
ಬೆಂಗಳೂರು: ಸರಿಸುಮಾರು ಒಂದು ತಿಂಗಳ ಬಳಿಕ ಸಿಲಿಕಾನ್ ಸಿಟಿ ಬೆಂಗಳೂರಿಗೆ ಮಳೆರಾಯ ವಾಪಸ್ಸಾಗಿದ್ದು, ಒಂದೇ ರಾತ್ರಿ ನಗರಾದ್ಯಂತ ಬರೊಬ್ಬರಿ 64.8ಮಿಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಈ ಬಾರಿಯ ಸಂಪೂರ್ಣ ಆಗಸ್ಟ್ ತಿಂಗಳು ಶುಷ್ಕವಾಗಿತ್ತಾದರೂ ತಿಂಗಳ ಅಂತಿಮ ದಿನದ ರಾತ್ರಿ ಇಡೀ ಸುರಿದ ಮಳೆ ಬೆಂಗಳೂರಿನ ತಂಪಿನ ವಾತಾವರಣವನ್ನು ಮರಳಿ ತಂದಿದೆ. ಗುರುವಾರ ಸಂಜೆ ಬೆಂಗಳೂರು ನಗರದಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆಯಾಗಿದೆ. ಬೆಂಗಳೂರು ನಗರದಲ್ಲಿ ನಿನ್ನೆ ಒಂದೇ ರಾತ್ರಿ ಸುಮಾರು 64.8ಮಿಮೀ ಮಳೆ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಈ ಪೈಕಿ ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ 52ಮಿಮೀ ಮಳೆಯಾಗಿದ್ದು, ಪಶ್ಚಿಮ ವಲಯದ ರಾಜಮಹಲ್ ಗುಟ್ಟಹಳ್ಳಿಯಲ್ಲಿ ಗರಿಷ್ಟ ಅಂದರೆ 111.5 ಮಿಮೀ ಮಳೆಯಾಗಿದೆ. ಅಂತೆಯೇ ಯಲಹಂಕ ವಲಯದ ವಿದ್ಯಾರಣ್ಯಪುರದಲ್ಲಿ (89.5 ಮಿಮೀ) ಮಳೆಯಾಗಿದೆ. ಮಹದೇವಪುರ ವಲಯದ ಎಚ್ ಎಎಲ್ ನಲ್ಲಿ 73ಮಿ.ಮೀ ಮಳೆಯಾಗಿದೆ. ಉಳಿದಂತೆ ಕೊಡಿಗೇಹಳ್ಳಿ 68, ಕೋಣನಕುಂಟೆ 64, ವಿದ್ಯಾಪೀಠ 55, ಬಿಳೇಕಹಳ್ಳಿ 52, ಮಾರತ್ತಹಳ್ಳಿಯಲ್ಲಿ 49.5ಮಿಮೀ ಮಳೆಯಾಗಿದೆ ಎಂದು ತಿಳಿದುಬಂದಿದೆ.
ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ
ಯಲಹಂಕದ ಭದ್ರಪ್ಪ ಲೇಔಟ್, ಚಾಮರಾಜಪೇಟೆ, ಕಾಮಾಕ್ಷಿಪಾಳ್ಯ ಹಾಗೂ ಶಿವಾಜಿನಗರದ ಚಿನ್ನಪ್ಪ ಗಾರ್ಡನ್‌ನಲ್ಲಿ ಹಲವಾರು ಮನೆಗಳಿಗೆ ನೀರು ನುಗ್ಗಿದೆ. ಮಾಗಡಿ ರಸ್ತೆ, ಮೈಸೂರು ರಸ್ತೆ, ಹೊರ ವರ್ತುಲ ರಸ್ತೆ, ಎಲೆಕ್ಟ್ರಾನಿಕ್ಸ್ ಸಿಟಿ, ಹಳೆ ವಿಮಾನ ನಿಲ್ದಾಣ ರಸ್ತೆ, ಕೋರಮಂಗಲ ಸೇರಿದಂತೆ ಹಲವು ರಸ್ತೆಗಳು ಜಲಾವೃತಗೊಂಡಿವೆ. ಅಲ್ಲದೆ, ನಗರದಾದ್ಯಂತ ನಿಧಾನಗತಿಯ ವಾಹನ ದಟ್ಟಣೆ ಕಂಡುಬಂದಿದೆ.
ಇದನ್ನೂ ಓದಿ: ಬೆಂಗಳೂರಿನ ಹಲವೆಡೆ ಗುಡುಗು ಸಹಿತ ಧಾರಾಕಾರ ಮಳೆ
ಜಲಾವೃತದಿಂದಾಗಿ ನಿಧಾನಗತಿಯ ಸಂಚಾರ:
ರೈನ್‌ಬೋ ಆಸ್ಪತ್ರೆ, ಎಂಎಂ ಟೆಂಪಲ್ ಮತ್ತು ಹೆಬ್ಬಾಳ ಫ್ಲೈಓವರ್ ಒಆರ್‌ಆರ್‌ನಲ್ಲಿ. ವಿಂಡ್ಸರ್ ಮ್ಯಾನರ್ ಸೇತುವೆಯಲ್ಲಿ, ಬಳ್ಳಾರಿ ರಸ್ತೆಯ ಮೇಖ್ರಿ ಸರ್ಕಲ್, ಜಯಮಹಲ್ ರಸ್ತೆಯಲ್ಲಿ ಸಿಕ್ಯೂಎಎಲ್ ಕ್ರಾಸ್ ಮತ್ತು ಕಂಟೋನ್ಮೆಂಟ್ ಜಂಕ್ಷನ್. ಅನಿಲ್ ಕುಂಬ್ಳೆ ವೃತ್ತ, ಕ್ವೀನ್ಸ್ ವೃತ್ತ ಮತ್ತು ಸಿಟಿಒ ವೃತ್ತ CBD ಪ್ರದೇಶ" ಎಂದು ಸಂಚಾರ ವಿಭಾಗದ ಜಂಟಿ ಆಯುಕ್ತ ಎಂಎನ್ ಅನುಚೇತ್ ಟ್ವೀಟ್ ಮಾಡಿದ್ದಾರೆ.
2 ದಿನ ಭಾರಿ ಮಳೆ
ಏತನ್ಮಧ್ಯೆ, ಭಾರತೀಯ ಹವಾಮಾನ ಇಲಾಖೆ (IMD) ಮುಂದಿನ ಎರಡು ದಿನಗಳಲ್ಲಿ ಬೆಂಗಳೂರು ನಗರ ಮತ್ತು ಅದರ ಹೊರವಲಯದಲ್ಲಿ 6 ರಿಂದ 11ಸೆಂಮೀ ವರೆಗೆ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ನೀಡಿದ್ದು ಹಳದಿ ಎಚ್ಚರಿಕೆ ನೀಡಿದೆ.
Advertisement