ಉಚಿತ ಭಾಗ್ಯಗಳ ಭರಾಟೆ: ರಾಜ್ಯವನ್ನು ಕಾಡುತ್ತಿದೆ 'ಆರೋಗ್ಯಕರ ಆರ್ಥಿಕತೆ'ಯ ಆತಂಕ!

ವಿದ್ಯುತ್ ದರ ಏರಿಕೆಯನ್ನು ಹಿಂಪಡೆಯುವಂತೆ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಹಾಗೂ ಇಂಡಸ್ಟ್ರಿ ಕಾಂಗ್ರೆಸ್ ಸರ್ಕಾರಕ್ಕೆ ಒಂದು ವಾರಗಳ ಗಡುವು ವಿಧಿಸಿದೆ.
ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆ
ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆ

ಬೆಂಗಳೂರು: ವಿದ್ಯುತ್ ದರ ಏರಿಕೆಯನ್ನು ಹಿಂಪಡೆಯುವಂತೆ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಹಾಗೂ ಇಂಡಸ್ಟ್ರಿ ಕಾಂಗ್ರೆಸ್ ಸರ್ಕಾರಕ್ಕೆ ಒಂದು ವಾರಗಳ ಗಡುವು ವಿಧಿಸಿದೆ. ಒಂದು ವೇಳೆ ದರ ಏರಿಕೆಯನ್ನು ಹಿಂಪಡೆಯದೇ ಇದ್ದಲ್ಲಿ ಎಲ್ಲಾ ಕೈಗಾರಿಕೆಗಳನ್ನೂ ಬಂದ್ ಮಾಡಿ ಪ್ರತಿಭಟನೆಯ ಎಚ್ಚರಿಕೆಯನ್ನು ಕೆಸಿಸಿಐ ನೀಡಿದೆ.

ಇನ್ನು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಳೆದ ಬಜೆಟ್ ನಲ್ಲಿ ರೈತರಿಗೆ ಬೆಂಬಲ ಬೆಲೆ ನೀಡಲು ಘೋಷಿಸಿದ್ದ 1,500 ಕೋಟಿ ರೂಪಾಯಿ ಅನುದಾನವನ್ನು ಈ ಕಾಂಗ್ರೆಸ್ ಸರ್ಕಾರ ವಾಪಸ್ ಪಡೆಯುತ್ತದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ. ಇದಷ್ಟೇ ಅಲ್ಲದೇ ರಾಜ್ಯಾದ್ಯಂತ 9,556 ಶಾಲಾ ಕಟ್ಟಡಗಳನ್ನು ನಿರ್ಮಿಸುವುದಕ್ಕಾಗಿ ನೀಡಲಾಗಿದ್ದ ಅನುದಾನವನ್ನು ಬೇರೆಯ ಉದ್ದೇಶಗಳಿಗೆ ಬಳಕೆ ಮಾಡಲಾಗುತ್ತದೆ ಎಂಬ ಅನುಮಾನವನ್ನೂ ಬೊಮ್ಮಾಯಿ ಹೊರಹಾಕಿದ್ದಾರೆ. 

ಕ್ಯಾನ್ಸರ್ ರೋಗಿಗಳಿಗೆ ಉಚಿತ ಕಿಮೋಥೆರೆಪಿ ಚಿಕಿತ್ಸೆ ಹಾಗೂ ಉಚಿತ ಡಯಾಲಿಸಿಸ್ ವ್ಯವಸ್ಥೆಯನ್ನು ಸ್ಥಗಿತಗೊಳಿಸುವ ಆತಂಕವನ್ನೂ ಬೊಮ್ಮಾಯಿ ಹೊರಹಾಕಿದ್ದಾರೆ.

ಮೆಟ್ರೋ, ಯೋಜನೆ, ಸಬ್ ಅರ್ಬನ್ ಯೋಜನೆಗಳಿಗೆ ನೀಡಲಾಗಿದ್ದ ಅನುದಾನದಲ್ಲಿಯೂ ಕಡಿತವಾಗಲಿದೆ ಎಂಬ ಊಹಾಪೋಹಗಳೆದುರಾಗಿದ್ದು, ಉಚಿತ ಕೊಡುಗೆಗಳ ಪರಿಣಾಮವಾಗಿ ಇಷ್ಟೆಲ್ಲಾ ಕಡಿತಗೊಳ್ಳುವ ಆತಂಕ ಮೂಡಿದೆ. 

ದೃಢವಾದ ಆರ್ಥಿಕತೆ ಹಾಗೂ ಗರಿಷ್ಠ ಆದಾಯವನ್ನು ಗಳಿಸುತ್ತಿರುವ ರಾಜ್ಯಗಳ ಪೈಕಿ ಒಂದಾಗಿರುವ ರಾಜ್ಯದಲ್ಲಿ ಈಗ ಉಚಿತ ಕೊಡುಗೆಗಳ ಭರಾಟೆ ಎದುರಾಗಿದ್ದು, ಆರ್ಥಿಕ ಶಿಸ್ತಿನ ಮೇಲೆ ಕರಿನೆರಳು ಆವರಿಸುವ ಆತಂಕ ಮೂಡಿದೆ.

ಕಾಂಗ್ರೆಸ್ ಪಕ್ಷ ಚುನಾವಣಾ ಪೂರ್ವ ನೀಡಿರುವ ಗ್ಯಾರೆಂಟಿಗಳನ್ನು ಈಡೇರಿಸುವುದಕ್ಕೆ ವಾರ್ಷಿಕ 59,000 ಕೋಟಿ ರೂಪಾಯಿ ಅಗತ್ಯವಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಪ್ರಸಕ್ತ ಆರ್ಥಿಕ ವರ್ಷದ ಉಳಿದ ತಿಂಗಳುಗಳಿಗೆ ಈ ಯೋಜನೆಗಳನ್ನು ಜಾರಿಗೆ ತರಲು 41,000 ಕೋಟಿ ರೂಪಾಯಿ ಅಗತ್ಯವಿದೆ.

