ಪಾಲಿಕೆ ವ್ಯಾಪ್ತಿಯ ಆಸ್ತಿ ದಾಖಲೆಗಳನ್ನು ಡಿಜಿಟಲ್​ ವ್ಯವಸ್ಥೆಗೆ ಅಳವಡಿಸಿ: ಬಿಬಿಎಂಪಿಗೆ ಹೈಕೋರ್ಟ್ ಸೂಚನೆ

ಬಿಬಿಎಂಪಿಯು ಹಳೆಯ ಆಸ್ತಿಗಳಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಡಿಜಿಟಲ್‌ ವ್ಯವಸ್ಥೆಗೆ ಅಳವಡಿಸಬೇಕು. ಇದರಿಂದ ನಿರ್ದಿಷ್ಟ ಆಸ್ತಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳು ವಿದ್ಯುನ್ಮಾನ/ಡಿಜಿಟಲ್‌ ರೂಪದಲ್ಲಿ ಲಭ್ಯವಾಗಲಿವೆ ಎಂದು ಹೈಕೋರ್ಟ್‌ ಆದೇಶಿಸಿದ್ದು, ಬಿಬಿಎಂಪಿ ಮುಖ್ಯ ಆಯುಕ್ತರು ಇ-ಆಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿಯ ಜೊತೆಗೂಡಿ ಯೋಜನೆಯೊಂದನ್ನು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಬಿಬಿಎಂಪಿಯು ಹಳೆಯ ಆಸ್ತಿಗಳಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಡಿಜಿಟಲ್‌ ವ್ಯವಸ್ಥೆಗೆ ಅಳವಡಿಸಬೇಕು. ಇದರಿಂದ ನಿರ್ದಿಷ್ಟ ಆಸ್ತಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳು ವಿದ್ಯುನ್ಮಾನ/ಡಿಜಿಟಲ್‌ ರೂಪದಲ್ಲಿ ಲಭ್ಯವಾಗಲಿವೆ ಎಂದು ಹೈಕೋರ್ಟ್‌ ಆದೇಶಿಸಿದ್ದು, ಬಿಬಿಎಂಪಿ ಮುಖ್ಯ ಆಯುಕ್ತರು ಇ-ಆಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿಯ ಜೊತೆಗೂಡಿ ಯೋಜನೆಯೊಂದನ್ನು ರೂಪಿಸಬೇಕು ಎಂದು ನಿರ್ದೇಶಿಸಿದೆ.

ಬೆಂಗಳೂರಿನ ಪದ್ಮನಗರದ ಅಸ್ಲಾಂ ಪಾಷಾ ಅವರು ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅನುಮೋದಿತ ಯೋಜನೆ (ಸ್ಯಾಂಕ್ಷನ್‌ ಪ್ಲಾನ್) ಸಲ್ಲಿಸಿಲ್ಲ ಎಂದು ಕಟ್ಟಡ ನಿರ್ಮಾಣ ಅಕ್ರಮ ಎಂದು ಬಿಬಿಎಂಪಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಪುರಸ್ಕರಿಸಿ, ಬಿಬಿಎಂಪಿಗೆ ಪೀಠವು ಹಲವು ನಿರ್ದೇಶನಗಳನ್ನು ನೀಡಿದೆ.

ಅನುಮೋದಿತ ಯೋಜನೆಗಳು, ಖಾತೆ ಪತ್ರಗಳು, ತೆರಿಗೆ ಪಾವತಿಸಿದ ರಸೀದಿಗಳು, ಸ್ವ ಮೌಲ್ಯಮಾಪನ ನಮೂನೆ ಅರ್ಜಿ ಇತ್ಯಾದಿಗಳನ್ನು ಡಿಜಿಟಲೀಕರಣ ಮಾಡುವ ಮೂಲಕ, ಕಾಯಿದೆಯ ಅನ್ವಯ ಯಾವುದೇ ನಿರ್ದಿಷ್ಟ ಆಸ್ತಿಯ ಸಂಬಂಧ ಕ್ರಮ ತೆಗೆದುಕೊಳ್ಳಲು ಅಧಿಕಾರಿಗೆ ಯೂಸರ್‌ ನೇಮ್‌ ಮತ್ತು ಪಾಸ್‌ಪಾರ್ಡ್‌ ನೀಡಬೇಕು. ಇದರಿಂದ ಅದು ಮೂರನೇ ವ್ಯಕ್ತಿಗೆ ಲಭ್ಯವಾಗುವುದಿಲ್ಲ. ಇದೆಲ್ಲವನ್ನೂ ಒಳಗೊಂಡ ವ್ಯವಸ್ಥೆ ರೂಪಿಸಲು ಇ-ಆಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿಯೊಂದಿಗೆ ಬಿಬಿಎಂಪಿ ಮುಖ್ಯ ಆಯುಕ್ತರು ಸಮನ್ವಯ ಸಾಧಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.

