ಬಿಬಿಎಂಪಿ ಮಾರ್ಗಸೂಚಿ: 'ಪ್ಲಾಸ್ಟರ್ ಆಫ್ ಪ್ಯಾರಿಸ್'ನಿಂದ ನಿರ್ಮಿಸಿದ ಗಣೇಶ ಮೂರ್ತಿಗೆ ಸಂಪೂರ್ಣ ನಿಷೇಧ!

ಗಣೇಶ ಚತುರ್ಥಿ ಹತ್ತಿರಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ತಯಾರಿಸಿದ ಗಣೇಶ ಮೂರ್ತಿಗಳ ತಯಾರಿಕೆ, ಮಾರಾಟವನ್ನು ಸಂಪೂರ್ಣ ನಿಷೇಧಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಗಣೇಶ ಚತುರ್ಥಿ ಹತ್ತಿರಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ತಯಾರಿಸಿದ ಗಣೇಶ ಮೂರ್ತಿಗಳ ತಯಾರಿಕೆ, ಮಾರಾಟವನ್ನು ಸಂಪೂರ್ಣ ನಿಷೇಧಿಸಿದೆ.

ಗಣೇಶ ಹಬ್ಬ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರ ನೇತೃತ್ವದಲ್ಲಿ ನಿನ್ನೆ ಸಭೆ ನಡೆಯಿತು. ಈ ವೇಳೆ ತುಷಾರ್ ಗಿರಿನಾಥ್ ಅವರು, ಹಬ್ಬಕ್ಕೆ ಪಾಲಿಕೆ ವತಿಯಿಂದ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ಸಭೆಯಲ್ಲಿ ಕೆಲ ನಿರ್ಣಯಗಳನ್ನು ಕೈಗೊಳ್ಳಲಾಗಿತು.

ಹಬ್ಬದ ಸಂದರ್ಭದಲ್ಲಿ ಶುಭ ಹಾರೈಸಿ ಬ್ಯಾನರ್ ಗಳ ಹಾಕಿ, ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು. ಅಲ್ಲದೆ, ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಣೆ ಮಾಡುವಂತೆ ನಿರ್ದೇಶನ ನೀಡಿದರು.

ಪ್ರತಿ ವರ್ಷದಂತೆ ಪಾಲಿಕೆ ವತಿಯಿಂದ ಗಣೇಶ ವಿಸರ್ಜನೆಗೆ ನಗರದ ಕೇಂದ್ರ ಭಾಗದಲ್ಲಿರುವ ಸ್ಯಾಂಕಿ ಕೆರೆ, ಹಲಸೂರು ಕೆರೆ, ಯಡಿಯೂರು ಕೆರೆ, ಹೆಬ್ಬಾಳ ಕೆರೆ ಹಾಗೂ ಇತರೆ ಪ್ರಮುಖ ಕೆರೆಗಳಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು. ಕೆಲ ಪ್ರದೇಶಗಳಲ್ಲಿ ಕೆರೆಗಳು ವಸತಿ ಪ್ರದೇಶದಿಂದ ದೂರವಿರುವುದರಿಂದ ಸಾರ್ವಜನಿಕರು ಚಿಕ್ಕ-ಚಿಕ್ಕ ಮೂರ್ತಿಗಳನ್ನು ವಿಸರ್ಜನೆ ಮಾಡುವ ಸಲುವಾಗಿ ಪ್ರತಿ ವಲಯಗಳ ಪ್ರಮುಖ ಸ್ಥಳ/ಜಂಕ್ಷನ್ ಮತ್ತು ಅವಶ್ಯಕತೆ ಇರುವ ಕಡೆ ವಾರ್ಡ್‌ವಾರು ತಾತ್ಕಾಲಿಕವಾಗಿ ಸಂಚಾರಿ ವಿಸರ್ಜನಾ ಘಟಕ (ಮೊಬೈಲ್ ಟ್ಯಾಂಕ್)ಗಳನ್ನು ಪ್ರತಿ ವರ್ಷದಂತೆ ಈ ವರ್ಷವೂ ವ್ಯವಸ್ಥೆ ಮಾಡಬೇಕು” ಎಂದು ಹೇಳಿದರು.

