ಬೆಂಗಳೂರು: ಕಲುಷಿತ ನೀರು ಕುಡಿದು ಮಕ್ಕಳು ಸೇರಿ 120 ಮಂದಿ ಅಸ್ವಸ್ಥ!
ಕಲುಷಿತ ನೀರು ಕುಡಿದು 98 ಮಕ್ಕಳು ಮತ್ತು ಹಿರಿಯ ನಾಗರೀಕರು ಸೇರಿದಂತೆ 120ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿರುವ ಘಟನೆ ಇಲೆಕ್ಟ್ರಾನಿಕ್ಸ್ ಸಿಟಿಯ ಹೊಸ ರಸ್ತೆಯಲ್ಲಿರುವ ಮಹಾವೀರ್ ರಾಂಚಸ್ ಅಪಾರ್ಟ್‌ಮೆಂಟ್‌ನಲ್ಲಿ ಜೂನ್ 5 ರಂದು ನಡೆದಿದೆ.
Published: 09th June 2023 10:24 AM | Last Updated: 16th June 2023 01:55 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಕಲುಷಿತ ನೀರು ಕುಡಿದು 98 ಮಕ್ಕಳು ಮತ್ತು ಹಿರಿಯ ನಾಗರೀಕರು ಸೇರಿದಂತೆ 120ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿರುವ ಘಟನೆ ಇಲೆಕ್ಟ್ರಾನಿಕ್ಸ್ ಸಿಟಿಯ ಹೊಸ ರಸ್ತೆಯಲ್ಲಿರುವ ಮಹಾವೀರ್ ರಾಂಚಸ್ ಅಪಾರ್ಟ್‌ಮೆಂಟ್‌ನಲ್ಲಿ ಜೂನ್ 5 ರಂದು ನಡೆದಿದೆ.
ಕಳೆದೆರಡು ದಿನಗಳಿಂದ ಕಲುಷಿತ ನೀರು ಕುಡಿದು ಮೂವರು ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದು, ಉಳಿದವರು ವಾಂತಿ ಭೇದಿ, ಜ್ವರದಿಂದ ಬಳಲುತ್ತಿದ್ದಾರೆ. ಶಾಲೆಗೆ ಹೋದ ಮಕ್ಕಳಿಗೆ ಶಾಲೆಯಲ್ಲೆ ಆನಾರೋಗ್ಯ ಕಾಣಿಸಿಕೊಂಡು ಮನೆಗೆ ವಾಪಸ್ಸಾಗುತ್ತಿದ್ದಾರೆಂದು ತಿಳಿದುಬಂದಿದೆ.
ಆಸ್ಪತ್ರೆಗೆ ದಾಖಲಾಗಿರುವ ಮೂವರು ಮಕ್ಕಳಲ್ಲಿ ಒಂದು ಬಿಡುಗಡೆಯಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ.
ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ಡಾ.ಕೆ.ವಿ.ತ್ರಿಲೋಕ್ ಚಂದ್ರ ಮಾತನಾಡಿ, ‘ಸ್ಥಳದ ಪರಿಸ್ಥಿತಿಯನ್ನು ಅಧ್ಯಯನ ಮಾಡಲು ನಾವು ಬಿಬಿಎಂಪಿ ಅಧಿಕಾರಿಗಳು ಮತ್ತು ವೈದ್ಯರ ತಂಡವನ್ನು ಕಳುಹಿಸಲಾಗಿದೆ. ಎಲ್ಲಾ ರೋಗಿಗಳ ಸ್ಥಿತಿ ಇದೀಗ ಸ್ಥಿರವಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಕೊಪ್ಪಳದಲ್ಲಿ ಕಲುಷಿತ ನೀರು ಸೇವಿಸಿ ಮೂವರ ಸಾವು: ಜಲ ಜೀವನ್ ಮಿಷನ್ ಪೈಪ್‌ಲೈನ್ ಕಾಮಗಾರಿಗೆ ಗ್ರಾಮಸ್ಥರ ಆರೋಪ
ನೀರಿನ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರವಷ್ಟೇ ಕಾರಣಗಳು ತಿಳಿದು ಬರಲಿದೆ. ಎಲ್ಲಾ ನಿವಾಸಿಗಳಿಗೆ ಆರೋಗ್ಯ ತಪಾಸಣೆಗೆ ಶಿಬಿರವನ್ನು ಕೂಡ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.
ಪಾಲಿಕೆಯು ಅಪಾರ್ಟ್‌ಮೆಂಟ್‌ಗೆ ಇನ್ನೂ ಸ್ವಾಧೀನ ಪ್ರಮಾಣಪತ್ರ ನೀಡಿಲ್ಲ ಎನ್ನಲಾಗುತ್ತಿದ್ದು, ಕೆಲವು ನಿವಾಸಿಗಳು ಬಿಲ್ಡರ್‌ನಿಂದಾಗಿ ವಿಳಂಬವಾಗಿದೆ ಎಂದು ಆರೋಪಿಸಿದ್ದಾರೆ.
ಫ್ಲ್ಯಾಟ್ ಗಳಲ್ಲಿರುವ ಜನರಿಗೆ ಕೊಳವೆಬಾವಿಗಳು ಮತ್ತು ಟ್ಯಾಂಕರ್‌ಗಳಿಂದ ನೀರು ಸರಬರಾಜು ಮಾಡಲಾಗುತ್ತಿದ್ದು, ಕೊಳವೆ ಬಾವಿ ಅಥವಾ ಟ್ಯಾಂಕರ್‌ನಿಂದ ನೀರು ಕಲುಷಿತವಾಗಿರಬಹುದು ಅಥವಾ ಅಪಾರ್ಟ್‌ಮೆಂಟ್‌ನಲ್ಲಿರುವ ಶೇಖರಣಾ ತೊಟ್ಟಿಯೇ ಕಲುಷಿತವಾಗಿರಬಹುದು ಎಂದು ಹೇಳಲಾಗುತ್ತಿದೆ.
ಪ್ರಸ್ತುತ, ಪಾಲಿಕೆಯು ನಿವಾಸಿಗಳಿಗೆ ಕುಡಿಯಲು ಮತ್ತು ಇತರ ಗೃಹಬಳಕೆ ಉದ್ದೇಶಗಳಿಗಾಗಿ ನೀರನ್ನು ಪೂರೈಕೆ ಮಾಡುತ್ತಿದೆ.
ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ.ಎ.ಎಸ್.ಬಾಲಸುಂದರ್ ಮಾತನಾಡಿ, ಅಪಾರ್ಟ್‌ಮೆಂಟ್ ಮಾಲೀಕರಿಗೆ ಮತ್ತು ನೀರು ಪೂರೈಸುವ ಟ್ಯಾಂಕರ್ ಮಾಲೀಕರಿಗೆ ನೋಟಿಸ್ ನೀಡಲಾಗಿದೆ ಎಂದು ಹೇಳಿದ್ದಾರೆ.