ಬೆಂಗಳೂರು: ಮಗಳನ್ನು ಚುಡಾಯಿಸಿದ್ದನ್ನು ಪ್ರಶ್ನಿಸಿದ ತಂದೆಗೆ ಚಾಕುವಿನಿಂದ ಇರಿದು ಕೊಲೆ, ಯುವಕನ ಬಂಧನ
ತನ್ನ ಅಪ್ರಾಪ್ತ ಮಗಳನ್ನು ಲೈಂಗಿಕವಾಗಿ ಟೀಕಿಸಿದ್ದಕ್ಕಾಗಿ ಯುವಕನನ್ನು ಪ್ರಶ್ನಿಸಿದ 41 ವರ್ಷದ ವ್ಯಕ್ತಿಯನ್ನು ಶನಿವಾರ ರಾತ್ರಿ ಅಶೋಕನಗರ ಪೊಲೀಸ್ ವ್ಯಾಪ್ತಿಯ ಶಾಂತಿನಗರದಲ್ಲಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.
Published: 04th September 2023 08:46 AM | Last Updated: 04th September 2023 03:52 PM | A+A A-

ಪ್ರಾತಿನಿಧಿಕ ಚಿತ್ರ
ಬೆಂಗಳೂರು: ತನ್ನ ಅಪ್ರಾಪ್ತ ಮಗಳನ್ನು ಲೈಂಗಿಕವಾಗಿ ಟೀಕಿಸಿದ್ದಕ್ಕಾಗಿ ಯುವಕನನ್ನು ಪ್ರಶ್ನಿಸಿದ 41 ವರ್ಷದ ವ್ಯಕ್ತಿಯನ್ನು ಶನಿವಾರ ರಾತ್ರಿ ಅಶೋಕನಗರ ಪೊಲೀಸ್ ವ್ಯಾಪ್ತಿಯ ಶಾಂತಿನಗರದಲ್ಲಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.
ಎಲೆಕ್ಟ್ರಿಕಲ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಜಹೀದ್ (22) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಮೃತರನ್ನು ಅನ್ವರ್ ಹುಸೇನ್ ಎಂದು ಗುರುತಿಸಲಾಗಿದ್ದು, ಅವರು ಗೂಡ್ಸ್ ವಾಹನ ಚಾಲಕರಾಗಿದ್ದರು. ಸಂತ್ರಸ್ತ ಹಾಗೂ ಆರೋಪಿ ಇಬ್ಬರೂ ಶಾಂತಿನಗರದ ನಂಜಪ್ಪ ವೃತ್ತದ ಬಳಿ ವಾಸವಿದ್ದರು.
ಕೊಲೆಗಾರನನ್ನು ಬಂಧಿಸಿದ ಪೊಲೀಸರು
ಹುಸೇನ್ ಅವರ 15 ವರ್ಷದ ಮಗಳಿಗೆ ಜಹೀದ್ ಕಿರುಕುಳ ನೀಡುತ್ತಿದ್ದನು. ಆಕೆ ಶಾಲೆಗೆ ಹೋಗುವಾಗ ಹಿಂಬಾಲಿಸುತ್ತಿದ್ದನು ಮತ್ತು ತನ್ನನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದನು. ಕಳೆದ 3-4 ತಿಂಗಳಿಂದಲೂ ಇದೇ ನಡೆಯುತ್ತಿದ್ದು, ಬಾಲಕಿ ತನ್ನ ತಂದೆಗೆ ಮಾಹಿತಿ ನೀಡಿದ್ದಾಳೆ. ಈವೇಳೆ ಸಂತ್ರಸ್ತ ತನ್ನ ಮಗಳಿಂದ ದೂರ ಇರುವಂತೆ ಜಹೀದ್‌ಗೆ ಎಚ್ಚರಿಕೆ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದ್ಯಾವುದಕ್ಕೂ ಜಗ್ಗದ ಜಹೀದ್, ಬಾಲಕಿಗೆ ಕಿರುಕುಳ ನೀಡುತ್ತಲೇ ಇದ್ದ. ಶನಿವಾರವೂ ಆತ ಬಾಲಕಿಯನ್ನು ಚುಡಾಯಿಸಿದ್ದು, ಆಕೆ ಮನೆಗೆ ತೆರಳಿ ತನ್ನ ತಂದೆಗೆ ದೂರು ನೀಡಿದ್ದಾಳೆ.
ಇದನ್ನೂ ಓದಿ: ಮೈಸೂರು: ವಿವಾಹಿತ ಮಹಿಳೆಗೆ ಮೇಸೆಜ್ ಮಾಡಿದ್ದ ಯುವಕನ ಕೊಲೆ ಪ್ರಕರಣಕ್ಕೆ ಟ್ವಿಸ್ಟ್! ರಿಯಲ್ ಹಂತಕರ ಬಂಧನ!
'ರಾತ್ರಿ 9 ಗಂಟೆ ಸುಮಾರಿಗೆ, ಬಾಲಕಿಯ ತಂದೆ ಹುಸೇನ್, ಜಹೀದ್ ಮನೆಗೆ ಹೋಗಿ ಆತನ ವಿರುದ್ಧ ಅವನ ಪೋಷಕರು ಮತ್ತು ಸಹೋದರನಿಗೆ ದೂರು ನೀಡಿದ್ದಾನೆ. ಇದು ಹುಸೇನ್ ಮತ್ತು ಜಹೀದ್ ಕುಟುಂಬ ಸದಸ್ಯರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು. ಸ್ಥಳದಿಂದ ಪರಾರಿಯಾಗುವ ಮೊದಲು ಜಹೀದ್ ಚಾಕುವಿನಿಂದ ಹುಸೇನ್ ಅವರ ಕುತ್ತಿಗೆಗೆ ಇರಿದಿದ್ದಾನೆ. ಹುಸೇನ್ ಅವರನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಕೆಲವು ಗಂಟೆಗಳ ನಂತರ ಅವರು ಅಲ್ಲಿ ಕೊನೆಯುಸಿರೆಳೆದಿದ್ದಾರೆ' ಎಂದು ಪೊಲೀಸರು ಮಾಹಿತಿ ನೀಡಿದರು.
ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ಅಶೋಕನಗರ ಪೊಲೀಸರು ಭಾನುವಾರ ಮಧ್ಯಾಹ್ನ ಜಹೀದ್ ಇರುವಿಕೆಯ ಬಗ್ಗೆ ಮಾಹಿತಿ ಸಂಗ್ರಹಿಸಿ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರು ಜಹೀದ್‌ನನ್ನು ವಿಚಾರಣೆ ನಡೆಸುತ್ತಿದ್ದು, ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.