ವಂಚನೆ ಆರೋಪ: ನಕಲಿ ಐಪಿಎಸ್‌ ಅಧಿಕಾರಿ ಬಂಧನ 

ಡಿಪ್ಲೊಮಾ ಪಡೆದಿರುವ ಚಂದ್ರಾ ಲೇಔಟ್‌ನ ಮಾರುತಿನಗರದ ನಿವಾಸಿ ಆರ್.ಶ್ರೀನಿವಾಸ್ (34) ಐಪಿಎಸ್ ಅಧಿಕಾರಿ ಎಂದು ಹೇಳಿ ಉದ್ಯಮಿಯೊಬ್ಬರಿಗೆ 1.75 ಕೋಟಿ ರೂಪಾಯಿಗಳಷ್ಟು ವಂಚಿಸಿದ ಆರೋಪದ ಮೇಲೆ ತಲಘಟ್ಟಪುರ ಪೊಲೀಸರು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಡಿಪ್ಲೊಮಾ ಪಡೆದಿರುವ ಚಂದ್ರಾ ಲೇಔಟ್‌ನ ಮಾರುತಿನಗರದ ನಿವಾಸಿ ಆರ್.ಶ್ರೀನಿವಾಸ್ (34) ಐಪಿಎಸ್ ಅಧಿಕಾರಿ ಎಂದು ಹೇಳಿ ಉದ್ಯಮಿಯೊಬ್ಬರಿಗೆ 1.75 ಕೋಟಿ ರೂಪಾಯಿಗಳಷ್ಟು ವಂಚಿಸಿದ ಆರೋಪದ ಮೇಲೆ ತಲಘಟ್ಟಪುರ ಪೊಲೀಸರು ಬಂಧಿಸಿದ್ದಾರೆ.

ಕಳೆದ ವರ್ಷ ಜೂನ್‌ನಲ್ಲಿ ಬೆಂಗಳೂರು ದಕ್ಷಿಣ ವಿಭಾಗದಲ್ಲಿ ಎಎಸ್‌ಪಿಯಾಗಿ ಕಾರ್ಯನಿರ್ವಹಿಸುತ್ತಿರುವ ಐಪಿಎಸ್ ಅಧಿಕಾರಿ ಎಂದು ಶ್ರೀನಿವಾಸ್ ಪರಿಚಯಿಸಿಕೊಂಡಿದ್ದು, ತನ್ನ ಸ್ನೇಹಿತನ ಮೂಲಕ ಸಂಪರ್ಕಕ್ಕೆ ಬಂದಿರುವುದಾಗಿ ಹೇಳಿಕೊಂಡಿದ್ದ ಎಂದು ಹೊಟೇಲ್ ಡೀಲರ್ ವೆಂಕಟನಾರಾಯಣ್ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ತಾನು ಮೈಸೂರಿನಲ್ಲಿ ವ್ಯಾಜ್ಯ ಆಸ್ತಿ ಪ್ರಕರಣವನ್ನು ನಿರ್ವಹಿಸುತ್ತಿದ್ದೇನೆ ಎಂದು ಆರೋಪಿ ಹೇಳಿಕೊಂಡಿದ್ದು, ಇದರಿಂದ ತನಗೆ 250 ಕೋಟಿ ರೂಪಾಯಿ ಬರಲಿದ್ದು ಇದಕ್ಕಾಗಿ 2.5 ಕೋಟಿ ರೂಪಾಯಿ ಖರ್ಚಾಗುತ್ತದೆ, ತಾವು ಕೊಡಬೇಕೆಂದು ಕೇಳಿಕೊಂಡಿದ್ದ. ಅದರಂತೆ ದೂರುದಾರರು ಕಳೆದ ವರ್ಷ 49 ಲಕ್ಷ ರೂಪಾಯಿಗಳನ್ನು ಆರೋಪಿಗೆ ನೀಡಿದ್ದು ಅದನ್ನು ಕಳೆದ ಡಿಸೆಂಬರ್ ನಲ್ಲಿ ವಿಶ್ವಾಸ ಗಳಿಸಲು ಹಿಂತಿರುಗಿಸಿದ್ದ.  ಮತ್ತಷ್ಟು ನಂಬುಗೆ ಗಳಿಸಲು ಶ್ರೀನಿವಾಸ್ ವೆಂಕಟನಾರಾಯಣ ಅವರನ್ನು ತನ್ನ ಭಾವಿ ಪತ್ನಿ ರಮ್ಯಾ ಮನೆಗೆ ಪೂಜೆಗೆಂದು ಕರೆದೊಯ್ದಿದ್ದ. 

ದೂರುದಾರರು ಹೊಟೇಲ್ ಉದ್ಯಮಿಯಿಂದ 1.20 ಕೋಟಿ ರೂಪಾಯಿ ಹಾಗೂ ಆತನ ಸ್ನೇಹಿತರಿಂದ 56 ಲಕ್ಷ ರೂಪಾಯಿ ಹಣ ಹೊಂದಿಸಿ ಆರೋಪಿಗೆ ನೀಡಿದ್ದು, ಬಳಿಕ ಶ್ರೀನಿವಾಸ್‌ ಫೋನ್‌ ಸ್ವಿಚ್‌ ಆಫ್‌ ಮಾಡಿಕೊಂಡು ಕೈಗೆ ಸಿಗುತ್ತಿರಲಿಲ್ಲ. ನಂತರ ವೆಂಕಟನಾರಾಯಣ ಅವರು ರಮ್ಯಾ ಅವರನ್ನು ಸಂಪರ್ಕಿಸಲು ಯತ್ನಿಸಿದ್ದು, ಅವರ ಫೋನ್ ಕೂಡ ಸ್ವಿಚ್‌ ಆಗಿತ್ತು. ಮೋಸ ಹೋಗಿರುವುದನ್ನು ಅರಿತು ಪೊಲೀಸರಿಗೆ ದೂರು ನೀಡಿದ್ದು, ದೂರಿನ ಮೇರೆಗೆ ನಕಲಿ ಅಧಿಕಾರಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

2010ರಲ್ಲಿ ಕಾರು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯನಗರ ಪೊಲೀಸರು ಈತನನ್ನು ಬಂಧಿಸಿದ್ದು, ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com