ಸ್ಯಾಂಟ್ರೋ ರವಿ ಆರೋಗ್ಯದಲ್ಲಿ ಏರುಪೇರು: ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು
ವೇಶ್ಯಾವಾಟಿಕೆ ಹಾಗೂ ಅಕ್ರಮ ಧಂಧೆಗಳಲ್ಲಿ ಭಾಗಿಯಾಗಿ ಬಂಧನಕ್ಕೊಳಗಾಗಿರುವ ಸ್ಯಾಂಟ್ರೋ ರವಿ ಆರೋಗ್ಯದಲ್ಲಿ ಏರುಪೇರಾಗಿದ್ದು, ಸಿಐಡಿ ಆಧಿಕಾರಿಗಳು ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆಂದು ಶುಕ್ರವಾರ ತಿಳಿದುಬಂದಿದೆ.
Published: 27th January 2023 01:41 PM | Last Updated: 27th January 2023 01:41 PM | A+A A-

ಸ್ಯಾಂಟ್ರೋ ರವಿ
ಬೆಂಗಳೂರು: ವೇಶ್ಯಾವಾಟಿಕೆ ಹಾಗೂ ಅಕ್ರಮ ಧಂಧೆಗಳಲ್ಲಿ ಭಾಗಿಯಾಗಿ ಬಂಧನಕ್ಕೊಳಗಾಗಿರುವ ಸ್ಯಾಂಟ್ರೋ ರವಿ ಆರೋಗ್ಯದಲ್ಲಿ ಏರುಪೇರಾಗಿದ್ದು, ಸಿಐಡಿ ಆಧಿಕಾರಿಗಳು ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆಂದು ಶುಕ್ರವಾರ ತಿಳಿದುಬಂದಿದೆ.
ಆರೋಪಿ ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದು, ನಿನ್ನೆ ಸಂಜೆ ಆರೋಗ್ಯದಲ್ಲಿ ಇದ್ದಕ್ಕಿದ್ದಂತೆ ವ್ಯತ್ಯಯ ಕಂಡು ಬಂದಿದೆ. ಕೂಡಲೇ ಆತನನ್ನು ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ನಂತರ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಶುಗರ್ ಪ್ರಮಾಣ ವ್ಯತ್ಯಯವಾದ ಹಿನ್ನೆಲೆಯಲ್ಲಿ ಸ್ಯಾಂಟ್ರೋ ರವಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು ಎಂದು ತಿಳಿದುಬಂದಿದೆ.
ನಿಯಮಿತ ಮಾತ್ರೆಗಳಿಂದ ಹೆಚ್ಚಿನ ಮಾತ್ರಗಳನ್ನು ಸೇವಿಸಿರುವ ಶಂಕೆಗಳು ಅಧಿಕಾರಿಗಳಲ್ಲಿ ಮೂಡಿದ್ದು, ಈ ಬಗ್ಗೆ ಅಧಿಕಾರಿಗಳು ವೈದ್ಯರ ಬಳಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.
ಶುಗರ್, ಬಿಪಿ ಸೇರಿ ಹಲವು ಸಮಸ್ಯೆ ಯಿಂದ ಬಳಲುತ್ತಿರುವ ಸ್ಯಾಂಟ್ರೋ ರವಿ, ವಿಚಾರಣೆಗೆ ಹೆದರಿ ಆತ್ಮಹತ್ಯೆಗೆ ಯತ್ನಿಸಿದ್ನಾ ಎಂಬ ಅನುಮಾನ ಮೂಡಿದೆ.
ಸ್ಯಾಂಟ್ರೋ ರವಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲು ಮಾಡಿರುವ ಹಿನ್ನೆಲೆಯಲ್ಲಿ ಪೊಲೀಸರು ವಿಕ್ಟೋರಿಯಾ ಆಸ್ಪತ್ರೆ ಬಳಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಭದ್ರತೆಗೆ ಕೆಎಸ್ ಆರ್ ಪಿ ತುಕಡಿ ಪೊಲೀಸರ ನಿಯೋಜನೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಅತ್ಯಾಚಾರ, ವೇಶ್ಯಾವಾಟಿಕೆ, ವಂಚನೆ, ಜಾತಿ ನಿಂದನೆ, ಅಕ್ರಮ ಹಣ ವರ್ಗಾವಣೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿ ಮಂಜುನಾಥ್ ಕೆ.ಎಸ್.ಅಲಿಯಾಸ್ ಸ್ಯಾಂಟ್ರೋ ರವಿ ವಿರುದ್ಧದ ದೂರುಗಳ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ಸಿಐಡಿ ಪೊಲೀಸರಿಗೆ ನಿರ್ದೇಶನ ನೀಡಿದೆ. ಸ್ಯಾಂಟ್ರೋ ರವಿ ವಿರುದ್ಧ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಎರಡನೇ ಪತ್ನಿ ನೀಡಿರುವ ದೂರಿನ ಅನ್ವಯ ಜ. 2 ರಂದು ಪ್ರಕರಣ ದಾಖಲಾಗಿತ್ತು.
ಪತ್ನಿಯ ವಿರುದ್ಧ ಸುಳ್ಳು ಪ್ರಕರಣ, ಮಾನಸಿಕ ಹಾಗೂ ದೈಹಿಕ ಕಿರುಕುಳ ಪ್ರಕರಣದಲ್ಲಿ ಬಂಧಿತನಾಗಿರುವ ಸ್ಯಾಂಟ್ರೋ ರವಿ ಸದ್ಯ ಸಿಐಡಿ ವಶದಲ್ಲಿದ್ದಾನೆ. ಜನವರಿ 30ಕ್ಕೆ ಕಸ್ಟಡಿ ಅವಧಿ ಅಂತ್ಯವಾಗಲಿದೆ.