ವೈಟ್‌ಫೀಲ್ಡ್ ಮೆಟ್ರೊ: ಅಧಿಕಾರಿಗಳಿಂದ ಸುರಕ್ಷತೆ ಪರಿಶೀಲನೆ ಕಾರ್ಯ ಆರಂಭ
ವೈಟ್‌ಫೀಲ್ಡ್‌ನಿಂದ ಕೆಆರ್ ಪುರಂವರೆಗಿನ 13.71 ಕಿ.ಮೀ ಉದ್ದದ ವಿಸ್ತೃತ ಪರ್ಪಲ್ ಲೈನ್‌ನಲ್ಲಿ ಮೆಟ್ರೋ ಕಾರ್ಯಾಚರಣೆ ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ರೈಲ್ವೆ ಸುರಕ್ಷತಾ ಆಯುಕ್ತರು 3 ದಿನಗಳ ಪರಿಶೀಲನೆ ಕಾರ್ಯವನ್ನು ಬುಧವಾರ ಆರಂಭಿಸಿದ್ದಾರೆ.
Published: 23rd February 2023 01:23 PM | Last Updated: 23rd February 2023 08:55 PM | A+A A-

ತಪಾಸಣೆ ನಡೆಸುತ್ತಿರುವ ಅಧಿಕಾರಿಗಳು.
ಬೆಂಗಳೂರು: ವೈಟ್‌ಫೀಲ್ಡ್‌ನಿಂದ ಕೆಆರ್ ಪುರಂವರೆಗಿನ 13.71 ಕಿ.ಮೀ ಉದ್ದದ ವಿಸ್ತೃತ ಪರ್ಪಲ್ ಲೈನ್‌ನಲ್ಲಿ ಮೆಟ್ರೋ ಕಾರ್ಯಾಚರಣೆ ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ರೈಲ್ವೆ ಸುರಕ್ಷತಾ ಆಯುಕ್ತರು 3 ದಿನಗಳ ಪರಿಶೀಲನೆ ಕಾರ್ಯವನ್ನು ಬುಧವಾರ ಆರಂಭಿಸಿದ್ದಾರೆ.
ವೈಟ್‌ಫೀಲ್ಡ್‌ನಿಂದ ಕೆ.ಆರ್.ಪುರ ನಡುವೆ ಅಕ್ಟೋಬರ್‌ನಲ್ಲೇ ಪರೀಕ್ಷಾರ್ಥ ಸಂಚಾರ ಆರಂಭಿಸಲಾಗಿತ್ತು. ಅದು ಯಶಸ್ವಿಯಾದ ಬಳಿಕ ಪರಿಶೀಲನೆ ನಡೆಸಲು ರೈಲ್ವೆ ಸುರಕ್ಷತಾ ಆಯುಕ್ತರಿಗೆ ಬಿಎಂಆರ್‌ಸಿಎಲ್ ಆಹ್ವಾನ ನೀಡಿತ್ತು.
ಬುಧವಾರ ಆರಂಭವಾಗಿರುವ ಸಿಆರ್‌ಎಸ್ ತಪಾಸಣೆ ಯಶಸ್ವಿಯಾಗಿದ್ದು, ಇನ್ನೂ ಎರಡು ದಿನ ಪರಿಶೀಲನೆ ನಡೆಯಲಿದೆ. ಯಾವುದೇ ಅಡೆ–ತಡೆ ಎದುರಾಗದಿದ್ದರೆ ಮಾರ್ಚ್ ಎರಡು ಅಥವಾ ಮೂರನೇ ವಾರದಲ್ಲಿ ಮೆಟ್ರೊ ರೈಲು ವಾಣಿಜ್ಯ ಸಂಚಾರ ಆರಂಭವಾಗಲಿದೆ ಎನ್ನಲಾಗಿದೆ.
ಬೆಳಿಗ್ಗೆ 10 ಗಂಟೆಗೆ ಸುರಕ್ಷತಾ ಪರಿಶೀಲನೆ ಕಾರ್ಯ ಆರಂಭವಾಯಿತು. ವೈಟ್‌ಫೀಲ್ಡ್, ಚನ್ನಸಂದ್ರ, ಕಾಡುಗೋಡಿ, ಪಟ್ಟಂದೂರು ಅಗ್ರಹಾರ (ಐಟಿಪಿಎಲ್), ಸದರಮಂಗಲ ಮತ್ತು ನಲ್ಲೂರಹಳ್ಳಿ (ವೈದೇಹಿ ಆಸ್ಪತ್ರೆ ಹಿಂದೆ) ನಿಲ್ದಾಣಗಳನ್ನು ಪರಿಶೀಲನೆ ನಡೆಸಲಾಯಿತು.
ಇದನ್ನೂ ಓದಿ: ನಮ್ಮ ಮೆಟ್ರೋ: ವೈಟ್‌ಫೀಲ್ಡ್-ಕೆಆರ್ ಪುರಂ ಮಾರ್ಗದಲ್ಲಿ ಮೊದಲ ಬಾರಿಗೆ ಗಂಟೆಗೆ 80 ಕಿಮೀ ವೇಗದಲ್ಲಿ ಪ್ರಾಯೋಗಿಕ ಸಂಚಾರ
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಮೆಟ್ರೋ ಅಧಿಕಾರಿಯೊಬ್ಬರು, ಹಳಿ ವ್ಯವಸ್ಥೆ, ಲಿಫ್ಟ್‌ನ ಕಾರ್ಯನಿರ್ವಹಣೆ, ಎಸ್ಕಲೇಟರ್‌ಗಳು ಮತ್ತು ಅಗ್ನಿಶಾಮಕ ವ್ಯವಸ್ಥೆಗಳ ವಿವಿಧ ನಿಯತಾಂಕಗಳನ್ನು ದಿನವಿಡೀ ಪರಿಶೀಲಿಸಲಾಯಿತು. ನಿಲ್ದಾಣದಲ್ಲಿ ಲಭ್ಯವಿರುವ ಪ್ರಯಾಣಿಕರ ಸೌಕರ್ಯಗಳು ಮತ್ತು ಸೌಲಭ್ಯಗಳನ್ನು ಕೂಡ ಪರಿಶೀಲಿಸಲಾಯಿತು ಎದು ಹೇಳಿದ್ದಾರೆ.
ಹಳಿಗಳ ಉದ್ದಕ್ಕೂ ಇರುವ ಬೇರಿಂಗ್‌ಗಳನ್ನು ತಂಡವು ಇಂದು ರಾತ್ರಿ ಅಥವಾ ಗುರುವಾರ ರಾತ್ರಿ ಪರಿಶೀಲನೆ ನಡೆಸಲಾಗುತ್ತದೆ ಎಂದು ಬಿಎಂಆರ್'ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಅವರು ತಿಳಿಸಿದ್ದಾರೆ.
ಸಿಎಂಆರ್‌ಎಸ್ ಅನುಮತಿ ದೊರೆತಿದ್ದೇ ಆದರೆ, ವೈಟ್‌ಫೀಲ್ಡ್‌ನಿಂದ ಕೆಆರ್ ಪುರಂವರೆಗಿನ ಮಾರ್ಗವು ಮಾರ್ಚ್ 15ರ ನಂತರ ಕಾರ್ಯಾಚರಣೆ ಆರಂಭಿಸಲಿದೆ ಎಂದು ತಿಳಿದುಬಂದಿದೆ.