ಬೆಂಗಳೂರಿನಲ್ಲಿಂದು ಪ್ರಧಾನಿ ಮೋದಿ ಭರ್ಜರಿ ರೋಡ್ ಶೋ: 10 ಲಕ್ಷ ಜನ ಸೇರುವ ನಿರೀಕ್ಷೆ, ಎಲ್ಲೆಡೆ ಬಿಗಿ ಭದ್ರತೆ ನಿಯೋಜನೆ

ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಈ ನಡುವಲ್ಲೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ಭರ್ಜರಿ ರೋಡ್ ಶೋ ನಡೆಸಲಿದ್ದಾರೆ. ರೋಡ್ ಶೋನಲ್ಲಿ 10 ಲಕ್ಷಕ್ಕೂ ಹೆಚ್ಚು ಮಂತಿ ಸೇರುವ ನಿರೀಕ್ಷೆಗಳಿವೆ.
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಈ ನಡುವಲ್ಲೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ಭರ್ಜರಿ ರೋಡ್ ಶೋ ನಡೆಸಲಿದ್ದಾರೆ. ರೋಡ್ ಶೋನಲ್ಲಿ 10 ಲಕ್ಷಕ್ಕೂ ಹೆಚ್ಚು ಮಂತಿ ಸೇರುವ ನಿರೀಕ್ಷೆಗಳಿವೆ.

ನರೇಂದ್ರ ಮೋದಿಯವರು 26 ಕಿ.ಮೀ ರೋಡ್ ಶೋ ಮಾಡಲಿದ್ದಾರೆ. ಹತ್ತು ಲಕ್ಷ ಜನ ಸೇರಿಸುವ ಟಾರ್ಗೆಟ್‌ ಬಿಜೆಪಿಗೆ ಇದೆ. ಬೆಂಗಳೂರು ದಕ್ಷಿಣ, ಬೊಮ್ಮನಹಳ್ಳಿ, ಜಯನಗರ, ಬಸವನಗುಡಿ, ಬಿಟಿಎಂ ಲೇಔಟ್, ಪದ್ಮನಾಭನಗರ, ಚಿಕ್ಕಪೇಟೆ, ಗಾಂಧಿನಗರ, ವಿಜಯ ನಗರ, ಗೋವಿಂದರಾಜು ನಗರ, ರಾಜಾಜಿನಗರ, ಮಲ್ಲೇಶ್ವರಂನಲ್ಲಿ ಕ್ಷೇತ್ರ ವ್ಯಾಪ್ತಿಗಳಲ್ಲಿ ರೋಡ್ ಶೋ ನಡೆಯಲಿದೆ.

ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲೂ ಒಂದು ಲಕ್ಷ ಜನ ಸೇರಿದರೂ ಹತ್ತು ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಆ ಮುಖೇನ ಟಾರ್ಗೆಟ್ 20 ರೀಚ್ ಆಗುವ ಪ್ರಯತ್ನವಿದು. ರಾಜ್ಯ ಬಿಜೆಪಿಗೆ ಈಗ ಮೋದಿಯೇ ಬ್ರಹ್ಮಾಸ್ತ್ರವಾಗಿದ್ದಾರೆ. ಹೀಗಾಗಿ ಚುನಾವಣೆ ಘೋಷಣೆಯಾದಾಗಿನಿಂದ ನಗರದಲ್ಲಿ ಹೆಚ್ಚು ರೋಡ್ ಶೋ ಮಾಡಲು ಬಿಜೆಪಿ ನಾಯಕರು ಮನವಿ ಮಾಡಿದ್ದರು.

ಗುಜರಾತ್ ಬಳಿಕ ಕರ್ನಾಟಕವೇ ಮೋದಿಯವರಿಗೆ ಗುರಿ ಎನ್ನಲಾಗಿದೆ. ಗುಜರಾತ್ ಚುನಾವಣೆಯಲ್ಲಿ ಯುವಕರಿಗೆ ಮಣೆ ಹಾಕಿ ಪಕ್ಷದ ನಿಷ್ಠಾವಂತರಿಗೆ ಟಿಕೆಟ್ ಕೊಟ್ಟಿದ್ದ ಮೋದಿ, ಅಮಿತ್ ಶಾ ಅವರು, ಗುಜರಾತ್ ಚುನಾವಣೆಯಲ್ಲಿಯೂ ಭರ್ಜರಿ ರೋಡ್ ಶೋ ನಡೆಸಿದ್ದರು.

ಗುಜರಾತ್‌ನಲ್ಲಿ ಕೊನೆಯ ಆರು ದಿನಗಳ ಪ್ರಚಾರದಿಂದ ಫಲಿತಾಂಶವೇ ಬದಲಾಗಿತ್ತು. ಯಾರೂ ಊಹೆ ಮಾಡದ ರೀತಿಯಲ್ಲಿ ಫಲಿತಾಂಶ ಬಂದಿತ್ತು,. ಕರ್ನಾಟಕದಲ್ಲೂ ಅದೇ ರೀತಿಯ ವರ್ಕೌಟ್ ಮಾಡಲು ಮೋದಿ ತಂತ್ರ ರೂಪಿಸಿದ್ದಾರೆಂದು ಹೇಳಲಾಗುತ್ತಿದೆ.

ಈ ನಡುವೆ ಮೋದಿ ರೋಡ್ ಶೋ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಭದ್ರತೆಗೆ 5,000 ಕ್ಕೂ ಹೆಚ್ಚು ಪೊಲೀಸರು, 2,500 ಟ್ರಾಫಿಕ್ ಪೊಲೀಸರು ನಿಯೋಜಿಸಲಾಗಿದೆ. ಸುಮಾರು 150 ಕೆಎಸ್ಆರ್‌ಪಿ, ಸಿಎಆರ್ ತುಕಡಿ ನಿಯೋಜಿಸಲಾಗಿದೆ.

