ಬೆಂಗಳೂರು: ವೃದ್ಧೆ ಹತ್ಯೆ ಪ್ರಕರಣ, ಮೂವರ ಬಂಧನ
ಇತ್ತೀಚೆಗೆ ಒಂಟಿ ವೃದ್ಧೆಯ ಕೈ-ಕಾಲು ಕಟ್ಟಿ ಬಾಯಿಗೆ ಬಟ್ಟೆ ತುರುಕಿ ಹತ್ಯೆಗೈದು ಚಿನ್ನಾಭರಣ ದೋಚಿದ್ದ ಪ್ರಕರಣ ಸಂಬಂಧ ಪ್ಲಂಬರ್ ಸೇರಿ ಮೂವರನ್ನು ಮಹಾಲಕ್ಷ್ಮೀ ಲೇಔಟ್ ಠಾಣೆ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
Published: 03rd June 2023 12:47 PM | Last Updated: 03rd June 2023 05:04 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಇತ್ತೀಚೆಗೆ ಒಂಟಿ ವೃದ್ಧೆಯ ಕೈ-ಕಾಲು ಕಟ್ಟಿ ಬಾಯಿಗೆ ಬಟ್ಟೆ ತುರುಕಿ ಹತ್ಯೆಗೈದು ಚಿನ್ನಾಭರಣ ದೋಚಿದ್ದ ಪ್ರಕರಣ ಸಂಬಂಧ ಪ್ಲಂಬರ್ ಸೇರಿ ಮೂವರನ್ನು ಮಹಾಲಕ್ಷ್ಮೀ ಲೇಔಟ್ ಠಾಣೆ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಆರೋಪಿಗಳನ್ನು ಲಗ್ಗೆರೆಯಲ್ಲಿ ವಾಸವಾಗಿರುವ ಪ್ಲಂಬರ್ ಆರ್ ಅಶೋಕ್ (40), ಕೆಂಪೇಗೌಡ ಲೇಔಟ್‌ನ ಎಂ ಸಿದ್ದರಾಜು (34) ಮತ್ತು ಕಾಮಾಕ್ಷಿಪಾಳ್ಯದ ಸಿ ಅಂಜನಾ ಮೂರ್ತಿ (33) ಎಂದು ಗುರುತಿಸಲಾಗಿದೆ.
ಕೊಲೆಯ ನಂತರ ಮೂವರು ಮೈಸೂರಿಗೆ ತಲೆಮರೆಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿತ್ತು. ಆರೋಪಿಗಳ ಪತ್ತೆಗೆ ಮೈಸೂರಿಗೆ ತೆರಳಿದ್ದ ಪೊಲೀಸರು ಅಲ್ಲಿಂದಲೇ ಮೂವರನ್ನು ಬಂಧನಕ್ಕೊಳಪಡಿಸಿದ್ದಾರೆ.
ಸಾಲ ಮಾಡಿಕೊಂಡಿದ್ದ ಆರೋಪಿಗಳು, ಅದನ್ನು ತೀರಿಸಲು ಸಾಧ್ಯವಾಗಿಲ್ಲ. ಹೀಗಾಗಿ ದರೋಡೆ ಮಾಡಲು ನಿರ್ಧರಿಸಿದ್ದರು ಎಂದು ತಿಳಿದುಬಂದಿದೆ.
ಪ್ಲಂಬರ್ ಆಗಿದ್ದ ಆರೋಪಿ ಅಶೋಕ್ ಮೂರು ತಿಂಗಳುಗಳ ಹಿಂದೆ ಹತ್ಯೆಯಾದ ಕಮಲಾ ಅವರ ಮನೆಗೆ ದುರಸ್ತಿ ಕಾರ್ಯಕ್ಕಾಗಿ ಮನೆಗೆ ಭೇಟಿ ನೀಡಿದ್ದ. ಈ ವೇಳೆ ಮನೆಯಲ್ಲಿ ವೃದ್ಧೆಯೊಬ್ಬಳೇ ಇರುವುದನ್ನು ಪತ್ತೆ ಮಾಡಿದ್ದ. ಇದರಂತೆ ಹಣಕ್ಕಾಗಿ ತನ್ನಿಬ್ಬರು ಸ್ನೇಹಿತರ ಜೊತೆಗೂಡಿ ಸಂಚು ರೂಪಿಸಿದ್ದ.
