
ಪ್ರವೀಣ್ ಸೂದ್
ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ 2023ಕ್ಕೆ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಬಹುತೇಕ ಶಾಂತಿಯುತ ಮತದಾನ ನಡೆದಿದೆ ಎಂದು ಡಿಜಿ-ಐಜಿಪಿ ಪ್ರವೀಣ್ ಸೂದ್ ಅವರು ಮಾಹಿತಿ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ ಮಾಹಿತಿ ನೀಡಿದ ಪ್ರವೀಮ್ ಸೂದ್ ಅವರು, ಮತಗಟ್ಟೆಯೊಳಗೆ ಮತದಾನಕ್ಕೆ ಅಡ್ಡಿಪಡಿಸಿದ ಒಂದೇ ಒಂದು ಘಟನೆ ನಡೆದಿಲ್ಲ, ಕೆಲವೆಡೆ, ಮತಗಟ್ಟೆಯ ಹೊರಗೆ ಸಣ್ಣಪುಟ್ಟ ಘರ್ಷಣೆಗಳು ನಡೆದಿರಬಹುದು. ಆದರೆ, ಅವುಗಳಿಂದ ಮತದಾನಕ್ಕೆ ಎಲ್ಲಿಯೂ ಸಮಸ್ಯೆಗಳಾಗಿಲ್ಲ ಎಂದು ಹೇಳಿದರು.
ನಾಮನಿರ್ದೇಶನದಿಂದ ಮತದಾನದ ಅಂತಿಮ ದಿನದವರೆಗೆ ಪರಿಸ್ಥಿತಿ ಶಾಂತಿಯುತವಾಗಿತ್ತು ಎಂದು ತಿಳಿಸಿದರು.
ಇದೇ ವೇಳೆ ಮಸಬಿನಾಳ್ ಗ್ರಾಮದ ಗ್ರಾಮಸ್ಥರು ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ಸಾಗಿಸುತ್ತಿದ್ದ ಚುನಾವಣಾ ಕರ್ತವ್ಯದ ವಾಹನವನ್ನು ತಡೆದು ಅಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಿ, ಮತಯಂತ್ರಗಳನ್ನು ಹಾನಿಗೊಳಪಡಿಸಿದ ಘಟನೆ ಕುರಿತು ಮಾತನಾಡಿ, ಮತದಾನ ನಿಲ್ಲಿಸಿ ಇವಿಎಂಗಳನ್ನು ತೆಗೆದುಕೊಂಡು ಹೋಗಲಾಗುತ್ತಿದೆ ಎಂದು ಜನರು ನಂಬಿದ್ದರು. ಹೀಗಾಗಿ ಘಟನೆ ನಡೆದಿದೆ. ಈ ಘಟನೆ ಸಂಬಂಧ ಕೆಲವರನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಹಿಂಸಾಚಾರ ಮುಕ್ತ ಮತದಾನ: ನಗರ ಪೊಲೀಸ್ ಆಯುಕ್ತ ಮಾಹಿತಿ
ನಗರದಲ್ಲಿ ಬುಧವಾರ ನಡೆದ ವಿಧಾನಸಭಾ ಚುನಾವಣೆಯಲ್ಲಿ ಶಾಂತಿಯುತವಾಗಿ ಮತದಾನ ನಡೆದಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿಯವರು ಹೇಳಿದ್ದಾರೆ.
ಇದನ್ನೂ ಓದಿ: ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಜಟಾಪಟಿ: ಮಂಗಳೂರಿನಲ್ಲಿ ಸೆಕ್ಷನ್ 144 ಜಾರಿ
ಪಕ್ಷದ ಕಾರ್ಯಕರ್ತರ ನಡುವೆ ವಾಗ್ವಾದ, ಇವಿಎಂಗಳಲ್ಲಿ ಕಂಡು ಬಂದ ದೋಷವನ್ನು ಹೊರತುಪಡಿಸಿದರೆ, ನಗರದಲ್ಲಿ ಬಹುತೇಕ ಶಾಂತಿಯುತವಾಗಿ ಮತದಾನ ಪ್ರಕ್ರಿಯೆ ನಡೆದಿದೆ ಎಂದು ಹೇಳಿದರು.