ಇಂದು ಬೆಳಗ್ಗೆ 9.15ಕ್ಕೆ ರಾಜಭವನದಿಂದ ಪ್ರಧಾನಿ ಮೋದಿ ಹೊರಡಲಿದ್ದು ಬೆಳಗ್ಗೆ 9.25ಕ್ಕೆ ರಸ್ತೆ ಮಾರ್ಗವಾಗಿ ಮೇಖ್ರಿ ಸರ್ಕಲ್ ಬಳಿಯ HQTC ಹೆಲಿಪ್ಯಾಡ್ ತಲುಪಲಿದ್ದಾರೆ. ಬೆಳಗ್ಗೆ 9.30ಕ್ಕೆ HQTC ಹೆಲಿಪ್ಯಾಡ್‌ನಿಂದ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಿ 9.50ಕ್ಕೆ ಲೊಯೊಲಾ ಕಾಲೇಜು ಹೆಲಿಪ್ಯಾಡ್ ತಲುಪಲಿದ್ದಾರೆ. ಹೆಲಿಪ್ಯಾಡ್‌ನಲ್ಲಿ ಪ್ರಧಾನಿರನ್ನು ಸ್ವಾಗತಿಸಲು ಬಿಜೆಪಿ 6 ಮುಖಂಡರು ಹಾಜರಾಗಲಿದ್ದಾರೆ.

ಬಳಿಕ ಲೊಯೊಲಾ ಕಾಲೇಜು ಹೆಲಿಪ್ಯಾಡ್‌ನಿಂದ ಕಾರಿನಲ್ಲಿ ಪ್ರಯಾಣಿಸಿ ಬೆಳಗ್ಗೆ 10 ಗಂಟೆಗೆ ಸೋಮೇಶ್ವರ ಭವನ ತಲುಪಿ 10 ಕಿ.ಮೀ. ವೇಗದಲ್ಲಿ ಪ್ರಧಾನಿ ರೋಡ್ ಶೋ ವಾಹನ ಸಾಗಲಿದೆ.

ಬಿಬಿಎಂಪಿ ಪೌರಕಾರ್ಮಿಕರು ಸಿರ್ಸಿ ಸರ್ಕಲ್‌ ಬಳಿ ಬೃಹತ್ ಸಂಖ್ಯೆಯಲ್ಲಿ ಪ್ರಧಾನಿಗೆ ಪುಷ್ಪವೃಷ್ಟಿ ಮಾಡಲಿದ್ದಾರೆ. ಸಿರ್ಸಿ ಸರ್ಕಲ್‌ನಲ್ಲಿ 1 ನಿಮಿಷ ರೋಡ್ ಶೋ ವಾಹನ ನಿಲುಗಡೆ ಸಾಧ್ಯತೆ ಇದೆ. ರೋಡ್ ಶೋದಲ್ಲಿ ಪ್ರಧಾನಿ ಜೊತೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದ ಪಿ.ಸಿ.ಮೋಹನ್ ಮತ್ತು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಭಾಗಿಯಾಗಲಿದ್ದಾರೆ.

ರೋಡ್ ಹಿನ್ನೆಲೆಯಲ್ಲಿ ಇಂದು ಅಪ್ಪಿತಪ್ಪಿಯೂ ಈ ರಸ್ತೆಗಳಲ್ಲಿ ಸಂಚರಿಸದಿರಿ...
ರಾಜಭವನ ರಸ್ತೆ, ರಮಣ ಮಹರ್ಷಿ ರಸ್ತೆ, ಮೇಖ್ರಿ ವೃತ್ತ, ಆರ್​ಬಿಐ ಲೇಔಟ್, ಜೆ.ಪಿ ನಗರ & ಶಿರ್ಸಿ ಸರ್ಕಲ್ ರಸ್ತೆಗಳಲ್ಲಿ ನಿರ್ಬಂಧ ಇರಲಿದೆ. ಹಾಗೇನೆ, ಜೆ.ಜೆ ನಗರ, ಬಿನ್ನಿ ಮಿಲ್ ರಸ್ತೆ, ಶಾಲಿನಿ ಮೈದಾನ, ಸೌತ್ ಎಂಡ್ ಸರ್ಕಲ್, ಆರ್ಮುಗಂ ಸರ್ಕಲ್, ಬುಲ್ ಟೆಂಪಲ್ ರೋಡ್, ರಾಮಕೃಷ್ಣ ಆಶ್ರಮ, ಉಮಾ ಟಾಕೀಸ್, ಚಾಮರಾಜಪೇಟೆ ರಸ್ತೆ, ಬಾಳೆಕಾಯಿ ಮಂಡಿ ರಸ್ತೆಗಳಲ್ಲಿ ಸಂಚಾರ ಮಾಡದಿರುವುದು ಉತ್ತಮ.

ಇನ್ನು ಮೋದಿ ಅಸ್ಪತ್ರೆ ರೋಡ್, ನವರಂಗ ರಸ್ತೆ, ಎಂಕೆಕೆ ರಸ್ತೆ, ಮಲ್ಲೇಶ್ವರಂ ಸರ್ಕಲ್, ಸಂಪಿಗೆ ರಸ್ತೆ, ಸ್ಯಾಂಕಿ ರಸ್ತೆಯನ್ನ ಬಳಸುವವರು ಈ ರಸ್ತೆಗಳಲ್ಲಿ ಸಂಚರಿಸದೇ ಪರ್ಯಾಯ ಮಾರ್ಗಗಳಲ್ಲಿ ಸಂಚರಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com