Yeshwanthpur Railway Station: ರೈಲ್ವೇ ನಿಲ್ದಾಣ ಡ್ರಮ್‌ನಲ್ಲಿ ಯುವತಿ ಶವ ಪತ್ತೆ; ಬೆಚ್ಚಿಬಿದ್ದ ಪ್ರಯಾಣಿಕರು

ಯಶವಂತಪುರ ರೈಲ್ವೇ ನಿಲ್ದಾಣದ ಪ್ಲಾಸ್ಟಿಕ್‌ ಡ್ರಮ್‌ನಲ್ಲಿ ಮಹಿಳೆ ಶವ ಪತ್ತೆಯಾಗಿದ್ದು, ರೈಲು ಪ್ರಯಾಣಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಡ್ರಮ್‌ನಲ್ಲಿ ಯುವತಿ ಶವ ಪತ್ತೆ
ಡ್ರಮ್‌ನಲ್ಲಿ ಯುವತಿ ಶವ ಪತ್ತೆ

ಬೆಂಗಳೂರು: ಯಶವಂತಪುರ ರೈಲ್ವೇ ನಿಲ್ದಾಣದ ಪ್ಲಾಸ್ಟಿಕ್‌ ಡ್ರಮ್‌ನಲ್ಲಿ ಮಹಿಳೆ ಶವ ಪತ್ತೆಯಾಗಿದ್ದು, ರೈಲು ಪ್ರಯಾಣಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಹೌದು.. ಯಶವಂತಪುರ ರೈಲ್ವೇ ನಿಲ್ದಾಣದ ರೈಲು ಹಳಿ ಬಳಿಯ ಪ್ಲಾಸ್ಟಿಕ್‌ ಡ್ರಮ್‌ನಲ್ಲಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಯುವತಿಯ ಶವ ಪತ್ತೆಯಾಗಿದೆ. ತುಂಬಾ ದಿನಗಳ ಹಿಂದೆಯೇ ಇದನ್ನು ಇಲ್ಲಿಡಲಾಗಿದ್ದು, ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಸ್ವಚ್ಛತಾ ಕೆಲಸ ಮಾಡುವ ಸಿಬ್ಬಂದಿ ಅದನ್ನು ತೆರವುಗೊಳಿಸುವ ವೇಳೆ ಡ್ರಮ್ ನಲ್ಲಿ ಮಹಿಳೆ ಶವ ಇರುವುದು ಪತ್ತೆಯಾಗಿದೆ. ಬಾಕ್ಸ್ ಮೇಲೆ ಬಟ್ಟೆಗಳನ್ನು ಸುತ್ತಿ ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದಾರೆ. ಇನ್ನೂ ಕೊಲೆ ಮಾಡಿ ಶವವನ್ನ ಬಾಕ್ಸ್ ನಲ್ಲಿ ಇಟ್ಟಿರುವ ಶಂಕೆ ವ್ಯಕ್ತವಾಗಿದೆ. ಕೂಡಲೇ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಡ್ರಮ್‌ ಪರಿಶೀಲನೆ ಮಾಡಿದಾಗ ಕೊಳೆತ ಸ್ಥಿತಿಯಲ್ಲಿರುವ ಯುವತಿ ದೇಹ ಪತ್ತೆಯಾಗಿದೆ.

