ಅಂತರರಾಷ್ಟ್ರೀಯ ಪ್ರವಾಸೋದ್ಯಮ ನಕ್ಷೆಯಲ್ಲಿ ಕೊಡಗಿಗೆ ಸ್ಥಾನ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ
ಅಂತರರಾಷ್ಟ್ರೀಯ ಪ್ರವಾಸೋದ್ಯಮ ನಕ್ಷೆಯಲ್ಲಿ ಕೊಡಗನ್ನು ಸೇರಿಸಲಾಗುವುದು ಮತ್ತು ಅದನ್ನು ಖಚಿತಪಡಿಸಿಕೊಳ್ಳಲು ಯೋಜನೆಗಳನ್ನು ರೂಪಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಡಿಕೇರಿಯಲ್ಲಿ ಹೇಳಿದರು.
Published: 19th March 2023 08:22 AM | Last Updated: 19th March 2023 08:22 AM | A+A A-

ಬಸವರಾಜ ಬೊಮ್ಮಾಯಿ
ಮಡಿಕೇರಿ: ಅಂತರರಾಷ್ಟ್ರೀಯ ಪ್ರವಾಸೋದ್ಯಮ ನಕ್ಷೆಯಲ್ಲಿ ಕೊಡಗನ್ನು ಸೇರಿಸಲಾಗುವುದು ಮತ್ತು ಅದನ್ನು ಖಚಿತಪಡಿಸಿಕೊಳ್ಳಲು ಯೋಜನೆಗಳನ್ನು ರೂಪಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಡಿಕೇರಿಯಲ್ಲಿ ಹೇಳಿದರು. ಕೊಡಗಿನ ಕಾಫಿ ಎಸ್ಟೇಟ್‌ಗಳಲ್ಲಿ ಅಳವಡಿಸಲಾಗಿರುವ 10 ಎಚ್‌ಪಿಯವರೆಗಿನ ನೀರಾವರಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ವಿಸ್ತರಿಸುವುದಾಗಿ ಅವರು ಘೋಷಿಸಿದರು.
ಗಾಂಧಿ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ವಿವಿಧ ಯೋಜನೆಗಳ ಉದ್ಘಾಟಿಸಿ ಮಾತನಾಡಿದ ಅವರು, ‘ರಾಜ್ಯ ಬಜೆಟ್‌ನಲ್ಲಿ ಜಿಲ್ಲೆಗೆ ವಿಶೇಷ ಪ್ಯಾಕೇಜ್‌ನಡಿ 100 ಕೋಟಿ ರೂ., ಕೊಡವ ಭಾಷಿಕ ಸಮುದಾಯದ ಅಭಿವೃದ್ಧಿಗೆ 10 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ. ಬೆಂಗಳೂರಿನಲ್ಲಿ ಕೊಡವ ಸಮುದಾಯಕ್ಕೆ ರಾಜ್ಯವು ಏಳು ಎಕರೆ ಭೂಮಿಯನ್ನು ನೀಡಿದೆ' ಎಂದರು. ಜಿಲ್ಲೆಯ ಫಲಾನುಭವಿಗಳು ಪಾಲ್ಗೊಂಡಿದ್ದ ಸಮಾರಂಭದಲ್ಲಿ ಒಟ್ಟು 2000 ಕೋಟಿ ರೂ.ಗಳ ಯೋಜನೆಗಳನ್ನು ಉದ್ಘಾಟಿಸಲಾಯಿತು.
