ಚಿರತೆ ಸೆರೆಹಿಡಿಯಲು ಅಧಿಕಾರಿಗಳಿಂದ ಸರ್ವಪ್ರಯತ್ನ; ಎಚ್ಚರಿಕೆಯಿಂದಿರಿ: ಅರಣ್ಯ ಸಚಿವ ಈಶ್ವರ್ ಖಂಡ್ರೆ

ಕಳೆದ ಮೂರು ದಿನಗಳಿಂದ ನಗರದ ಜನವಸತಿ ಪ್ರದೇಶಗಳಲ್ಲಿ ಬೀಡು ಬಿಟ್ಟಿರುವ ಚಿರತೆಯನ್ನು ಸೆರೆಹಿಡಿಯಲು ಅಧಿಕಾರಿಗಳು ಸರ್ವಪ್ರಯತ್ನ ನಡೆಸುತ್ತಿದ್ದಾರೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಂಗಳವಾರ ಹೇಳಿದ್ದಾರೆ.
ಸಚಿವ ಈಶ್ವರ್ ಖಂಡ್ರೆ
ಸಚಿವ ಈಶ್ವರ್ ಖಂಡ್ರೆ
Updated on

ಬೆಂಗಳೂರು: ಕಳೆದ ಮೂರು ದಿನಗಳಿಂದ ನಗರದ ಜನವಸತಿ ಪ್ರದೇಶಗಳಲ್ಲಿ ಬೀಡು ಬಿಟ್ಟಿರುವ ಚಿರತೆಯನ್ನು ಸೆರೆಹಿಡಿಯಲು ಅಧಿಕಾರಿಗಳು ಸರ್ವಪ್ರಯತ್ನ ನಡೆಸುತ್ತಿದ್ದಾರೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಂಗಳವಾರ ಹೇಳಿದ್ದಾರೆ.

'ಶೀಘ್ರದಲ್ಲೇ ಚಿರತೆಯನ್ನು ಸೆರೆಹಿಡಿಯಲಾಗುವುದು. ಈ ನಿಟ್ಟಿನಲ್ಲಿ ಜನರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಆದರೆ, ಎಚ್ಚರಿಕೆಯಿಂದಿರಿ' ಎಂದು ಅವರು ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿರತೆ ಕಾಣಿಸಿಕೊಂಡ ಸ್ಥಳದಲ್ಲಿ ಅಧಿಕಾರಿಗಳು ಬೀಡುಬಿಟ್ಟಿದ್ದಾರೆ. ಥರ್ಮಲ್ ಕ್ಯಾಮೆರಾಗಳನ್ನು ಬಳಸಲಾಗಿದ್ದು, ರಾತ್ರಿ ವೇಳೆಯಲ್ಲೂ ಚಿರತೆಯನ್ನು ಸೆರೆಹಿಡಿಯುವ ಕಾರ್ಯಾಚರಣೆ ನಡೆಯುತ್ತಿದೆ. ಚಿರತೆ ಸೆರೆಹಿಡಿಯಲು ಬೋನುಗಳನ್ನು ಅಳವಡಿಸಲಾಗಿದೆ. ಹೊರಗಡೆ ಓಡಾಡುವಾಗ ಜನರು ಜಾಗರೂಕರಾಗಿರಬೇಕು. ಸಣ್ಣ ಮಕ್ಕಳು ಯಾವಾಗಲೂ ಹಿರಿಯರ ಜೊತೆಗಿರಬೇಕು ಮತ್ತು ಅವರನ್ನು ಹೊರಗೆ ಆಟವಾಡಲು ಸಹ ಕಳುಹಿಸಬಾರದು' ಎಂದು ಅವರು ಹೇಳಿದರು.

ಚಿರತೆ ಕಂಡುಬಂದಲ್ಲಿ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ನಿವಾಸಿಗಳಿಗೆ ಮನವಿ ಮಾಡಲಾಗಿದೆ. ಕೃಷ್ಣಾ ರೆಡ್ಡಿ ಕೈಗಾರಿಕಾ ಪ್ರದೇಶದ ಬಳಿ ಇರುವ ಖಾಲಿ ಕಟ್ಟಡದಲ್ಲಿ ಚಿರತೆ ಆಶ್ರಯ ಪಡೆದಿರುವ ಶಂಕೆ ವ್ಯಕ್ತವಾಗಿದೆ ಎಂದು ಮೂಲಗಳು ವಿವರಿಸಿವೆ.