ಯಶವಂತಪುರ ರೈಲ್ವೇ ನಿಲ್ದಾಣದ ಗೂಡ್ಸ್ ಪ್ಲಾಟ್ ಫಾರ್ಮ್ ನ ಬಾಕ್ಸ್ ಒಂದರಲ್ಲಿ ಶವ ಪತ್ತೆಯಾಗಿದ್ದು, ಅಂದಾಜು 23 ವರ್ಷದ ಯುವತಿ ಎಂದು ಗುರುತಿಸಲಾಗಿದೆ. ಆರೋಪಿಗಳು ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಯುವತಿಯನ್ನು ಕೊಲೆ ಮಾಡಿ ಪ್ಲಾಸ್ಟಿಕ್ ಕವರ್ ಒಂದರಲ್ಲಿ ಸೀಲ್ ಮಾಡಿಟ್ಟಿದ್ದರು. ಇಂದು ವಾಸನೆ ಬಂದಾಗ ನೋಡಿಕೊಂಡಿರುವ ರೈಲ್ವೇ ಪೊಲೀಸರು ತೆಗೆದು ನೋಡಿದಾಗ ಮೃತದೇಹ ಪತ್ತೆಯಾಗಿದೆ. ಸದ್ಯ ಯುವತಿಯ ಗುರುತು ಪತ್ತೆ ಹಚ್ಚುತ್ತಿರುವ ಯಶವಂತಪುರ ರೈಲ್ವೇ ಪೊಲೀಸರು, ಯಶವಂತಪುರ ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಶ್ವಾನದಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರೈಲು ನಿಲ್ದಾಣದ ಸಿಸಿಟಿವಿಗಳನ್ನ  ಪೊಲೀಸರು, ಪರಿಶೀಲನೆ ನಡೆಸಿದ್ದು, ಮೃತ ಮಹಿಳೆ ಗುರುತು ಪತ್ತೆ ಹಚ್ಚುತ್ತಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ ರೈಲು ನಿಲ್ದಾಣದಲ್ಲಿ ಸ್ವಚ್ಛತಾ ಕೆಲಸ ಮಾಡುವ ಸಿಬ್ಬಂದಿ ಜಯಮ್ಮ ಪ್ಲಾಸ್ಟಿಕ್ ಡ್ರಮ್ ನಲ್ಲಿ ಶವದ ವಾಸನೆ ಬರುತ್ತಿದ್ದನ್ನ ಕಂಡು ಅದನ್ನು ತೆರವುಗೊಳಿಸಲು ಮುಂದಾಗಿದ್ದಾರೆ. ಈ ವೇಳೆ ಡ್ರಮ್ ನಲ್ಲಿ ಶವ ಇರುವ ಬಗ್ಗೆ ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಡ್ರಮ್ ಪರಿಶೀಲನೆ ನಡೆಸಿದಾಗ ಶವ ಪತ್ತೆಯಾಗಿದೆ. ಶವದ ಕುತ್ತಿಗೆಯಲ್ಲಿ ಬಿಳಿ ಬಣ್ಣದ ದುಪ್ಪಟ್ಟದಿಂದ ಗಂಟು ಬಿಗಿದಿರುವುದು ಪತ್ತೆಯಾಗಿದೆ. ಇದು ಸುಮಾರು 23 ವರ್ಷ ವಯಸ್ಸಿನ ಮಹಿಳೆ ಮೃತದೇಹ ಎಂದು ಅಂದಾಜಿಸಲಾಗಿದೆ. ಇನ್ನು ಕೊಲೆ ಮಾಡಿ ಸಾಕ್ಷ್ಯ ನಾಶ ಪಡಿಸಲು ಡ್ರಮ್ ನಲ್ಲಿ ಶವ ಹಾಕಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಶವ ಕೊಳೆಯುವಂತೆ ಕೆಮಿಕಲ್ ಡ್ರಮ್ ನಲ್ಲಿ ದುಷ್ಕರ್ಮಿಗಳು ಹಾಕಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡ ರೈಲ್ವೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಈ ಕುರಿತು ಮಾತನಾಡಿರುವ ನೈಋತ್ಯ ರೈಲ್ವೇ ವಿಭಾಗದ ADRM ಕುಸುಮಾ ಹರಿಪ್ರಸಾದ್ ಅವರು, ಬೆಂಗಳೂರಿನ ಯಶವಂತಪುರ ರೈಲ್ವೇ ನಿಲ್ದಾಣದ ಸ್ವಚ್ಛತಾ ಸಿಬ್ಬಂದಿ ಇಂದು ಪ್ಲಾಟ್‌ಫಾರ್ಮ್ ನಂಬರ್ 1ರಲ್ಲಿ ಇರಿಸಲಾಗಿದ್ದ ಬಾಕ್ಸ್‌ನಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಇರುವುದನ್ನು ಕಂಡಿದ್ದಾರೆ. ವಿಧಿವಿಜ್ಞಾನ ತಜ್ಞರ ತಂಡ ರೈಲು ನಿಲ್ದಾಣಕ್ಕೆ ಆಗಮಿಸಿ ತನಿಖೆ ನಡೆಸಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಇನ್ನು ರೈಲ್ವೆ ನಿಲ್ದಾಣದಲ್ಲಿ ಯುವತಿ ಶವ ಪತ್ತೆಯಾಗುತ್ತಿದ್ದಂತೆ ಪ್ರಯಾಣಿಕರು ಭಯಭೀತರಾಗಿದ್ದಾರೆ. ದಿನದ 24 ಗಂಟೆ ವೇಳೆಯೂ ರೈಲಿಗಾಗಿ ನಿಲ್ದಾಣದಲ್ಲಿ ಕಾಯುತ್ತಾ ಕುಳಿತುಕೊಳ್ಳುವವರಿಗೆ ಭಯದ ವಾತಾವರಣ ಶುರುವಾಗಿದೆ. ಕೆಲವೊಂದು ರೈಲುಗಳು ಬೆಳಗ್ಗೆ, ಮಧ್ಯರಾತ್ರಿ ಆಗಮಿಸಲಿದ್ದು, ರೈಲುಗಳನ್ನು ಸರಿಯಾದ ಸಮಯಕ್ಕೆ ಹೋಗಿ ಹತ್ತಿಕೊಳ್ಳುವುದು ಹೇಗೆ? ಎಂದು ಚಿಂತಾಕ್ರಾಂತರಾಗಿದ್ದಾರೆ. ಇನ್ನು ಒಬ್ಬಂಟಿ ಮಹಿಳೆಯರಿಗೆ ರೈಲ್ವೆ ನಿಲ್ದಾಣ ಮತ್ತು ರೈಲು ಪ್ರಯಾಣ ಎಷ್ಟು ಸುರಕ್ಷಿತ ಎಂಬ ಅನುಮಾನ ಮೂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com