ಪರಿಚಿತರಿಂದಲೇ ಬೈಕ್ ಕಳ್ಳತನ: ಹಿಂತಿರುಗಿಸುವಂತೆ ಕೇಳಿದ್ದಕ್ಕೆ ಚೂರಿ ಇರಿದು ಹತ್ಯೆಗೆ ಯತ್ನ!

ಪರಿಚಿತರಿಂದಲೇ ಬೈಕ್ ಕಳ್ಳತನವಾಗಿರುವುದನ್ನು ತಿಳಿದುಕೊಂಡ ಡೆಲಿವರಿ ಏಜೆಂಟ್'ವೊಬ್ಬರು ಹಿಂತಿರುಗುವಂತೆ ಕೇಳಿದ್ದಕ್ಕೆ ಚೂರಿಯಿಂದ ಇರಿದು ಹತ್ಯೆಗೆ ಯತ್ನ ನಡೆಸಿರುವ ಘಟನೆಯೊಂದು ನಗರದಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಪರಿಚಿತರಿಂದಲೇ ಬೈಕ್ ಕಳ್ಳತನವಾಗಿರುವುದನ್ನು ತಿಳಿದುಕೊಂಡ ಡೆಲಿವರಿ ಏಜೆಂಟ್'ವೊಬ್ಬರು ಹಿಂತಿರುಗುವಂತೆ ಕೇಳಿದ್ದಕ್ಕೆ ಚೂರಿಯಿಂದ ಇರಿದು ಹತ್ಯೆಗೆ ಯತ್ನ ನಡೆಸಿರುವ ಘಟನೆಯೊಂದು ನಗರದಲ್ಲಿ ನಡೆದಿದೆ.

ಜೆ.ಪಿ.ನಗರದ ಸಾರಕ್ಕಿ ನಿವಾಸಿ ರಾಮು ಎಂ. (21) ಪಿಜ್ಜಾ ಡೆಲಿವರಿ ಏಜೆಂಟ್ ಆಗಿದ್ದು, 6 ತಿಂಗಳ ಹಿಂದೆ ಬೈಕ್ ಕಳೆದುಕೊಂಡಿದ್ದರು.

ಇತ್ತೀಚೆಗೆ ಸಂಚಾರ ನಿಮಯ ಉಲ್ಲಂಘನೆ ಕುರಿತು ಆ್ಯಪ್ ನಲ್ಲಿ ಕಳೆದುಹೋದ ಬೈಕ್ ಸಂಖ್ಯೆಯನ್ನು ಹಾಕಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕೆಲ ದಿನಗಳ ಹಿಂದಷ್ಟೇ  ನಿಯಮ ಉಲ್ಲಂಘನೆಯಾಗಿರುವುದಾಗಿ ತಿಳಿದುಬಂದಿದೆ. ನಿಯಮ ಉಲ್ಲಂಘನೆಯಾಗಿರುವ ಸ್ಥಳ ಹಾಗೂ ಫೋಟೋಗಳು ಕೂಡ ಆ್ಯಪ್ ನಲ್ಲಿ ಕಂಡು ಬಂದಿದೆ. ಈ ವೇಳೆ ತನಗೆ ಪರಿಚಯಸ್ಥರಿದ್ದ ಸ್ನೇಹಿತರೇ ಬೈಕ್ ಕಳ್ಳತನ ಮಾಡಿರುವುದು ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ ಬೈಕ್ ಕದ್ದಿದ್ದ ಸ್ನೇಹಿತರಿಗೆ ಕರೆ ಮಾಡಿ ಬೈಕ್ ವಾಪಸ್ ನೀಡುವಂತೆ ಕೇಳಿದ್ದಾರೆ. ಈ ವೇಳೆ ಆರೋಪಿ ಕೋಣನಕುಂಟೆ ಕ್ರಾಸ್ ಬಳಿ ಇರುವ ಉದಯ್ ಪ್ರೈಮ್ ಆಫೀಸ್ ಮುಂದೆ ಬರುವಂತೆ ಹೇಳಿದ್ದಾನೆ. ರಾಮು ಸ್ಥಳಕ್ಕೆ ತೆರಳುತ್ತಿದ್ದಂತೆಯೇ 8 ಮಂದಿಯ ತಂಡ ಅವರನ್ನು ಹತ್ಯೆ ಮಾಡಲು ಯತ್ನಿಸಿದೆ. ರಾಮು ಅವರ ಕುತ್ತಿಗೆ, ಎದೆ ಭಾಗಗಳಿಗೆ ಇರಿದ್ದಾರೆ. ಘಟನೆ ವೇಳೆ ಆರೋಪಿಗಳಿಂದ ರಾಮು ತಪ್ಪಿಸಿಕೊಂಡಿದ್ದಾರೆ.

ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದ ನಂತರ ರಾಮು ಅವರು, ಈ ಸಂಬಂಧ ಕಿರಣ್, ರಘು ಮತ್ತು ಇತರೆ ಆರು ಮಂದಿ ವಿರುದ್ಧ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಗೆ ಶನಿವಾರ ದೂರು ನೀಡಿದ್ದಾರೆ.

“ನನ್ನ ಬಳಿ ಬಜಾಜ್ ಸಿಟಿ 100 ಬೈಕ್ ಇತ್ತು, ಜನವರಿಯಲ್ಲಿ ಕಳವಾಗಿತ್ತು. ಸಂಚಾರ ನಿಯಮ ಉಲ್ಲಂಘನೆಗೆ ಶೇ.50ರಷ್ಟು ರಿಯಾಯಿತಿ ನೀಡುತ್ತಿರುವ ಬಗ್ಗೆ ಮಾಹಿತಿ ತಿಳಿದ ಹಿನ್ನೆಲೆಯಲ್ಲಿ ಕಳ್ಳತನವಾಗಿದ್ದ ಬೈಕ್ ನಿಂದ ಯಾವುದಾದರೂ ನಿಮಯ ಉಲ್ಲಂಘನೆಯಾಗಿದೆಯೇ ಎಂದು ಆ್ಯಪ್ ನಲ್ಲಿ ಪರಿಶೀಲನೆ ನಡೆಸುತ್ತಿದ್ದೆ. ಈ ವೇಳೆ ನಿಮಯ ಉಲ್ಲಂಘನೆಯಾಗಿರುವುದು ಹಾಗೂ ಫೋಟೋಗಳ ಸಿಕ್ಕಿತ್ತು. ಬೈಕ್ ನಲ್ಲಿ ಇಬ್ಬರು ಕುಳಿತಿರುವುದು ಕಂಡು ಬಂದಿತ್ತು. ಅದು ಬೈಕ್ ನಲ್ಲಿ ಸಂಜು ಮತ್ತು ರಘು ಎಂಬುವವರು ಕುಳಿತಿಕೊಂಡಿರುವುದು ಕಂಡು ಬಂದಿತ್ತು, ಬೈಕ್ ಕದ್ದ ನನ್ನ ಸ್ನೇಹಿತ ರಘು. ಅದನ್ನು ಸಂಜು ಎಂಬಾತನಿಗೆ ನೀಡಿದ್ದಾನೆ ಎಂದು ರಾಮು ಅವರು ಹೇಳಿದ್ದಾರೆ.

ಆರೋಪಿ ರಘು ಪ್ರತೀನಿತ್ಯ ರಾಮು ಅವರ ರೂಮ್'ಗೆ ಬಂದು ಹೋಗುತ್ತಿದ್ದ. ಇತ್ತೀಚೆಗೆ ರೂಮ್ ಗೆ ಬಂದಾಗ ರಾಮು ಬೈಕ್ ಬಗ್ಗೆ ಕೇಳಿದ್ದಾನೆ. ಈ ವೇಳೆ ರಘು ಬೆದರಿಕೆ ಹಾಕಿದ್ದಾನೆ.

ರಾಮು ಅವರ ಸಹೋದರ ಆರೋಪಿ ರಘು ಹಣ ನೀಡಬೇಕಿತ್ತು. ಹಣ ನೀಡಿದ ಕಾರಣ ರಾಮು ಬೈಕ್ ತೆಗೆದುಕೊಂಡಿದ್ದ ಎನ್ನಲಾಗಿದೆ.

ಈ ನಡುವೆ ಆರೋಪಿಗಳ ವಿರುದ್ಧ ಕೊಲೆ ಯತ್ನ (ಐಪಿಸಿ 307) ಮತ್ತು ಇತರ ಐಪಿಸಿ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com