ಬೆಂಗಳೂರಿನಲ್ಲಿ ವರುಣಾಘಾತ: ರಾತ್ರಿ ಇಡೀ ಸುರಿದ ಮಳೆ, ಇನ್ನೂ 3 ದಿನ ವರ್ಷಧಾರೆ, ಯೆಲ್ಲೋ ಅಲರ್ಟ್ ಘೋಷಣೆ

ರಾಜಧಾನಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರಾತ್ರಿ ಇಡೀ ಸುರಿದ ಧಾರಾಕಾರ ಮಳೆಗೆ ಬೆಂಗಳೂರು ಜನತೆ ಹೈರಾಣಾಗಿದ್ದು, ರಸ್ತೆಗಳು ಜಲಾವೃತವಾಗಿ, ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದರಿಂದ ಜನರು ಪರದಾಡುವಂತಾಯಿತು. 
ಬೆಂಗಳೂರಿನಲ್ಲಿ ಧಾರಾಕಾರ ಮಳೆ
ಬೆಂಗಳೂರಿನಲ್ಲಿ ಧಾರಾಕಾರ ಮಳೆ
Updated on

ಬೆಂಗಳೂರು: ರಾಜಧಾನಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರಾತ್ರಿ ಇಡೀ ಸುರಿದ ಧಾರಾಕಾರ ಮಳೆಗೆ ಬೆಂಗಳೂರು ಜನತೆ ಹೈರಾಣಾಗಿದ್ದು, ರಸ್ತೆಗಳು ಜಲಾವೃತವಾಗಿ, ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದರಿಂದ ಜನರು ಪರದಾಡುವಂತಾಯಿತು. 

ಬೆಂಗಳೂರಿನ  ಬಾಣಸವಾಡಿ, HBR ಲೇಔಟ್, ಕಮ್ಮನಹಳ್ಳಿ, ಲಿಂಗರಾಜಪುರಂ, ರಾಮಮೂರ್ತಿ ನಗರ, BTM ಲೇಔಟ್, ಜಯನಗರ, KIAL ವಿಮಾನ ನಿಲ್ದಾಣ, ಸದಾಶಿವನಗರ, ಶೇಷಾದ್ರಿಪುರಂ, ಪೀಣ್ಯ, ಕಂಟೋನ್ಮೆಂಟ್ ಪ್ರದೇಶ, ದೊಮ್ಮಲೂರು, ಇಂದಿರಾನಗರ, ರಾಜಾಜಿನಗರ, ಮಲ್ಲೇಶ್ವರಂ, ಶಿವಾಜಿನಗರ, ಹಲಸೂರು, ವಸಂತ ನಗರ, ಸಿವಿ ರಾಮನ್ ನಗರ, ಹೂಡಿ, ಮಹದೇವಪುರ, ಮಾರತ್ತಹಳ್ಳಿ, ವರ್ತೂರು, ವೈಟ್‌ಫೀಲ್ಡ್, ಕಲ್ಯಾಣ್ ನಗರ, ಹೆಬ್ಬಾಳ, ಮತ್ತಿಕೆರೆ, ವಿದ್ಯಾರಣ್ಯಪುರ, ಕೋರಮಂಗಲ, ಬನಶಂಕರಿ, ಬಸವನಗುಡಿ, ಪದ್ಮನಾಭನಗರ, ಕೊತ್ನೂರು, ಬಸವೇಶ್ವರನಗರ, ಕಾಮಾಕ್ಷಿಪಾಳ್ಯ, ಕೆಂಗೇರಿ, ನಾಗರಭಾವಿ, ನಾಯಂಡಹಳ್ಳಿ, ರಾಜಾಜಿನಗರ, ರಾಜರಾಜೇಶ್ವರಿ ನಗರ, ವಿಜಯನಗರದಲ್ಲಿ ಧಾರಾಕಾರ ಮಳೆಯಾಗಿದೆ.