ಗಣೇಶ ಮೂರ್ತಿಗಳ ವಿಸರ್ಜನೆಗೆ ಗುರುತಿಸಿರುವ ಕೆರೆಗಳ ಸುತ್ತಮುತ್ತ ಹಾಗೂ ಕಲ್ಯಾಣಿಗಳ ಆವರಣದಲ್ಲಿ ವ್ಯವಸ್ಥಿತವಾಗಿ ಬ್ಯಾರಿಕೇಡ್ ಅಳವಡಿಸಬೇಕು. ಎಲ್ಲ ವಿಸರ್ಜನಾ ಕೇಂದ್ರಗಳಲ್ಲೂ ಪಾಳಿಯನುಸಾರ ನುರಿತ ಈಜುಗಾರರನ್ನು ಮತ್ತು ಅಗತ್ಯ ಸಿಬ್ಬಂದಿಯನ್ನು ನೇಮಿಸಲು ಕ್ರಮ ಕೈಗೊಳ್ಳಬೇಕು. ಜತೆಗೆ ಆಯಾ ಸ್ಥಳಗಳಲ್ಲಿ ಮುಂಜಾಗ್ರತಾ ಕ್ರಮ ವಹಿಸುವ ಸಲುವಾಗಿ ಸಿಸಿಟಿವಿ, ವಿದ್ಯುತ್ ದೀಪಗಳ ಸೌಲಭ್ಯಗಳನ್ನು ತಪ್ಪದೇ ಅಳವಡಿಸಬೇಕು.

ವಿಸರ್ಜನಾ ಕೇಂದ್ರಗಳಲ್ಲಿ ಸಂಗ್ರಹವಾಗುವ ತ್ಯಾಜ್ಯಗಳನ್ನು(ಪೂಜಾ ಸಾಮಗ್ರಿಗಳಾದ ಹೂವು, ಬಾಳೆಯ ಕಂದು, ತಳಿರು ತೋರಣ, ಮತ್ತಿತರ ತ್ಯಾಜ್ಯ ವಸ್ತುಗಳನ್ನು) ಸಂಗ್ರಹಿಸಿ ನಿಗದಿತ ಕಂಟೈನರ್‌ಗಳ ಮೂಲಕ ಆಗಿಂದಾಗೆ ತೆರವುಗೊಳಿಸಲು ಅಗತ್ಯ ಸ್ವಚ್ಛತಾ ಸಿಬ್ಬಂದಿ ಹಾಗೂ ಸಾಗಣೆ ವಾಹನಗಳನ್ನು ಸಜ್ಜುಗೊಳಿಸಬೇಕು.

ಮೂರ್ತಿಗಳ ವಿಸರ್ಜನೆಗೆ ಅನುಕೂಲವಾಗುವಂತೆ ಅಗತ್ಯವಿದ್ದಲ್ಲಿ ದೋಣಿಗಳ ವ್ಯವಸ್ಥೆ, ನೀರೆತ್ತುವ ಪಂಪ್‌ಗಳ ವ್ಯವಸ್ಥೆ, ಕ್ರೇನ್‌ಗಳ ವ್ಯವಸ್ಥೆಗಳನ್ನು ಕೂಡ ಸಿದ್ದಪಡಿಸಿರಬೇಕು. ಜತೆಗೆ ಪೋಲಿಸ್ ಬಂದೋಬಸ್ತ್ ಮೂಲಕ ಸೂಕ್ತ ಏರ್ಪಾಡುಗಳನ್ನು ಮಾಡಿಕೊಳ್ಳಬೇಕು‌‌. ವಿಸರ್ಜನಾ ಮೆರವಣಿಗೆಯ ವೇಳೆ ಪಟಾಕಿ, ಸಿಡಿಮದ್ದು ಸಿಡಿಸುವುದು ಹಾಗೂ ನಾಗರಿಕರಿಗೆ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು.

ಪಾಲಿಕೆ ವ್ಯಾಪ್ತಿಯಲ್ಲಿ ರಾಸಾಯನಿಕ ಬಣ್ಣಗಳು, ಥರ್ಮಕೊಲ್ ಹಾಗೂ ಪ್ಲಾಸ್ಟರ್ ಆಫ್ ಪ್ಯಾರೀಸ್ ಗಣೇಶ ಮೂರ್ತಿ ತಯಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಸದರಿ ವಸ್ತುಗಳನ್ನು ಬಳಸಿ ತಯಾರಿಸುವ, ಮಾರಾಟ ಮಾಡುವ ಪ್ರದೇಶಗಳನ್ನು ರಾಸಾಯನಿಕ ಬಣ್ಣಗಳು, ಥರ್ಮಕೊಲ್ ಹಾಗೂ ಪ್ಲಾಸ್ಟರ್ ಆಫ್ ಪ್ಯಾರೀಸ್ ವಸ್ತುಗಳನ್ನು ಬಳಸಿ ಗಣೇಶ ಮೂರ್ತಿ ತಯಾರಿಕೆಯನ್ನು ಮಾಡುತ್ತಿರುವವರಿಗೆ ದಂಡ ವಿಧಿಸುವ ಜೊತೆಗೆ ಸೂಕ್ತ ಕ್ರಮವಹಿಸಬೇಕು ಎಂದು ಸೂಚಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com