ಹೆಣ್ಣು ಭ್ರೂಣ ಲಿಂಗ ಪತ್ತೆ ದಂಧೆ; ನಾಲ್ವರು ಆರೋಪಿಗಳ ಬಂಧನ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೆಣ್ಣು ಭ್ರೂಣ ಲಿಂಗ ಪತ್ತೆ ಮಾಡಿ, ಗರ್ಭಪಾತ ಮಾಡಿಸುತ್ತಿದ್ದ ಜಾಲವೊಂದನ್ನು ಬೈಯಪ್ಪನಹಳ್ಳಿ ಠಾಣೆಯ ಪೊಲೀಸರು ಭೇದಿಸಿದ್ದಾರೆ.
ಬಂಧಿತ ಆರೋಪಿಗಳು.
ಬಂಧಿತ ಆರೋಪಿಗಳು.

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೆಣ್ಣು ಭ್ರೂಣ ಲಿಂಗ ಪತ್ತೆ ಮಾಡಿ, ಗರ್ಭಪಾತ ಮಾಡಿಸುತ್ತಿದ್ದ ಜಾಲವೊಂದನ್ನು ಬೈಯಪ್ಪನಹಳ್ಳಿ ಠಾಣೆಯ ಪೊಲೀಸರು ಭೇದಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಯಪ್ಪನಹಳ್ಳಿ ಠಾಣೆಯ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

ಮೈಸೂರಿನ ಬನ್ನೂರು ರಸ್ತೆ ವಸಂತನಗರದ ಶಿವಲಿಂಗೇಗೌಡ, ಮಂಡ್ಯ ಜಿಲ್ಲೆ ಕೂಳೇನಹಳ್ಳಿಯ ನಯನಕುಮಾರ್, ಪಾಂಡವಪುರ ತಾಲೂಕಿನ ಸುಂಕದನ್ನೂರು ಗ್ರಾಮದ ನವೀನಕುಮಾರ್, ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಕ್ಯಾಸಿನಕೆರೆ ಗ್ರಾಮದ ಟಿ.ಎಂ.ವೀರೇಶ್ ಬಂಧಿತ ಆರೋಪಿಗಳಾಗಿದ್ದಾರೆ.

ಆರೋಪಿಗಳು ಮಂಡ್ಯದ ಕಬ್ಬು ಅರೆಯುವ ಘಟಕದಲ್ಲಿ ಲ್ಯಾಬ್ ನಡೆಸುತ್ತಿದ್ದರು. ಈ ಲ್ಯಾಬ್ ನಲ್ಲಿ ಸ್ಕ್ಯಾನಿಂಗ್ ಯಂತ್ರಗಳನ್ನು ಇರಿಸಿಕೊಂಡಿದ್ದರು. ಲ್ಯಾಬ್ ನಲ್ಲಿ ಹೆಣ್ಣು ಭ್ರೂಣಗಳನ್ನು ಪತ್ತೆ ಮಾಡಿ, ಗರ್ಭಪಾತ ಮಾಡಿಸುತ್ತಿದ್ದರು ಎನ್ನಲಾಗಿದೆ.

ಅಕ್ಟೋಬರ್ 15 ರಂದು ಪೊಲೀಸರು ನಂಬಲರ್ಹ ಮಾಹಿತಿಯ ಮೇರೆಗೆ ಹಳೆ ಮದ್ರಾಸ್ ರಸ್ತೆಯ ಸುತ್ತಮುತ್ತ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದಾಗ ಘಟನೆ ಬೆಳಕಿಗೆ ಬಂದಿತ್ತು.

ವಾಹನದಲ್ಲಿ ಗರ್ಭಿಣಿಯನ್ನು ಮಂಡ್ಯಕ್ಕೆ ಕರೆದುಕೊಂಡು ಹೋಗುತ್ತಿದ್ದ ವೀರೇಶ್ ಮತ್ತು ಗೌಡ ಎಂಬವವರನ್ನು ಪೊಲೀಸರು ತಡೆದರೂ ವಾಹನ ನಿಲ್ಲಿಸದೆ ವೇಗವಾಗಿ ಓಡಿಸಿದ್ದರು.  ಆದರೆ ಎನ್‌ಜಿಇಎಫ್ ಸಿಗ್ನಲ್‌ನಲ್ಲಿ ಅವರನ್ನು ಬಂಧಿಸಲಾಗಿತ್ತು.

ಆರೋಪಿಗಳು ಗರ್ಭಿಣಿಯರನ್ನು ಮಂಡ್ಯದ ‘ಆಲಮನೆ’ಗೆ (ಕಬ್ಬು ಅರೆದು ಬೆಲ್ಲ ತಯಾರಿಸುವ ಘಟಕ) ಕರೆದುಕೊಂಡು ಹೋಗುತ್ತಿದ್ದರು. ಲ್ಯಾಬ್ ನಲ್ಲಿ ಲಿಂಗವನ್ನು ನಿರ್ಧರಿಸಿದ ನಂತರ ಹೆಣ್ಣು ಭ್ರೂಣಗಳನ್ನು ಗರ್ಭಪಾತ ಮಾಡುತ್ತಿದ್ದರು. ಪ್ರತಿ ಸ್ಕ್ಯಾನ್ ಗೆ 18,000-20,000 ರೂ. ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.

ನಾವು ದಾಳಿ ನಡೆಸಿದಾಗ ಅಲ್ಲಿ ಏಳು ಮಹಿಳೆಯರು ಕಂಡುಬಂದಿದ್ದರು. ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಲೀಗಲ್ ನೋಟಿಸ್ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದಲ್ಲಿ ಬಂಧಿತ ಆರೋಪಿ ಶಿವಲಿಂಗೇಗೌಡ ಅವರ ಪತ್ನಿ ಸುನಂದಾ ಅವರ ಪಾತ್ರದ ಬಗ್ಗೆಯೂ ಪೊಲೀಸರು ಶಂಕಿಸಿದ್ದಾರೆ.

ಬೆಂಗಳೂರು, ಮೈಸೂರು, ದಾವಣಗೆರೆ, ಮಂಡ್ಯ ಸೇರಿದಂತೆ ರಾಜ್ಯದ ವಿವಿಧೆಡೆ ಇರುವ ತನ್ನ ಸ್ನೇಹಿತರು ಹಾಗೂ ಸಂಬಂಧಿಕರ ಮೂಲಕ ಈಕೆ ಗರ್ಭಿಣಿ ಮಹಿಳೆಯರನ್ನು ಸಂಪರ್ಕಿಸುತ್ತಿದ್ದಳು ಎನ್ನಲಾಗಿದೆ.

ಪ್ರಕರಣ ಸಂಬಂಧ ಬೈಯಪ್ಪನಹಳ್ಳಿ ಪೊಲೀಸರು ಲಿಂಗ ಆಯ್ಕೆ ನಿಷೇಧ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ದಂಧೆಗೆ ಬಳಸುತ್ತಿದ್ದ ಸ್ಕ್ಯಾನಿಂಗ್ ಯಂತ್ರ ಹಾಗೂ ಇತರೆ ವೈದ್ಯಕೀಯ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com