ಕೆಲವು ಮತಗಟ್ಟೆಗಳಲ್ಲಿ, ಕೆಲವು ಮತದಾರರು ತಮ್ಮ ಮತದಾರರ ಗುರುತಿನ ಚೀಟಿ ಹೊಂದಿದ್ದರೂ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನಾಪತ್ತೆಯಾಗಿದೆ ಎಂದು ಹೇಳಿದ್ದರು. ಮತದಾನಕ್ಕೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸ್ ಸಿಬ್ಬಂದಿ ಅಂತಹ ಮತದಾರರ ಮನವೊಲಿಸಿ ಮತಗಟ್ಟೆಯಿಂದ ಹೊರಗೆ ಕಳುಹಿಸುವ ಪ್ರಯತ್ನ ಮಾಡಿದ್ದಾರೆ. ಇಂತಹ ಸಣ್ಣಪುಟ್ಟ ಘಟನೆಗಳು ನಡೆಯಿವೆ. ಆದರೆ, ಚುನಾವಣೆಗಳಿಗೆ ಯಾವುದೇ ಅಡ್ಡಿಯುಂಟು ಮಾಡಿಲ್ಲ. ರೌಡಿಗಳು ಮತ್ತು ವಾರಂಟ್ ಹೊಂದಿರುವವರ ಮೇಲೆ ತೆಗೆದುಕೊಂಡ ಕ್ರಮದಿಂದಾಗಿ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆದಿದೆ. ಈ ಬಾರಿಯ ಚುನಾವಣೆ ಹಿಂಸಾಚಾರ ಮುಕ್ತ ಚುನಾವಣೆಯಾಗಿದೆ ಎಂದು ತಿಳಿಸಿದ್ದಾರೆ.
ಕೆಲವೆಡೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿರುವುದು ಕಂಡು ಬಂದಿದೆ. ಕೆಲವೆಡೆ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದ್ದು, ಭದ್ರತಾ ಸಿಬ್ಬಂದಿಗಳು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಆರ್‌ಟಿ ನಗರದ ಮತಗಟ್ಟೆಯೊಂದರಲ್ಲಿ ಮತ ಕೇಳುತ್ತಿದ್ದ ಜೆಡಿಎಸ್ ಪಕ್ಷದ ಕಾರ್ಯಕರ್ತರಿಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಭೈರತಿ ಸುರೇಶ್ ಅವರು ಎಚ್ಚರಿಕೆ ನೀಡಿರುವುದು ಕಂಡು ಬಂದಿದೆ.
ಇದನ್ನೂ ಓದಿ: ಬಳ್ಳಾರಿಯಲ್ಲಿ ಕಾಂಗ್ರೆಸ್–ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ, 10 ಮಂದಿ ಗಾಯ, ನಾಲ್ವರ ಬಂಧನ
ಪದ್ಮನಾಭನಗರದ ಮತಗಟ್ಟೆಯಲ್ಲಿ ಎರಡು ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದ್ದು, ಹಿಂಸಾಚಾರ ನಡೆದಿದೆ ಎಂಬ ವದಂತಿ ಹಬ್ಬಿತ್ತು. ಆದರೆ, ಸ್ಥಳದಲ್ಲಿ ಯಾವುದೇ ಹಿಂಸಾಚಾರ ನಡೆದಿಲ್ಲ ಮತ್ತು ಇದು ಕೇವಲ ಎರಡು ಗುಂಪುಗಳ ನಡುವಿನ ಮಾತಿನ ಚಕಮಕಿಯಾಗತ್ತಷ್ಟೇ. ಪ್ರಸ್ತುತ ಸ್ಥಳದಲ್ಲಿ ಪರಿಸ್ಥಿತಿ ಶಾಂತಿಯುತವಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ಡಿಸಿಪಿ) ಪಿ ಕೃಷ್ಣಕಾಂತ್ ಸ್ಪಷ್ಟಪಡಿಸಿದ್ದಾರೆ.
"ಆಗ್ನೇಯ ವಿಭಾಗದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಮತ್ತು ಎಲ್ಲಿಯೂ ಯಾವುದೇ ಬಂಧನವಾಗಿಲ್ಲ. ಪೂರ್ವಯೋಜಿತವಂತೆಯೇ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆಯಿದು ಎಂದು ಸೌತ್ ಈಸ್ಟ್ ಡಿಸಿ ಸಿ.ಕೆ.ಬಾಬಾ ತಿಳಿಸಿದ್ದಾರೆ.