ಈ ಬಾರಿ ದ್ವಿತೀಯ ಪಿಯುಸಿಯಲ್ಲಿ 7.27 ಲಕ್ಷ, ಎಸ್ಎಸ್ಎಲ್'ಸಿಯಲ್ಲಿ 8.69 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ: ಸಚಿವ ನಾಗೇಶ್
ಮಾರ್ಚ್ 9 ರಿಂದ ಏಪ್ರಿಲ್ 15 ರವರೆಗೆ ನಡೆಯಲಿರುವ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳನ್ನು ಸುಗಮವಾಗಿ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಮಂಗಳವಾರ ಹೇಳಿದರು.
Published: 22nd February 2023 11:36 AM | Last Updated: 22nd February 2023 02:10 PM | A+A A-

ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿರುವ ಸಚಿವ ಬಿಸಿ ನಾಗೇಶ್.
ಬೆಂಗಳೂರು: ಮಾರ್ಚ್ 9 ರಿಂದ ಏಪ್ರಿಲ್ 15 ರವರೆಗೆ ನಡೆಯಲಿರುವ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳನ್ನು ಸುಗಮವಾಗಿ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಮಂಗಳವಾರ ಹೇಳಿದರು.
ಪರೀಕ್ಷೆ ಹಿನ್ನೆಲೆಯಲ್ಲಿ ಸಚಿವರು ನಿನ್ನೆ ವಿಧಾನಸೌಧದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಸಭೆಯಲ್ಲಿ ಪರೀಕ್ಷಾ ಕ್ರಮ, ಪರೀಕ್ಷೆಯಲ್ಲಿ ಆದ ಬದಲಾವಣೆ, ಭದ್ರತೆ ಹಾಗೂ ನಕಲು ಮುಕ್ತ ಪರೀಕ್ಷೆಯ ಕ್ರಮಗಳ ಕುರಿತು ಚರ್ಚೆ ನಡೆಸಲಾಯಿತು.
ಪರೀಕ್ಷೆಯಲ್ಲಿ ನಕಲು ತಡೆದು ಸುರಕ್ಷಿತವಾಗಿ ಪರೀಕ್ಷೆ ನಡೆಸುವ ಕುರಿತು ಪೊಲೀಸ್ ಅಧಿಕಾರಿಗಳು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳ ಜೊತೆ ಬಿ.ಸಿ ನಾಗೇಶ್ ಮಾತುಕತೆ ನಡೆಸಿದರು.
ಸಭೆಯ ಬಳಿಕ ಮಾತನಾಡಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು, ದ್ವಿತೀಯ ಪಿಯುಸಿ ಪರೀಕ್ಷೆಯ ವಿವರಗಳನ್ನು ನೀಡಿದರು.
ಈ ಬಾರಿ ದ್ವಿತೀಯ ಪಿಯುಸಿ ಪರೀಸಖೆಯಲ್ಲಿ ಒಟ್ಟು 5716 ಕಾಲೇಜುಗಳು ಭಾಗಿಯಾಗಲಿವೆ. ಒಟ್ಟು 7,27,387 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಲಿದ್ದಾರೆ. 1109 ಒಟ್ಟು ಪರೀಕ್ಷಾ ಕೇಂದ್ರಗಳು ಇರಲಿದೆ ಎಂದು ಹೇಳಿದರು.
ಇದನ್ನೂ ಓದಿ: ಎಸ್‌ಎಸ್‌ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷೆ: ಕೆಎಸ್‌ಇಎಬಿಯಿಂದ ಮಾರ್ಗಸೂಚಿ ಬಿಡುಗಡೆ
“ಪರೀಕ್ಷಾ ಕೇಂದ್ರಗಳಿಗೆ ತೆರಳುವ ವಿದ್ಯಾರ್ಥಿಗಳು ಯಾವುದೇ ಎಲೆಕ್ಟ್ರಾನಿಕ್ ಗ್ಯಾಜೆಟ್ಗಳಿಗೆ ಅವಕಾಶ ಇರುವುದಿಲ್ಲ. ಪರೀಕ್ಷೆ ಪ್ರಾರಂಭವಾಗುವ 15 ನಿಮಿಷ ಮೊದಲು ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಯಲ್ಲಿ ಹಾಜರಿರಬೇಕು ಇದೆ ಮೊದಲ ಬಾರಿಗೆ ಪಿಯುಸಿ ಪರೀಕ್ಷೆಯಲ್ಲಿ ಮಲ್ಟಿಪಲ್ ಚಾಯ್ಸ್ ಇರಲಿದೆ. ಮಕ್ಕಳು ಪಾಸಾಗಲು 3 ಹಂತದ ಪ್ರಶ್ನೆಗಳು ಇರಲಿವೆ ಎಂದು ವಿವರಿಸಿದರು.
ಇದೇ ವೇಳೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬಗ್ಗೆ ಮಾಹಿತಿ ನೀಡಿ, ಪಿಯುಸಿ ಪರೀಕ್ಷೆ ನಂತರ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆಯಲಿದೆ. ಈ ಬಾರಿ ಒಟ್ಟು 8,69,490 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಲಿದ್ದಾರೆ. ಇದಕ್ಕಾಗಿ ಒಟ್ಟು 3,307 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಶಿಕ್ಷಣ ಇಲಾಖೆ ಸಿಸಿಟಿವಿ ಅಳವಡಿಕೆ ಸೇರಿ ಬಹುತೇಕ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.
“ಪರೀಕ್ಷಾ ಅವಧಿಯಲ್ಲಿ ಕೇಂದ್ರದ ಸುತ್ತಲಿನ ಎಲ್ಲಾ ಫೋಟೊಕಾಪಿ (ಕ್ಸೆರಾಕ್ಸ್) ಕೇಂದ್ರಗಳನ್ನು ಮುಚ್ಚಲಾಗುತ್ತದೆ. ಸೈಬರ್ ಸೆಂಟರ್‌ಗಳು, ಟ್ಯೂಷನ್ ಸೆಂಟರ್‌ಗಳು ಮತ್ತು ಗೇಮಿಂಗ್ ಸೆಂಟರ್‌ಗಳ ಮೇಲೆ ನಿಗಾ ಇರಿಸಲಾಗುವುದು. ಈ ಹಿಂದೆ ಅವ್ಯವಹಾರ ನಡೆದಿರುವ ಪರೀಕ್ಷಾ ಕೇಂದ್ರಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗುವುದು ಎಂದು ತಿಳಿಸಿದರು.