ಗುಂಡು ಪಾರ್ಟಿ ವೇಳೆ ಸ್ನೇಹಿತರ ಗಲಾಟೆ
ಗುಂಡು ಪಾರ್ಟಿ ವೇಳೆ ಸ್ನೇಹಿತರ ಗಲಾಟೆ

'ಗುಂಡು ಪಾರ್ಟಿ' ವೇಳೆ ಕಾಂಗ್ರೆಸ್ ಪಕ್ಷವನ್ನು ಶ್ಲಾಘಿಸಿದ ವ್ಯಕ್ತಿಗೆ ಸ್ವೇಹಿತರಿಂದಲೇ ಥಳಿತ

ತಂದೆಯಾದ ಖುಷಿಯಲ್ಲಿ ಸ್ನೇಹಿತರಿಗೆ 'ಗುಂಡು ಪಾರ್ಟಿ' ನೀಡಿದ್ದ ವ್ಯಕ್ತಿಗೆ ಆತನ ಸ್ನೇಹಿತರೇ ಥಳಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು: ತಂದೆಯಾದ ಖುಷಿಯಲ್ಲಿ ಸ್ನೇಹಿತರಿಗೆ 'ಗುಂಡು ಪಾರ್ಟಿ' ನೀಡಿದ್ದ ವ್ಯಕ್ತಿಗೆ ಆತನ ಸ್ನೇಹಿತರೇ ಥಳಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಹಲ್ಲೆಗೊಳಗಾದ ವ್ಯಕ್ತಿ 33 ವರ್ಷದ ವಿಕೆ ರಂಗನಾಥ್ ಎಂದು ತಿಳಿದುಬಂದಿದೆ. ಪೊಲೀಸ್ ಮೂಲಗಳ ಪ್ರಕಾರ ರಂಗನಾಥ್ ಫುಡ್ ಡೆಲಿವರಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ. ಅಮೃತ್ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತನ್ನ ಸ್ನೇಹಿತರೊಂದಿಗೆ ರೂಮಿನಲ್ಲಿ ವಾಸಿಸುತ್ತಿದ್ದ.

ತಂದೆಯಾದ ಖುಷಿಯಲ್ಲಿ ತನ್ನ ಸ್ನೇಹಿತರಿಗೆ ರಂಗನಾಥ್ ಗುಂಡುಪಾರ್ಟಿ ಆಯೋಜಿಸಿದ್ದರು. ಸಮೀಪದ ಬಾರ್ ವೊಂದರಲ್ಲಿ ಸ್ನೇಹಿತರೊಂದಿಗೆ ಬಿಯರ್ ಕುಡಿಯುತ್ತಿದ್ದ ರಂಗನಾಥ್ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ವೇಳೆ ಕರ್ನಾಟಕ ರಾಜಕೀಯ ವಿಚಾರವೂ ಚರ್ಚೆಗೆ ಬಂದಿದ್ದು, ರಂಗನಾಥ್ ಕಾಂಗ್ರೆಸ್ ಪಕ್ಷದ ಜಯದ ಕುರಿತು ಹರ್ಷ ವ್ಯಕ್ತಪಡಿಸಿದ್ದಾರೆ. ಇದರಿಂದ ಕೋಪಗೊಂಡ ಸ್ನೇಹಿತರು ವಾಕ್ಸಮರ ನಡೆಸಿದ್ದಾರೆ. 