ಇದನ್ನೂ ಓದಿ: ಬೆಂಗಳೂರು: ಕಾಂಗ್ರೆಸ್ ಪಕ್ಷ ಕೊಂಡಾಡಿದ ವ್ಯಕ್ತಿಯ ಮೇಲೆ ಹಲ್ಲೆ!
ಹತ್ಯೆಯಾದ ಕಮಲಾ ಅವರ ಮನೆಯ ಕಟ್ಟಡದ ಒಂದ ಭಾಗ ಖಾಲಿಯಿದ್ದು, ಮೇ.27ರಂದು ಕಮಲಾ ಅವರ ಮನೆ ಬಳಿ ಬಾಡಿಗೆದಾರರ ಸೋಗಿನಲ್ಲಿ ತೆರಳಿದ್ದ ಆರೋಪಿಗಳಾದ ಸಿದ್ದರಾಜು ಮತ್ತು ಮೂರ್ತಿ ಗೋಡೌನ್ ಗಾಗಿ ಬಾಡಿಗೆಗೆ ಜಾಗ ನೀಡುವಂತೆ ಕೇಳಿದ್ದರು, ಈ ವೇಳೆ ಕಮಲಾ ಅವರು ನಿರಾಕರಿಸಿದ್ದಾರೆ. ಸಂಜೆ ಮತ್ತೆ ಪ್ಲಂಬರ್ ಅಶೋಕ್ ಮನೆ ಬಳಿ ಹೋಗಿದ್ದಾನೆ. ಗೊತ್ತಿದ್ದ ವ್ಯಕ್ತಿಯಾಗಿದ್ದರಿಂದ ಕಮಲಾ ಅವರು ಬಾಗಿಲು ತೆರೆದಿದ್ದಾರೆ. ಈ ವೇಳೆ ಮತ್ತಿಬ್ಬರು ಆರೋಪಿಗಳು ಒಳಗೆ ನುಗ್ಗಿದ್ದಾರೆ. ಬಳಿಕ ವೃದ್ಧೆಯ ಕೈಕಾಲುಗಳನ್ನು ಬಟ್ಟೆಯಿಂದ ಕಟ್ಟಿ ಬಾಯಿಗೂ ಬಟ್ಟೆ ತುರಿಕಿ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾರೆ.ಬಳಿಕ ಮೈ ಮೇಲಿದ್ದ 40 ಗ್ರಾಮ ತೂಕದ ಎರಡು ಚಿನ್ನದ ಸರಗಳು ಹಾಗೂ 2 ಚಿನ್ನದ ಬಳೆಗಳನ್ನು ದೋಚಿ ಪರಾರಿಯಾಗಿದ್ದಾರೆ.
ಈ ಸಂಬಂಧ ಮೃತಳ ಪುತ್ರ ಗುರುಪ್ರಸಾದ್ ನೀಡಿದ ದೂರಿನ ಮೇಲೆಗೆ ಪೊಲೀಸರು ಕಾರ್ಯಾಚರಣೆಗಿಳಿದಿದ್ದರು. ಇದರಂತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಕಮಲಾ ಅವರು ಪತಿ ನಾಗರಾಜ್ ಅವರನ್ನು ಕಳೆದುಕೊಂಡಿದ್ದರು. ನಂತರ ಕಮಲಾ ಅವರು ಒಂಟಿಯಾಗಿ ನೆಲೆಸಿದ್ದರು. ಮದುವೆಯಾದ ಇವರ ಮೂವರು ಮಕ್ಕಳು ನಗರದ ವಿವಿಧೆಡೆ ನೆಲೆಸಿದ್ದಾರೆ.