ಚಿರತೆ ಸೆರೆಹಿಡಿಯಲು ಮೈಸೂರಿನಿಂದ ವಿಶೇಷ ತಂಡ ಆಗಮಿಸಿದೆ. ಚಿರತೆ ಹಿಡಿಯುವ ಕಾರ್ಯಾಚರಣೆಯ ವೇಳೆ ಸುತ್ತಮುತ್ತಲಿನ ಐಟಿ ಕಂಪನಿಗಳ ಉದ್ಯೋಗಿಗಳಿಗೆ ಕ್ಯಾಂಪಸ್‌ನಿಂದ ಹೊರಗೆ ಹೋಗದಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಬೆಂಗಳೂರಿನ ವೈಟ್‌ಫೀಲ್ಡ್ ಬಳಿಯ ಕೂಡ್ಲು ಗೇಟ್ ಪ್ರದೇಶ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿರತೆ ಕಾಣಿಸಿಕೊಂಡಿದ್ದರಿಂದ ಜನರು ಭಯಭೀತರಾಗಿದ್ದಾರೆ.

ಚಿರತೆ ಕಾಣಿಸಿಕೊಂಡಿರುವುದರಿಂದ ಮನೆಯಿಂದ ಹೊರಗೆ ಬರಲು ಭಯವಾಗುತ್ತಿದೆ. ಸಂಚರಿಸುವಾಗ ಕೈಯಲ್ಲಿ ಬೆತ್ತ ಹಿಡಿದುಕೊಂಡು ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ನಿವಾಸಿಗಳು ವಿವರಿಸುತ್ತಾರೆ.

ಅಕ್ಟೋಬರ್ 29ರ ಬೆಳ್ಳಂಬೆಳಗ್ಗೆ ಕಾರ್ ಗ್ಯಾರೇಜ್, ಅಪಾರ್ಟ್‌ಮೆಂಟ್ ಆವರಣದ ಲಿಫ್ಟ್ ಬಳಿ, ಕಾಂಪೌಂಡ್ ಮತ್ತು ಪಾರ್ಕಿಂಗ್ ಪ್ರದೇಶದಲ್ಲಿ ಚಿರತೆಯ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದನ್ನು ಸ್ಥಳೀಯ ನಿವಾಸಿಗಳು ಮತ್ತು ಬೀಟ್ ಪೋಲೀಸರು ಸಹ ಗಮನಿಸಿದ್ದಾರೆ.

ಅರಣ್ಯ ಇಲಾಖೆ ಅಧಿಕಾರಿಗಳು ಶೋಧ ಕಾರ್ಯ ಕೈಗೊಂಡರೂ ಚಿರತೆ ಸದ್ಯ ಪತ್ತೆಯಾಗಿಲ್ಲ. ಸದ್ಯ ಅರಣ್ಯ ಇಲಾಖೆಯು ಅನೇಕ ಸ್ಥಳಗಳಲ್ಲಿ ಪಂಜರಗಳನ್ನು ಇರಿಸಿದೆ ಮತ್ತು ರಾತ್ರಿಯಲ್ಲಿ ಜನರು ಹೊರಗೆ ಹೋಗದಂತೆ ಸೂಚಿಸಿದೆ. ವಿಶೇಷವಾಗಿ ಬೊಮ್ಮನಹಳ್ಳಿ, ಎಚ್‌ಎಸ್‌ಆರ್‌ ಲೇಔಟ್‌, ಬಿಟಿಎಂ ಲೇಔಟ್‌ ನಿವಾಸಿಗಳು ರಾತ್ರಿ ವೇಳೆ ಒಂಟಿಯಾಗಿ ಓಡಾಡದಂತೆ ತಿಳಿಸಲಾಗಿದೆ.

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಿಸಿಎಫ್) ಎಸ್.ಎಸ್. ಲಿಂಗರಾಜು ಮತ್ತು ಜಿಲ್ಲಾ ಅರಣ್ಯಾಧಿಕಾರಿ (ಡಿಎಫ್‌ಒ) ರವೀಂದ್ರ ಅವರ ಮೇಲ್ವಿಚಾರಣೆಯಲ್ಲಿ ಐದು ತಂಡಗಳನ್ನು ರಚಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com