ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ: ಅನುಷ್ಠಾನದ ಬಗ್ಗೆ ಮೂಡಿದೆ ಹಲವು ಪ್ರಶ್ನೆಗಳು
ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಮುಕ್ತಾಯವಾಗಿ, ಕಾಂಗ್ರೆಸ್ ಪಕ್ಷ ಭರ್ಜರಿ ಜಯ ಗಳಿಸಿದ್ದು, ನಿನ್ನೆ ಮೇ.20ರಂದು ಮುಖ್ಯಮಂತ್ರಿಯಾಗಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ನಡುವೆ ಕಾಂಗ್ರೆಸ್ ಪಕ್ಷ ಘೋಷಿಸಿದ್ದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಭಾರೀ ಸದ್ದು ಮಾಡುತ್ತಿದೆ.
Published: 22nd May 2023 10:58 AM | Last Updated: 22nd May 2023 03:34 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಮುಕ್ತಾಯವಾಗಿ, ಕಾಂಗ್ರೆಸ್ ಪಕ್ಷ ಭರ್ಜರಿ ಜಯ ಗಳಿಸಿದ್ದು, ನಿನ್ನೆ ಮೇ.20ರಂದು ಮುಖ್ಯಮಂತ್ರಿಯಾಗಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ನಡುವೆ ಕಾಂಗ್ರೆಸ್ ಪಕ್ಷ ಘೋಷಿಸಿದ್ದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಭಾರೀ ಸದ್ದು ಮಾಡುತ್ತಿದೆ.
ಚುನಾವಣಾ ಪ್ರಣಾಳಿಕೆಯಲ್ಲಿ ರಾಜ್ಯ ಕಾಂಗ್ರೆಸ್, ರಾಜ್ಯದ ಮಹಿಳೆಯರು ಬಿಎಂಟಿಸಿಯ ನಾನ್ ಎಸಿ ಬಸ್‌ಗಳು ಮತ್ತು ಯಾವುದೇ ರಾಜ್ಯ ಸಾರಿಗೆ ನಿಗಮದ ಬಸ್‌ಗಳಲ್ಲಿ ರಾಜ್ಯದ ಯಾವುದೇ ಸ್ಥಳದಲ್ಲಿ ಉಚಿತ ಬಸ್ ಪ್ರಯಾಣ ಪಡೆಯಬಹುದು ಎಂದು ಘೋಷಿಸಿದ್ದು, ಈ ಯೋಜನೆ ಅನುಷ್ಠಾನದ ಬಗ್ಗೆ ಹಲವು ಪ್ರಶ್ನೆಗಳು ಮೂಡತೊಡಗಿವೆ.
ಬಸ್ ಪ್ರಯಾಣಿಕರ ಹಕ್ಕುಗಳ ವೇದಿಕೆಯಾದ ಬೆಂಗಳೂರು ಬಸ್ ಪ್ರಯಾಣಿಕ ವೇದಿಕೆಯ ಶಾಹೀನ್ ಶಾಸ ಮಾತನಾಡಿ, ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣವನ್ನು ‘ಉಚಿತ’ ಎಂದು ಪರಿಗಣಿಸಬಾರದು. ಸ್ವತಂತ್ರವಾಗಿ ಪ್ರಯಾಣಿಸುವ ಸ್ವಾತಂತ್ರ್ಯವನ್ನು ಪಡೆಯುವ ಮಹಿಳೆಯರ ಮೇಲೆ ಮಾಡಲಾಗುತ್ತಿರುವ ಹೂಡಿಕೆ ಎಂದು ಪರಿಗಣಿಸಬೇಕು. ರಾಜ್ಯಾದ್ಯಂತ ಯಾವುದೇ ತಾರತಮ್ಯವಿಲ್ಲದೆ ಎಲ್ಲಾ ಮಹಿಳೆಯರಿಗೆ ಬಸ್ ಪ್ರಯಾಣವನ್ನು ಉಚಿತವಾಗಿ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಗೆಲ್ಲಿಸಿದ ಗ್ಯಾರಂಟಿ ಕಾರ್ಡ್: ಉಚಿತ ಭರವಸೆಗಳು ಜಾರಿಯಾಗುವುದೇ ..? ಆರ್ಥಿಕ ತಜ್ಞರು ಹೇಳೋದೇನು...?
