ಇಂದಿರಾ ಕ್ಯಾಂಟೀನ್ ಗಳಿಗೆ ಬಿಬಿಎಂಪಿ ಆಯುಕ್ತ ಭೇಟಿ: ಅವ್ಯವಸ್ಥೆ ಕಂಡು ಅಸಮಾಧಾನ
ಹೆಬ್ಬಾಳ ಮತ್ತು ವಿಶ್ವನಾಥ ನಾಗೇನಹಳ್ಳಿ ವಾರ್ಡ್‌ನಲ್ಲಿರುವ ಇಂದಿರಾ ಕ್ಯಾಂಟೀನ್‌ಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಥಳದಲ್ಲಿನ ಪರಿಸ್ಥಿತಿ ಕಂಡು ಅಸಮಾಧಾನಗೊಂಡರು.
Published: 13th July 2023 12:24 PM | Last Updated: 13th July 2023 01:01 PM | A+A A-

ತುಷಾರ್ ಗಿರಿನಾಥ್.
ಬೆಂಗಳೂರು: ಹೆಬ್ಬಾಳ ಮತ್ತು ವಿಶ್ವನಾಥ ನಾಗೇನಹಳ್ಳಿ ವಾರ್ಡ್‌ನಲ್ಲಿರುವ ಇಂದಿರಾ ಕ್ಯಾಂಟೀನ್‌ಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಥಳದಲ್ಲಿನ ಪರಿಸ್ಥಿತಿ ಕಂಡು ಅಸಮಾಧಾನಗೊಂಡರು.
ಹೆಬ್ಬಾಳದಲ್ಲಿರುವ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಬಲ್ಬ್ ಕಾರ್ಯನಿರ್ವಹಿಸದಿರುವುದು ಕಂಡು ಬಂದಿತ್ತು. ಕೂಡಲೇ ಅದನ್ನು ಸರಿಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಇದಲ್ಲದೆ, ಕೈ ತೊಳೆಯುವ ನೀರಿನ ವ್ಯವಸ್ಥೆ ಮತ್ತು ಶುದ್ಧ ಕುಡಿಯುವ ನೀರಿನ ಘಟಕವನ್ನು ದುರಸ್ತಿ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.
ಇದೇ ವೇಳೆ ಕ್ಯಾಂಟೀನ್ ಸಮಯದಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ತೆರೆಯುವಂತೆ ಸಾರ್ವಜನಿಕರು ಮನವಿ ಮಾಡಿಕೊಂಡರು. ಈ ವೇಳೆ ಆಯುಕ್ತರು ಸಂಬಂಧ ಅಧಿಕಾರಿಗಳಿಗೆ ಸೂಚನೆ ನೀಡಿದರು. ಬಳಿಕ ಇಂದಿರಾ ಕ್ಯಾಂಟೀನ್‌ಗಳಿಗೆ ಮಾರ್ಷಲ್‌ಗಳನ್ನು ನಿಯೋಜಿಸಿ ಅವರಿಗೂ ಜವಾಬ್ದಾರಿ ನೀಡಬೇಕು ಎಂದು ವಲಯ ಜಂಟಿ ಆಯುಕ್ತರಿಗೆ ಸೂಚಿಸಿದರು.
ಇದನ್ನೂ ಓದಿ: ಇಂದಿರಾ ಕ್ಯಾಂಟೀನ್ ಆಹಾರದ ಗುಣಮಟ್ಟದ ಮೇಲೆ ಅಧಿಕಾರಿಗಳ ನಿಗಾ!
ಪರಿಶೀಲನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆಯುಕ್ತರು, ಇಂದಿರಾ ಕ್ಯಾಂಟೀನ್ ಗಳ ಆಹಾರದಲ್ಲಿ ಶೀಘ್ರದಲ್ಲೇ ಬದಲಾವಣೆಗಳಾಗಲಿವೆ. ಬೇರೆ ಬೇರೆ ಊಟ, ತಿಂಡಿ ಪೂರೈಕೆ ಮಾಡಲಾಗುವುದು ಎಂದು ಹೇಳಿದರು.
ಇಂದಿರಾ ಕ್ಯಾಂಟೀನ್ ಆಹಾರದ ಗುಣಮಟ್ಟ, ಹೆಚ್ಚು ಹಣ ಪಡೆಯುವ ವಿಚಾರವಾಗಿ ದೂರುಗಳಲ್ಲಿದ್ದಲ್ಲಿ ಪಾಲಿಕೆಯ ಉಚಿತ ಸಹಾಯವಾಣಿ ಸಂಖ್ಯೆ 1533ಕ್ಕೆ ಕರೆ ಮಾಡಿ ದೂರುಗಳನ್ನು ನೀಡಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಲಯ ಜಂಟಿ ಆಯುಕ್ತೆ ಪಲ್ಲವಿ, ಮುಖ್ಯ ಎಂಜಿನಿಯರ್ ಬಿ.ಎಸ್.ಪ್ರಹ್ಲಾದ್, ವಲಯ ಮುಖ್ಯ ಎಂಜಿನಿಯರ್ ಸುಗುಣ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳು ಉಪಸ್ಥಿತರಿದ್ದರು.