ಇದಲ್ಲದೆ ನಗರದ ಹೃದಯ ಭಾಗದ ವಿಧಾನ ಸೌಧ, ಆರ್.ಟಿ ನಗರ, ಕಾವಲ್ ಭೈರಸಂದ್ರ, ಬಾಣಸವಾಡಿ, ಕಾಕ್ಸ್ ಟೌನ್, ಶ್ರೀರಾಂಪುರ, ಯಲಹಂಕ ರಸ್ತೆ ಭಾಗದಲ್ಲಿ ಧಾರಕಾರ ಮಳೆ ಸುರಿದಿದ್ದರಿಂದ ರಸ್ತೆಗಳು ಕೆರೆಗಳಂತೆ ಬದಲಾಗಿದ್ದವು. ವಿಧಾನ ಸೌಧ ಮುಂಭಾಗದ ರಸ್ತೆ, ಲಿಂಗರಾಜ ಪುರಂ ಅಂಡರ್ ಪಾಸ್, ಬಾಣವಾಡಿ ರೈಲ್ವೇ ಗೇಟ್ ಮುಂಭಾಗ ಜಲಾವೃತವಾಗಿದ್ದವು. ಮ್ಯಾನ್‌ಹೋಲ್‌ಗಳಿಂದ ಚರಂಡಿ ನೀರು ಚಿಮ್ಮುತ್ತಿದ್ದರಿಂದ ರಸ್ತೆ ಮೇಲೆಯೇ ಭಾರಿ ಪ್ರಮಾಣದ ನೀರು ಹರಿಯುತ್ತಿತ್ತು. ಯಲಹಂಕ ರಸ್ತೆ ಕೋಗಿಲು ಕ್ರಾಸ್ ಬಳಿ ಕೇಂದ್ರೀಯ ವಿಹಾರ ಅಪಾರ್ಟ್ಮೆಂಟ್‌ಗೆ ನೀರು ನುಗ್ಗಿದ್ದರಿಂದ ವಾಹನಗಳು ನೀರಿನಲ್ಲಿ ಮುಳುಗಿದ್ದವು. ಬಾಣಸವಾಡಿ ಹಾಗೂ ಫ್ರೆಸರ್ ಟೌನ್ ಬಳಿಯ ಪ್ರದೇಶಗಳಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು. ರಸ್ತೆಯುದ್ದಕ್ಕೂ ನೀರು ಹರಿಯುತ್ತಿರುವ ಹಿನ್ನೆಲೆಯಲ್ಲಿ ವಾಹನ ಸವಾರರು ಪರದಾಡಿದರು. ಮಳೆಯಿಂದಾಗಿ ಶ್ರೀರಾಂಪುರ ಅಂಡರ್ ಪಾಸ್ ಕೆರೆಯಂತಾಗಿತ್ತು. 

ಇನ್ನೂ 3 ದಿನ ಭಾರಿ ಮಳೆ, ಯೆಲ್ಲೋ ಅಲರ್ಟ್ ಘೋಷಣೆ
ಬೆಂಗಳೂರು ನಗರದಲ್ಲಿ ಮೂರು ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಹಾವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಗುಡುಗು ಗಾಳಿ ಸಹಿತ ಮೂರು ದಿನಗಳ ಕಾಲ ಭಾರಿ ಮಳೆಯಾಗುತ್ತದೆ ಎಂದು ಹೇಳಿದೆ.  ತಗ್ಗುಪ್ರದೇಶದಲ್ಲಿ ವಾಸಿಸುವವರು ಎಚ್ಚರಿಕೆಯಿಂದ ಇರಲು ಸೂಚನೆ ನೀಡಿದೆ. ಕರಾವಳಿ ಭಾಗದಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಿದೆ. ರಾಜ್ಯದಲ್ಲಿ ಮುಂಗಾರು ಕೈಕೊಟ್ಟಿದ್ದು, ಹಿಂಗಾರು ಕೈ ಹಿಡಿಯುವ ಆಶಾಭಾವನೆ ಮೂಡಿದೆ. ಅರಬ್ಬಿ ಸಮುದ್ರದಲ್ಲಿ ಸುಳಿಗಾಳಿ ಸೃಷ್ಟಿಯಿಂದಾಗಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸೋಮವಾರ ಮಳೆಯಾಗಿದೆ. 

ಬೆಂಗಳೂರಿನಲ್ಲಿ ಸೋಮವಾರ ಹೆಚ್ಚು ಮಳೆಯಾಗಿದೆ, ಮಂಗಳವಾರವೂ ಮೋಡಕವಿದ ವಾತಾವರಣ ಮುಂದುವರೆದಿದೆ. ಎಚ್​ಎಎಲ್​ನಲ್ಲಿ 28.0 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 19.8 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ನಗರದಲ್ಲಿ 29.0 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 21.7 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ಕೆಐಎಎಲ್​ನಲ್ಲಿ 32.4 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 20.3 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com