'ಕೊಡಗನ್ನು ಅಂತರರಾಷ್ಟ್ರೀಯ ಪ್ರವಾಸೋದ್ಯಮ ನಕ್ಷೆಯಲ್ಲಿ ಸೇರಿಸಲು ಯೋಜನೆಗಳನ್ನು ರೂಪಿಸಲಾಗುತ್ತಿದೆ. ಮೈಸೂರು ಟೂರಿಸಂ ಸರ್ಕ್ಯೂಟ್ ಮಾದರಿಯ ಯೋಜನೆ ಶೀಘ್ರದಲ್ಲೇ ಕೊಡಗಿನಲ್ಲಿ ರೂಪುಗೊಳ್ಳಲಿದೆ. ಜಿಲ್ಲೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಹೆಚ್ಚಿನ ಅನುದಾನ ಬಂದಿದೆ. ಈ ವರ್ಷ ಕೊಡಗಿನ ರೈತರಿಗೆ ಪರಿಹಾರ ಮೊತ್ತವಾಗಿ 132 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಎಲ್ಲ ಸಮುದಾಯಗಳ ಸರ್ವಾಂಗೀಣ ಅಭಿವೃದ್ಧಿಗೆ ರಾಜ್ಯ ಸರ್ಕಾರ ಶ್ರಮಿಸುತ್ತಿದೆ' ಎಂದು ವಿವರಿಸಿದರು.
ಕಿಸಾನ್ ಸಮ್ಮಾನ್ ಯೋಜನೆ ಸೇರಿದಂತೆ ವಿವಿಧ ಯೋಜನೆಗಳು ಯಶಸ್ವಿ ಅನುಷ್ಠಾನವನ್ನು ಕಂಡಿವೆ. ರಾಷ್ಟ್ರದ ಶಕ್ತಿಯಾಗಿರುವ ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ಬಿಡುಗಡೆ ಮಾಡಲಾಗಿದೆ. ಬಿಜೆಪಿ ಸರ್ಕಾರದ ಕೆಲಸವೇ ಮಾತನಾಡುತ್ತಿದೆ ಎಂದರು.
ಮಹಿಳೆಯರ ಸಬಲೀಕರಣದ ಉದ್ದೇಶದ ವಿವಿಧ ಯೋಜನೆಗಳನ್ನು ವಿವರಿಸಿದ ಅವರು, 'ಕಾಂಗ್ರೆಸ್‌ನ ಖಾತರಿ ಕಾರ್ಡ್ ಯೋಜನೆಯನ್ನು ವಂಚನೆ ಎಂದು ಕರೆದ ಅವರು, ಒಬ್ಬ ವ್ಯಕ್ತಿಯನ್ನು ಕೆಲವು ಬಾರಿ ಮೋಸ ಮಾಡಬಹುದು. ಆದರೆ, ಯಾವಾಗಲೂ ಜನರನ್ನು ವಂಚಿಸಲು ಸಾಧ್ಯವಿಲ್ಲ. ಗ್ಯಾರಂಟಿ ಕಾರ್ಡ್ ಬೋಗಸ್ ಆಗಿದ್ದು, ವಿಸಿಟಿಂಗ್ ಕಾರ್ಡ್ ನಂತೆಯೇ ಇದೆ' ಎಂದು ಲೇವಡಿ ಮಾಡಿದರು.
ಸಮಾರಂಭದಲ್ಲಿ ಕೆಲವು ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳ ಚೆಕ್ ವಿತರಿಸಿ ಮಾತನಾಡಿದ ಅವರು, ಬಿಜೆಪಿಗೆ ಜನರ ಬೆಂಬಲ ಕೋರಿದರು.
ಫಲಾನುಭವಿಗಳಿದ್ದ ಸಭೆಯನ್ನು ಶನಿವಾರ ಬೆಳಗ್ಗೆ 11.30ಕ್ಕೆ ಸಿಎಂ ಉದ್ಘಾಟಿಸಬೇಕಿದ್ದರೆ, ಬೊಮ್ಮಾಯಿ ಮಧ್ಯಾಹ್ನ 3 ಗಂಟೆಗೆ ಜಿಲ್ಲೆಗೆ ಆಗಮಿಸಿದ್ದರಿಂದ ವಿಳಂಬವಾಯಿತು. ಆದರೆ, ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಸಮೀಪದಲ್ಲಿರುವ ಕಾಲೇಜಿನಲ್ಲಿ ಪಿಯುಸಿ ಪರೀಕ್ಷೆ ನಡೆಯುತ್ತಿರುವುದರಿಂದ ಭೇಟಿ ವಿಳಂಬವಾಗಿದೆ ಎಂದು ಕ್ಷಮೆಯಾಚಿಸಿದರು.