ಭ್ರೂಣ ಲಿಂಗ ಪತ್ತೆ ಪ್ರಕರಣ; 2 ವರ್ಷದಲ್ಲಿ ಬರೋಬ್ಬರಿ 900 ಹೆಣ್ಣು ಭ್ರೂಣಗಳ ಹತ್ಯೆ, ವೈದ್ಯರು ಸೇರಿ ಐವರ ಬಂಧನ

ಭ್ರೂಣ ಲಿಂಗ ಪತ್ತೆ ಹಾಗೂ ಹತ್ಯೆ ನಿಷೇಧವಿದ್ದರೂ ಮೈಸೂರು,ಮಂಡ್ಯ ಭಾಗದಲ್ಲಿ ಗರ್ಭಪಾತ ಮಾಡಿಸುತ್ತಿದ್ದ ಭಾರೀ ಜಾಲವನ್ನೇ ಬೇಧಿಸಿರುವ ಬೆಂಗಳೂರು ಪೊಲೀಸರು ಇಬ್ಬರು ವೈದ್ಯರು ಸೇರಿ ಐವರು ಆರೋಪಗಳನ್ನು ಶನಿವಾರ ಬಂಧನಕ್ಕೊಳಪಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಭ್ರೂಣ ಲಿಂಗ ಪತ್ತೆ ಹಾಗೂ ಹತ್ಯೆ ನಿಷೇಧವಿದ್ದರೂ ಮೈಸೂರು,ಮಂಡ್ಯ ಭಾಗದಲ್ಲಿ ಗರ್ಭಪಾತ ಮಾಡಿಸುತ್ತಿದ್ದ ಭಾರೀ ಜಾಲವನ್ನೇ ಬೇಧಿಸಿರುವ ಬೆಂಗಳೂರು ಪೊಲೀಸರು ಇಬ್ಬರು ವೈದ್ಯರು ಸೇರಿ ಐವರು ಆರೋಪಗಳನ್ನು ಶನಿವಾರ ಬಂಧನಕ್ಕೊಳಪಡಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಡಾ ತುಳಸಿ ರಾಮ್, ಡಾ ಚಂದನ್ ಬಲ್ಲಾಳ್, ಮೀನಾ, ರಿಜ್ಮಾ ಮತ್ತು ನಿಸ್ಸಾರ್ ಎಂದು ಗುರುತಿಸಲಾಗಿದೆ.

ಆರೋಪಿಗಳು 2 ವರ್ಷಗಳಿಂದ ಈ ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿದ್ದು, ಮೈಸೂರಿನ ಮಾತಾ ಆಸ್ಪತ್ರೆಯಲ್ಲಿ ಪ್ರತೀ ತಿಂಗಳು 22-25 ಗರ್ಭಪಾತಗಳನ್ನು ನಡೆಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಗರ್ಭಿಣಿಯರನ್ನು ಮಂಡ್ಯಕ್ಕೆ ಕರೆದೊಯ್ಯುತ್ತಿದ್ದಾಗ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದರು. ವಿಚಾರಣೆ ವೇಳೆ ಭ್ರೂಣಗಳ ಹತ್ಯೆ ವಿಚಾರ ಬೆಳಕಿಗೆ ಬಂದಿತ್ತು.

ಆರೋಪಿಗಳು ಬೆಂಗಳೂರು ಮಾತ್ರವಲ್ಲದೇ ಅಕ್ಕಪಕ್ಕದ ಜಿಲ್ಲೆಗಳು, ಉತ್ತರ ಕರ್ನಾಟಕದ ಭಾಗದಿಂದಲೂ ಮಹಿಳೆಯರನ್ನು ಗುರುತಿಸಿ ಗರ್ಭಪಾತಕ್ಕೆ ಕರೆ ತರುತ್ತಿತ್ತು. ಕೆಲವರು ಭ್ರೂಣ ಪತ್ತೆಗೂ ಬರುತ್ತಿದ್ದರು. ಆನಂತರ ಹೆಣ್ಣು ಭ್ರೂಣ ಹತ್ಯೆಯನ್ನು ಮಾಡುತ್ತಿದ್ದರು. ಇದಕ್ಕೆ ಅವರು ನಿಗದಿತ ಹಣ ಪಡೆಯುತ್ತಿದ್ದರು.

ಮೈಸೂರಿನ ಮಾತಾ ಆಸ್ಪತ್ರೆಯಲ್ಲದೇ ಮಂಡ್ಯದ ಕೆಲವು ಕಡೆಯೂ ಇವರು ಈ ಚಟುವಟಿಕೆ ನಡೆಸುತ್ತಿದ್ದರು. ಮಂಡ್ಯದ ಆಲೆಮನೆಯೊಂದರಲ್ಲೂ ಸ್ಕ್ಯಾನಿಂಗ್‌ ಯಂತ್ರ ಇರಿಸಿದ್ದರು. ಹಲವು ವರ್ಷದಿಂದ ಇದು ನಡೆದಿತ್ತು. ಬೈಯಪ್ಪನಹಳ್ಳಿ ಪೊಲೀಸರು ವೀರೇಶ್‌ ಎಂಬಾತನನ್ನು ಬಂಧಿಸಿದಾಗ ಈ ಎಲ್ಲಾ ವಿಚಾರವೂ ಬಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಬೊಬ್ಬರನ್ನೇ ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಸುಮಾರು 900 ಭ್ರೂಣ ಹತ್ಯೆಯನ್ನು ಎರಡು ವರ್ಷದ ಅವಧಿಯಲ್ಲಿ ಮಾಡಿರುವುದಾಗಿ ಆರೋಪಿಗಳು ಬಾಯಿ ಬಿಟ್ಟಿದ್ದಾರೆ. ಸಿಬ್ಬಂದಿ ಬಂಧನದ ವಿಚಾರ ತಿಳಿದು ಡಾ.ಚಂದನ್‌ ಬಲ್ಲಾಳ್‌ ತಲೆ ಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿತ್ತು. ಶನಿವಾರ ಚಂದನ್‌ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಅವರಿಂದ ನಿಖರ ಮಾಹಿತಿ ಸಿಗುವ ನಿರೀಕ್ಷೆಯಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಈಗಾಗಲೇ ಮೈಸೂರಿನ ಉದಯಗಿರಿಯಲ್ಲಿರುವ ಮಾತಾ ಆಸ್ಪತ್ರೆ, ಡಾ.ರಾಜಕುಮಾರ್‌ ಆಸ್ಪತ್ರೆಯಲ್ಲಿರುವ ಆಯುರ್ವೇದಿಕ್‌ ಪೈಲ್ಸ್‌ ಡೇ ಕೇರ್‌ ಗಳನ್ನು ಜಪ್ತಿ ಮಾಡಲಾಗಿದೆ.

ಬೆಂಗಳೂರು, ಮಂಡ್ಯ, ಮಂಡ್ಯ, ರಾಮನಗರ ಮಾತ್ರವಲ್ಲದೇ ಇತರೆಡೆಗೂ ಈ ಜಾಲ ಹಬ್ಬಿರುವ ಶಂಕೆಯಿದೆ. ವಿಚಾರಣೆಗೆ ಒಳಪಡಿಸಿದರೆ ಇನ್ನಷ್ಟು ಮಂದಿ ಬಂಧನಕ್ಕೊಳಗಾಗುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com