ಶಿವಾಜಿನಗರದ ಮಸೀದಿಗೆ ಹುಸಿ ಬಾಂಬ್ ಕರೆ; ಮಹಾರಾಷ್ಟ್ರ ಮೂಲದ ವ್ಯಕ್ತಿಯನ್ನು ಬಂಧಿಸಿದ ಪೊಲೀಸರು

ಬೆಂಗಳೂರು ನಗರದ ಕೋಮು ಸೂಕ್ಷ್ಮ ಪ್ರದೇಶವಾದ ಶಿವಾಜಿನಗರದಲ್ಲಿರುವ ಮಸೀದಿಯೊಂದಕ್ಕೆ ಹುಸಿ ಬಾಂಬ್ ಕರೆ ಮಾಡಿದ್ದ ದುಷ್ಕರ್ಮಿಯನ್ನು ಬಂಧಿಸಿರುವುದಾಗಿ ಸೋಮವಾರ ಪೊಲೀಸರು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನಗರದ ಕೋಮು ಸೂಕ್ಷ್ಮ ಪ್ರದೇಶವಾದ ಶಿವಾಜಿನಗರದಲ್ಲಿರುವ ಮಸೀದಿಯೊಂದಕ್ಕೆ ಹುಸಿ ಬಾಂಬ್ ಕರೆ ಮಾಡಿದ್ದ ದುಷ್ಕರ್ಮಿಯನ್ನು ಬಂಧಿಸಿರುವುದಾಗಿ ಸೋಮವಾರ ಪೊಲೀಸರು ತಿಳಿಸಿದ್ದಾರೆ.

ಆರೋಪಿಯನ್ನು ಮಹಾರಾಷ್ಟ್ರ ಮೂಲದ 37 ವರ್ಷದ ಸೈಯದ್ ಮೊಹಮ್ಮದ್ ಅನ್ವರ್ ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ಆರೋಪಿಯು ಮಸೀದಿಗಳಿಂದ ಮದರಸಾಗಳಿಗೆ ದೇಣಿಗೆ ಸಂಗ್ರಹಿಸುತ್ತಿದ್ದನು.

ಬೆಂಗಳೂರಿನ ಶಿವಾಜಿನಗರದ ರಸೆಲ್ ಮಾರ್ಕೆಟ್ ಬಳಿಯ ಆಜಂ ಮಸೀದಿಯಿಂದ ದೇಣಿಗೆ ಸಂಗ್ರಹಿಸಿದ ನಂತರ, ಆ ರಾತ್ರಿ ಮಸೀದಿಯಲ್ಲೇ ಉಳಿಯಲು ಅವಕಾಶ ಕೇಳಿದ್ದಾನೆ. ಇದಕ್ಕೆ ನಿರಾಕರಿಸಿದಾಗ ಮನನೊಂದ ಅನ್ವರ್ ಆಂಧ್ರಪ್ರದೇಶದ ಕರ್ನೂಲ್‌ಗೆ ಬಸ್ ಹತ್ತಿದ್ದಾನೆ.

ಬಸ್ ದೇವನಹಳ್ಳಿ ದಾಟುತ್ತಿದ್ದಂತೆಯೇ ತುರ್ತು ಸಹಾಯವಾಣಿ ಸಂಖ್ಯೆ 122ಕ್ಕೆ ದೂರವಾಣಿ ಕರೆ ಮಾಡಿ ಭಯೋತ್ಪಾದಕರು ಮಸೀದಿಯಲ್ಲಿ ಬಾಂಬ್ ಇಟ್ಟಿದ್ದಾರೆ ಎಂದು ತಿಳಿಸಿದ್ದಾನೆ.

ಜುಲೈ 5 ರಂದು ತಡರಾತ್ರಿ ಈ ಘಟನೆ ನಡೆದಿದೆ. ಇದು ಸ್ಥಳೀಯರು ಮತ್ತು ಪೊಲೀಸರಲ್ಲಿ ಆತಂಕ ಮತ್ತು ಉದ್ವಿಗ್ನತೆಯನ್ನು ಸೃಷ್ಟಿಸಿತ್ತು. ತಡರಾತ್ರಿ ಶೋಧ ಕಾರ್ಯಾಚರಣೆ ನಡೆಸಲಾಯಿತು.

ಅಗ್ನಿಶಾಮಕ ದಳ ಮತ್ತು ತುರ್ತು ಸೇವೆಗಳು, ಪೊಲೀಸ್ ಇಲಾಖೆ, ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯಾಚರಣೆ ನಡೆಸಿದ್ದು, ಅದು ಹುಸಿ ಬಾಂಬ್ ಕರೆ ಎಂದು ತಿಳಿದುಬಂದಿದೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಶಿವಾಜಿನಗರ ಪೊಲೀಸರು, ಆರೋಪಿ ಕರ್ನೂಲ್‌ನಿಂದ ಮೆಹಬೂಬ್‌ನಗರಕ್ಕೆ ತೆರಳಿದ್ದ ವೇಳೆ ಬಂಧಿಸಿದ್ದಾರೆ. ಆರೋಪಿ ಬಿಎಸ್‌ಸಿ ಪದವೀಧರನಾಗಿದ್ದು, ನಿರುದ್ಯೋಗಿಯಾಗಿರುವುದು ತನಿಖೆಯಿಂದ ತಿಳಿದುಬಂದಿದೆ.

ಮದರಸಾಗಳಿಗೆ ದೇಣಿಗೆ ಸಂಗ್ರಹಿಸುವ ನೆಪದಲ್ಲಿ ಜೀವನ ನಿರ್ವಹಣೆ ಮಾಡುತ್ತಿದ್ದನು. ಈ ಸಂಬಂಧ ಮುಂದಿನ ತನಿಖೆ ನಡೆಯುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com