2022-23 ರಲ್ಲಿ ರಾಜ್ಯ ಶೇ.7.9 ರಷ್ಟು ಆರ್ಥಿಕ ಬೆಳವಣಿಗೆ ಹೊಂದಿದ್ದು, ತಲಾದಾಯ 2.04 ರಿಂದ 3.32 ಲಕ್ಷಕ್ಕೆ ಏರಿಕೆಯಾಗಿದೆ ಎಂದು ಆರ್ಥಿಕ ಮತ್ತು ಅಂಕಿಅಂಶಗಳ ನಿರ್ದೇಶನಾಲಯ ಮಾಹಿತಿ ನೀಡಿದೆ. ಇದಕ್ಕೆ ಪೂರಕವೆಂಬಂತೆ 2023-24 ರಲ್ಲಿ ಸಿಎಂ ಬೊಮ್ಮಾಯಿ ಹೆಚ್ಚು ಆದಾಯದ ಬಜೆಟ್ ಮಂಡಿಸಿದ್ದರು ಆದರೆ ಈಗಿನ ಸರ್ಕಾರ ಉಚಿತ ಯೋಜನೆಗಳಿಗಾಗಿ ವಾರ್ಷಿಕ 59,000 ಕೋಟಿ ರೂಪಾಯಿ ಖರ್ಚು ಮಾಡಲು ಮುಂದಾಗಿದ್ದು, ವಿಪಕ್ಷಗಳು ಆಗ್ರಹಿಸುತ್ತಿರುವಂತೆ ಸರ್ಕಾರವೇನಾದರೂ ಬೇಷರತ್ ಆಗಿ ಯೊಜನೆಗಳನ್ನು ಜಾರಿಗೊಳಿಸಲು ಮುಂದಾಗಿದ್ದೇ ಆದಲ್ಲಿ ಖರ್ಚಿನ ಹೊರೆ 1 ಲಕ್ಷ ಕೋಟಿ ರೂಪಾಯಿಗಳಿಗೆ ಏರಿಕೆಯಾಗಲಿದೆ.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಐದು ಗ್ಯಾರೆಂಟಿ ಯೋಜನೆ ಜಾರಿಯಿಂದ ರಾಜ್ಯ ಸರ್ಕಾರಕ್ಕೆ ಹೊರೆಯಾಗಲಿದೆ ಎಂದು ಹೇಳಿದ್ದರು. ಆದರೆ, ಬಡವರು ಯೋಜನೆಯಿಂದ ಪ್ರಯೋಜನ ಪಡೆಯುತ್ತಾರೆ ಎಂದು ಸಮರ್ಥಿಸಿಕೊಂಡಿದ್ದಾರೆ. 

ಒಂದು ವೇಳೆ ಸರ್ಕಾರ ಷರತ್ತು ವಿಧಿಸಿ ಯೋಜನೆಗಳನ್ನು ಜಾರಿಗೊಳಿಸಲು ಮುಂದಾದರೆ, ಅದರ ಖರ್ಚು ಬಜೆಟ್ ನ 3ನೇ ಒಂದರಷ್ಟಾಗಲಿದೆ. ಸದ್ಯದ ಪರಿಸ್ಥಿತಿಯಲ್ಲಿ ಸಾಲದ ಮೊರೆ ಹೋಗದೆ ಬಾಧ್ಯತೆಗಳನ್ನು ಪೂರೈಸುವುದು ಅಸಾಧ್ಯ ಎಂದು ಹಣಕಾಸು ಇಲಾಖೆ ಮೂಲಗಳು ವಿವರಿಸಿವೆ. ರಾಜ್ಯ ಈಗಾಗಲೇ 5.64 ಲಕ್ಷ ಕೋಟಿ ಸಾಲದ ಬಾಧ್ಯತೆಯನ್ನು ಹೊಂದಿದೆ.

ಇಷ್ಟೆಲ್ಲಾ ಸವಾಲುಗಳ ನಡುವೆ, ಬಜೆಟ್ ಮಂಡನೆಯಲ್ಲಿ ದಾಖಲೆ ನಿರ್ಮಿಸಿರುವ ಸಿದ್ದರಾಮಯ್ಯ, ರಾಜ್ಯದ ಬಜೆಟ್ ಗಾತ್ರ 3.9 ಲಕ್ಷ ಕೋಟಿಯಾಗಿದ್ದು, ಅನುದಾನಗಳನ್ನು ಹೊಂದಿಸುವುದು ಕಷ್ಟಸಾಧ್ಯವೇನಲ್ಲ, ನಾನು 7 ಬಜೆಟ್ ಮಂಡನೆ ಮಾಡಿದ್ದೆನೆ. ಆರ್ಥಿಕತೆ ಬಗ್ಗೆ ಅರಿವಿದೆ ಎಂದು ಹೇಳಿದ್ದು, ಪ್ರತಿ ವರ್ಷ 56,000 ಕೋಟಿ ರೂಪಾಯಿಗಳಷ್ಟು ಬಡ್ಡಿ ಕಟ್ಟುವ ನಮಗೆ, ನಮ್ಮ ಜನಕ್ಕಾಗಿ 50,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲು ಸಾಧ್ಯವಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com