85ಕ್ಕೂ ಹೆಚ್ಚು ಬಾರಿ ಮನೆಗಳ್ಳತನ: ಎಸ್ಕೇಪ್ ಕಾರ್ತಿಕ್ ಬಂಧನ

85ಕ್ಕೂ ಅಧಿಕ ಮನೆಗಳ್ಳತನ ಕೃತ್ಯಗಳಲ್ಲಿ ಭಾಗಿಯಾಗಿದ್ದ ಅಂತಾರಾಜ್ಯ​ ಕಳ್ಳನನ್ನು ಬಂಧಿಸುವಲ್ಲಿ ಗೋವಿಂದರಾಜ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಎಸ್ಕೇಪ್ ಕಾರ್ತಿಕ್ ಕಳ್ಳತನ ಮಾಡಿದ್ದ ಚಿನ್ನಾಭರಣ.
ಎಸ್ಕೇಪ್ ಕಾರ್ತಿಕ್ ಕಳ್ಳತನ ಮಾಡಿದ್ದ ಚಿನ್ನಾಭರಣ.

ಬೆಂಗಳೂರು: 85ಕ್ಕೂ ಅಧಿಕ ಮನೆಗಳ್ಳತನ ಕೃತ್ಯಗಳಲ್ಲಿ ಭಾಗಿಯಾಗಿದ್ದ ಅಂತಾರಾಜ್ಯ​ ಕಳ್ಳನನ್ನು ಬಂಧಿಸುವಲ್ಲಿ ಗೋವಿಂದರಾಜ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಾರ್ತಿಕ್ ಅಲಿಯಾಸ್ ಎಸ್ಕೇಪ್ ಕಾರ್ತಿಕ್ (33) ಬಂಧಿತ ಆರೋಪಿ. ಈತ ಕೊತ್ತನೂರು ನಿವಾಸಿಯಾಗಿದ್ದು, ದಕ್ಷಿಣ ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶದಾದ್ಯಂತ ಕಳ್ಳತನ ಮಾಡಿದ್ದಾನೆ. 6ನೇ ತರಗತಿವರೆಗೆ ಓದಿರುವ ಆರೋಪಿ, 16ನೇ ವಯಸ್ಸಿನಿಂದಲೇ ಕಳ್ಳತನ ಮಾಡಲು ಆರಂಭಿಸಿದ್ದ. 2005ರಿಂದ ಅಪರಾಧ ಕೃತ್ಯಗಳಲ್ಲಿ ಸಕ್ರಿಯನಾಗಿದ್ದ ಈತನ ಸಹಚರರಾದ ದಿಲೀಪ್ (23) ಮತ್ತು ಸಂಜಯ್ (24) ಅವರನ್ನೂ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 70 ಲಕ್ಷ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕಾರ್ತಿಕ್ ಬಸವೇಶ್ವರನಗರ, ಕೆ.ಪಿ.ಅಗ್ರಹಾರ, ಕಾಮಾಕ್ಷಿಪಾಳ್ಯ ಮತ್ತಿತರ ಬಡಾವಣೆಗಳ ನಿವಾಸಗಳಲ್ಲಿ ಕಳ್ಳತನ ಮಾಡಿದ್ದು, ಆತನ ವಿರುದ್ಧ ಬಾಕಿ ಉಳಿದಿದ್ದ ಹಲವು ಪ್ರಕರಣಗಳಲ್ಲಿ 18 ಬಂಧನ ವಾರೆಂಟ್‌ಗಳು ಜಾರಿಯಾಗಿದ್ದವು. ಅಲ್ಲದೆ, ಮೂರು ಬಾರಿ ಪೊಲೀಸ್ ವಶದಿಂದ ತಪ್ಪಿಸಿಕೊಂಡಿದ್ದ.

2007ರಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ತರಕಾರಿ ವ್ಯಾನ್‌ನಲ್ಲಿ ತಲೆಮರೆಸಿಕೊಂಡು ಪರಾರಿಯಾಗಿದ್ದ.

ಮೂರು ವರ್ಷಗಳ ನಂತರ ಸ್ಥಳ ಮಹಜರುಗಾಗಿ ಅಪರಾಧ ಕೃತ್ಯವೆಸಗಿದ್ದ ಸ್ಥಳಕ್ಕೆ ಕರೆದೊಯ್ಯುವಾಗ ಜೆಬಿ ನಗರ ಪೊಲೀಸರ ವಶದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ. ಆದರೆ ನಂತರ ಮತ್ತೆ ಸಿಕ್ಕಿಬಿದ್ದಿದ್ದ. 2005ರಲ್ಲಿ ಹೆಣ್ಣೂರಿನ ಮನೆಯೊಂದರಲ್ಲಿ 10 ಲಕ್ಷ ರೂ.ನಗದನ್ನು ದೋಚಿ ವೃತ್ತಿಪರ ಕಳ್ಳನಾಗಿ ಪರಿವರ್ತನೆಗೊಂಡಿದ್ದ.

ಓಟ, ಜಿಗಿತ ಹಾಗೂ ಗೋಡೆ ಹತ್ತುವುದರಲ್ಲಿ ಕಾರ್ತಿಕ್ ಉತ್ತಮನಾಗಿದ್ದ. ಇದೇ ಆತ ಕಳ್ಳತನಕ್ಕಿಳಿಯಲು ಸಹಾಯ ಮಾಡಿತ್ತು. ಆದರೆ, ಕಾರ್ತಿಕ್ ಗೆಳತಿಯ ಸಹೋದರ ಕಾಲಿಕೆ ಇರಿದ್ದರಿಂದ ಮೊದಲಿನಂತೆ ಓಡಲು ಸಾಧ್ಯವಾಗುತ್ತಿರಲಿಲ್ಲ. ನಂತರ ಸಹಚರರನ್ನು ನೇಮಿಸಿಕೊಂಡಿದ್ದ ಈತ, ಅವರೊಂದಿಗೆ ಕಳ್ಳತನ ಮಾಡುತ್ತಿದ್ದ. ಬೀಗ ಹಾಕಿದ್ದ ಮನೆಗಳನ್ನು ಗುರಿಯಾಗಿಸಿಕೊಂಡು ರಾತ್ರಿ ವೇಳೆಯಲ್ಲಿ ಕಳ್ಳತನ ಮಾಡುತ್ತಿದ್ದ. ಕದ್ದ ಚಿನ್ನವನ್ನು ಗಿರವಿ ಇಟ್ಟು ಐಶಾರಾಮಿ ಜೀವನಕ್ಕಾಗಿ ಖರ್ಚು ಮಾಡುತ್ತಿದ್ದರು. ಈ ಸಂಬಂಧ ಕದ್ದ ಚಿನ್ನವನ್ನು ಗಿರವಿ ಇಟ್ಟುಕೊಳ್ಳುತ್ತಿದ್ದ ಫೈನಾನ್ಸ್ ಕಂಪನಿಗಳ ವಿರುದ್ಧವೂ ಇದೀಗ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com