ರಂಗನಾಥ್ ಸ್ನೇಹಿತರು ಬಿಜೆಪಿ ಬೆಂಬಲಿಗರು ಎನ್ನಲಾಗಿದ್ದು, ಕಾಂಗ್ರೆಸ್ ಬೆಂಬಲಕ್ಕೆ ನಿಂತ ರಂಗನಾಥ್ ವಿರುದ್ಧ ವಾಕ್ಸಮರ ನಡೆಸಿದ್ದಾರೆ. ನೋಡ ನೋಡುತ್ತವೇ ಈ ವಾಕ್ಸಮರ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದು ಈ ವೇಳೆ ರಂಗನಾಥ್ ಗೆ ಆತನ ಸ್ನೇಹಿತರು ಬಿಯರ್ ಬಾಟಲಿಯಿಂದ ತಲೆಗೆ ಹೊಡೆದಿದ್ದಾರೆ. ಮಧುಸೂಧನ್ ಎಂಬಾತ ಬಿಯರ್ ಬಾಟಲ್ ನಿಂದ ಹಲ್ಲೆ ಮಾಡುತ್ತಿದ್ದಂತೆಯೇ ಕುಮಾರ್ ಮತ್ತು ಪ್ರಸಾದ್ ಎಂಬುವವರು ಮಧುಸೂಧನ್ ನನ್ನು ತಡೆದರು. ಈ ವೇಳೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಬಾರ್ ಸಿಬ್ಬಂದಿ ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ.

ಸ್ಥಳಕ್ಕೆ ದೌಡಾಯಿಸಿದ ಅಮೃತಹಳ್ಳಿ ಪೊಲೀಸರು ಮಧುಸೂಧನ್, ಮನೋಜ್ ಕುಮಾರ್ ಮತ್ತು ಬಿ ಪ್ರಸಾದ್ ಎಂಬುವವರನ್ನು ವಶಕ್ಕೆ ಪಡೆದು ಐಪಿಸಿ 324 ಮತ್ತು ಇತರ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಸ್ತುತ ಹಲ್ಲೆಗೊಳಗಾದ ರಂಗನಾಥ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸೋಮವಾರ ಈ ಸಂಬಂಧ ಪ್ರಕರಣ ದಾಖಲಿಸಿದ್ದಾರೆ ಎನ್ನಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ ಅಮೃತಹಳ್ಳಿಯ ಈಶ್ವರ ದೇವಸ್ಥಾನದ ಬಳಿ ಆರೋಪಿಗಳ ಜತೆ ವಾಸವಿದ್ದರು. ಬಿಯರ್ ಪಾರ್ಟಿ ವೇಳೆ ಈ ಗಲಾಟೆಯಾಗಿದ್ದು ಗಲಾಟೆ ವಿಕೋಪಕ್ಕೆ ತಿರುಗಿ ಹಲ್ಲೆ ಮಾಡಲಾಗಿದೆ. ರಂಗನಾಥ್ ಅವರ ಕುತ್ತಿಗೆಗೆ ಆರು ಹೊಲಿಗೆ ಹಾಕಲಾಗಿ, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಲಾಗಿದ್ದು, ಬಂಧಿತ ಇಬ್ಬರನ್ನು ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಸಂತ್ರಸ್ತ ಮತ್ತು ಆರೋಪಿಗಳು ಕಳೆದ ಆರರಿಂದ ಏಳು ತಿಂಗಳಿಂದ ಒಟ್ಟಿಗೆ ವಾಸಿಸುತ್ತಿದ್ದಾರೆ. ಮೂರನೇ ಆರೋಪಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಈ ಬಗ್ಗೆ ಮಾತನಾಡಿರುವ ರಂಗನಾಥ್, “ನಾನು ಈಗ ಪ್ರತ್ಯೇಕವಾಗಿಯೇ ಇದ್ದೇನೆ. ಇತರ ರೂಮ್‌ಮೇಟ್‌ಗಳು ಸಹ ಆಹಾರ ವಿತರಣಾ ಏಜೆಂಟ್‌ಗಳಾಗಿದ್ದಾರೆ. ರಕ್ತಸ್ರಾವದಿಂದ ಬಳಲುತ್ತಿದ್ದ ನನ್ನನ್ನು ಆಸ್ಪತ್ರೆಗೆ ತಲುಪಿಸಲು ಮತ್ತೊಬ್ಬ ಸ್ನೇಹಿತ ನೆರವಾದರು ಎಂದು ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com