಲ್ಲ: ಸಿಎಂ ಬೊಮ್ಮಾಯಿ

ನಿರ್ವಹಣೆ ಕೊರತೆಯಿಂದ ರಾಜ್ಯದಲ್ಲಿ ಹಲವು ಸಾರ್ವಜನಿಕ ಶೌಚಾಲಯಗಳು ಬಳಕೆಗೆ ಯೋಗ್ಯವಾಗಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ಹೇಳಿದರು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ನಿರ್ವಹಣೆ ಕೊರತೆಯಿಂದ ರಾಜ್ಯದಲ್ಲಿ ಹಲವು ಸಾರ್ವಜನಿಕ ಶೌಚಾಲಯಗಳು ಬಳಕೆಗೆ ಯೋಗ್ಯವಾಗಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ಹೇಳಿದರು.

ವಿಧಾನಮಂಡಲದಲ್ಲಿ ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸಿದ ಸಿಎಂ ಬೊಮ್ಮಾಯಿ, ಎಲ್ಲಾ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ 250 ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದು, 2023ರ ಆಗಸ್ಟ್ 15ಕ್ಕೆ ನಿರ್ಮಾಣ ಕಾರ್ಯ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.

ಇದಕ್ಕೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಸರಕಾರ ನಾನಾ ಯೋಜನೆಗಳಡಿ ಶೌಚಾಲಯ ನಿರ್ಮಿಸಿಕೊಡುತ್ತಿದ್ದರೂ ನಿರ್ವಹಣೆಯ ನೈಜ ಸಮಸ್ಯೆ ಬಗೆಹರಿಯುತ್ತಿಲ್ಲ. ಯಾವುದೇ ಪಂಚಾಯಿತಿ ಅಥವಾ ಸಂಸ್ಥೆಗೆ ಜವಾಬ್ದಾರಿ ವಹಿಸಿದರೆ ಮಾತ್ರ ಇದರ ನಿರ್ವಹಣೆ ಸಾಧ್ಯ ಎಂದರು.

ಈ ವೇಳೆ ಮಾತನಾಡಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು, ಸಾರ್ವಜನಿಕ ಶೌಚಾಲಯಗಳ ನಿರ್ವಹಣೆಯೂ ಆಗುತ್ತಿಲ್ಲತ ನೀರಿನ ಅಲಭ್ಯತೆ ನಿರ್ವಹಣೆಗೆ ಪ್ರಮುಖ ಸಮಸ್ಯೆಯಾಗಿದೆ. ನೀರಿನ ಸಮಸ್ಯೆ ನೀಗಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಶೇ.90ಕ್ಕೂ ಹೆಚ್ಚು ಶೌಚಾಲಯಗಳಿಗೆ ಬೀಗ ಹಾಕಲಾಗಿದೆ. ಹೀಗಾಗಿ ಹೊಸ ಸಾರ್ವಜನಿಕ ಶೌಚಾಲಯಗಳ ನಿರ್ಮಾಣವನ್ನು ಸರ್ಕಾರ ನಿಲ್ಲಿಸಬೇಕೆಂದು ಒತ್ತಾಯಿಸಿದರು.

ಬಳಿಕ ಮಾತನಾಡಿದ ಮುಖ್ಯಮಂತ್ರಿಗಳು, ಆರಂಭದಲ್ಲಿ ಸರ್ಕಾರವು ‘ಸುಲಭ ಶೌಚಾಲಯ’ ಯೋಜನೆ ಮೂಲಕ ಸಮಸ್ಯೆಯನ್ನು ಪರಿಹರಿಸಲು ಸದುದ್ದೇಶದಿಂದ ಪ್ರಯತ್ನಿಸಿದರೂ ಅದು ಫಲ ನೀಡಲಿಲ್ಲ. "ಶೌಚಾಲಯಗಳ ನಿರ್ವಹಣೆಯಲ್ಲಿ ನಾವು ಸಾರ್ವಜನಿಕರನ್ನು ಪಾಲುದಾರರಾಗಿ ತೊಡಗಿಸಿಕೊಳ್ಳಬೇಕು. ಆದ್ದರಿಂದ, ನಾವು ಈ ವರ್ಷದ ಬಜೆಟ್‌ನಲ್ಲಿ ನಿರ್ವಹಣಾ ವೆಚ್ಚವನ್ನು ದ್ವಿಗುಣಗೊಳಿಸಲು ನಿರ್ಧರಿಸಿದ್ದೇವೆ. ಪ್ರತಿ ಶೌಚಾಲಯದ ನಿರ್ವಹಣೆಗೆ ನಾವು ಪ್ರತಿ ತಿಂಗಳು ನಿರ್ದಿಷ್ಟ ಮೊತ್ತವನ್ನು ಪಾವತಿಸುತ್ತೇವೆ. ಇದರ ಜವಾಬ್ದಾರಿಯನ್ನು ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಗೆ ನೀಡಲಾಗುವುದು ಎಂದು ಹೇಳಿದರು.

ಬೆಂಗಳೂರಿನಂತಹ ನಗರದಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ವಹಿಸಲು ಸಂಸ್ಥೆಗಳಿವೆ. ಆದರೆ, ಈ ಪರಿಸ್ಥಿತಿ ಶ್ರೇಣಿ-II ಮತ್ತು ಶ್ರೇಣಿ-III ನಗರಗಳಲ್ಲಿ ಇಲ್ಲ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com