ಎಲ್ಲಾ ಹಳೆಯ ದಾಖಲೆಗಳನ್ನು ಡಿಜಿಟಲೀಕರಣ ಮಾಡಿ, ಎಲ್ಲಾ ಅಧಿಕಾರಿಗಳಿಗೆ ಲಭ್ಯವಾಗುವಂತೆ ಜಾರಿಗೊಳಿಸಬೇಕು. ನಿರ್ದಿಷ್ಟ ಆಸ್ತಿಗೆ ಸಂಬಂಧಿಸಿದ ದಾಖಲೆಗಳು ಕಂದಾಯ, ನಗರಾಭಿವೃದ್ಧಿ ಇಲಾಖೆ, ಯೋಜನಾ ಪ್ರಾಧಿಕಾರ, ಉಪ ನೋಂದಣಾಧಿಕಾರಿ ಕಚೇರಿ ಇತ್ಯಾದಿಗೆ ಲಭ್ಯವಾಗವಾಗಬೇಕು. ನಿರ್ದಿಷ್ಟ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಮ್ಯಾಪ್‌ ಮಾಡಿ ಅದನ್ನು ಆ ಆಸ್ತಿಯ ಜೊತೆ ಸೇರ್ಪಡಣೆ ಮಾಡಬೇಕು. ಹೀಗೆ ಮಾಡುವುದರಿಂದ ಯಾವುದೇ ಒಂದು ಆಸ್ತಿಗೆ ಸಂಬಂಧಿಸಿದ ದಾಖಲೆಯು ಬಿಬಿಎಂಪಿ ಕಾಯಿದೆಯ ಅನ್ವಯ ಕ್ರಮಕೈಗೊಳ್ಳಬೇಕಾದ ಅಧಿಕಾರಿಗೆ ಸುಲಭವಾಗಿ ಲಭ್ಯವಾಗಲಿದೆ ಎಂದು ನ್ಯಾಯಾಲಯ ವಿವರಿಸಿತು.

ಈ ನಿಟ್ಟಿನಲ್ಲಿ ನಗರಾಭಿವೃದ್ಧಿ, ಹಣಕಾಸು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಬೆಸ್ಕಾಂ, ಬಿಡಬ್ಲ್ಯುಎಸ್‌ಎಸ್‌ಬಿ ಮತ್ತು ಇತರೆ ಯಾವುದೇ ಇಲಾಖೆಯು ಅಗತ್ಯ ಸಹಕಾರ ಮತ್ತು ನಿರ್ದಿಷ್ಟ ಆಸ್ತಿಗೆ ಸಂಬಂಧಿತ ದಾಖಲೆಗಳನ್ನು ಮ್ಯಾಪ್‌ ಮಾಡಿ, ಟ್ಯಾಗ್‌ ಮಾಡಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.

ಅರ್ಜಿದಾರರಿಗೆ ಬಿಬಿಎಂಪಿಯು ಅನುಮೋದಿತ ಯೋಜನೆ ನೀಡಿದ್ದು, ಅದರ ದಾಖಲೆಗಳು ಕಾರ್ಪೊರೇಷನ್‌ನ ಬೇರೆ ವಿಭಾಗದ ಕಸ್ಟಡಿಯಲ್ಲಿ ಇರುತ್ತವೆ. ದಾಖಲೆಗಳ ಕಸ್ಟಡಿ ಹೊಂದಿರುವ ಪಾಲಿಕೆ ನಾಗರಿಕರು ಅವುಗಳನ್ನು ಸಲ್ಲಿಸಬೇಕು ಎಂದು ಹೇಳಲಾಗದು. ಜನರು ಅವುಗಳನ್ನು ಸಲ್ಲಿಸದೇ ಇದ್ದರೆ ತನ್ನ ಬಳಿಯೇ ಇರುವ ದಾಖಲೆಗಳನ್ನು ಪರಿಶೀಲಿಸಲು ಪಾಲಿಕೆ ಅಧಿಕಾರಿಗಳಿಗೆ ಯಾರೂ ತಡೆಯುವುದಿಲ್ಲ. ಈ ಎಲ್ಲಾ ದಾಖಲೆಗಳನ್ನು ಡಿಜಿಟಲೀಕರಣ ಮಾಡಿದರೆ ಅವುಗಳ ನಕಲಿ ಹಾವಳಿ ತಪ್ಪಲಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಅರ್ಜಿದಾರರ ಪರವಾಗಿ ವಕೀಲ ಎಂ ಎನ್‌ ಮಲ್ಲಿಕಾರ್ಜುನ್‌ ವಾದಿಸಿದ್ದರು. ಪ್ರತಿವಾದಿ ಬಿಬಿಎಂಪಿ ಪರವಾಗಿ ವಕೀಲ ಪವನ್‌ ಕುಮಾರ್‌ ವಾದ ಮಂಡಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com