ಬಿಎಂಟಿಸಿಯಲ್ಲಿ ಪ್ರತೀನಿತ್ಯ ಸುಮಾರು 35 ಲಕ್ಷ ಪ್ರಯಾಣಿಕರು ಸಂಚರಿಸುತ್ತಾರೆ. ಅಂದಾಜಿನ ಪ್ರಕಾರ, ದೈನಂದಿನ ಪ್ರಯಾಣಿಕರಲ್ಲಿ ಸುಮಾರು ಶೇ.40ರಷ್ಟು ಪ್ರಯಾಣಿಕರು ಮಹಿಳೆಯರೇ ಇರುತ್ತಾರೆ. ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವು ಪ್ರತಿ ವರ್ಷ ಸರ್ಕಾರಕ್ಕೆ ಸರಿಸುಮಾರು 1,000 ಕೋಟಿ ರೂಪಾಯಿಗಳಷ್ಟು ವೆಚ್ಚವಾಗಬಹುದು ಎಂದು ತಿಳಿಸಿದ್ದಾರೆ.
ಈ ನಡುವೆ ಕೆಎಸ್‌ಆರ್‌ಟಿಸಿ ಅಧಿಕಾರಿಯೊಬ್ಬರು ಮಾತನಾಡಿ, ಮಹಿಳಾ ಪ್ರಯಾಣಿಕರ ಸಂಖ್ಯೆಯ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.
ಎಲ್ಲಾ ಮಹಿಳೆಯರಿಗೆ ಉಚಿತ ಪ್ರಯಾಣವೇ ಅಥವಾ ಅರ್ಹತೆಗಾಗಿ ಯಾವುದೇ ಷರತ್ತುಗಳಿವೆಯೇ? ಉಚಿತ ಪ್ರಯಾಣವನ್ನು ಕೆಲವು ಕಿಲೋಮೀಟರ್‌ಗಳಿಗೆ ನಿರ್ಬಂಧಿಸಲಾಗುತ್ತದೆಯೇ ಅಥವಾ ಮಹಿಳೆಯರು ರಾಜ್ಯದಾದ್ಯಂತ ಮುಕ್ತವಾಗಿ ಪ್ರಯಾಣಿಸಬಹುದೇ? ಉಚಿತ ಬಸ್ ಪ್ರಯಾಣದ ಅರ್ಹತೆಯ ಬಗ್ಗೆ ರಾಜ್ಯ ಸರ್ಕಾರ ಇನ್ನೂ ಯಾವುದೇ ಸ್ಪಷ್ಟತೆ ನೀಡಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಗ್ಯಾರಂಟಿ: ಅಪೌಷ್ಟಿಕತೆ ನಿವಾರಣೆಗೆ `ಅನ್ನಭಾಗ್ಯ' ಪೂರಕ
ಯೋಜನೆಯು ಆರ್ಥಿಕವಾಗಿ ಮಾತ್ರವಲ್ಲದೆ ಅನುಷ್ಠಾನದಲ್ಲಿಯೂ ಒಂದು ಸವಾಲಾಗಿ ಪರಿಣಮಿಸಲಿದೆ. ಮಹಿಳೆಯರಿಗೆ ಮೀಸಲಾದ ಸೀಟುಗಳನ್ನು ಕಟ್ಟುನಿಟ್ಟಾಗಿ ನಿರ್ವಹಿಸಬೇಕು ಎಂದು ಹೇಳಿದ್ದಾರೆ.