ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಭಿಕ್ಷಾಟನೆಗೆ ಮಕ್ಕಳ ಬಳಕೆ: 115 ಮಂದಿ ವಿರುದ್ಧ ಎಫ್‌ಐಆರ್‌, 99 ಮಕ್ಕಳ ರಕ್ಷಣೆ; ಹೈಕೋರ್ಟ್‌ಗೆ ಸರ್ಕಾರ ಮಾಹಿತಿ

ನಗರದ ರಸ್ತೆ ಬದಿ, ಸಿಗ್ನಲ್‌ಗಳಲ್ಲಿ ಭಿಕ್ಷೆ ಬೇಡುವುದು ಮತ್ತು ಆಟಿಕೆಗಳ ಮಾರಾಟಕ್ಕೆ ಮಕ್ಕಳನ್ನು ಬಳಕೆ ಮಾಡುವವರ ವಿರುದ್ಧ ಕರ್ನಾಟಕ ಭಿಕ್ಷಾಟನೆ ನಿರ್ಮೂಲನಾ ಕಾಯಿದೆಯಡಿಯಲ್ಲಿ 2021ರಿಂದ ಈವರೆಗೂ 115 ಮಂದಿಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, 99 ಮಕ್ಕಳನ್ನು ರಕ್ಷಣೆ ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ಗುರುವಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ಬೆಂಗಳೂರು: ನಗರದ ರಸ್ತೆ ಬದಿ, ಸಿಗ್ನಲ್‌ಗಳಲ್ಲಿ ಭಿಕ್ಷೆ ಬೇಡುವುದು ಮತ್ತು ಆಟಿಕೆಗಳ ಮಾರಾಟಕ್ಕೆ ಮಕ್ಕಳನ್ನು ಬಳಕೆ ಮಾಡುವವರ ವಿರುದ್ಧ ಕರ್ನಾಟಕ ಭಿಕ್ಷಾಟನೆ ನಿರ್ಮೂಲನಾ ಕಾಯಿದೆಯಡಿಯಲ್ಲಿ 2021ರಿಂದ ಈವರೆಗೂ 115 ಮಂದಿಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, 99 ಮಕ್ಕಳನ್ನು ರಕ್ಷಣೆ ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ಗುರುವಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ಬೆಂಗಳೂರಿನ ರಸ್ತೆಗಳಲ್ಲಿ ಮಕ್ಕಳನ್ನು ಭಿಕ್ಷಾಟನೆಯಲ್ಲಿ ತೊಡಗಿಸಲಾಗಿದೆ ಎಂದು ಆಕ್ಷೇಪಿಸಿ ಲೆಟ್ಜ್ ಕಿಟ್ ಫೌಂಡೇಷನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು. ಸರ್ಕಾರದ ಪರವಾಗಿ ಡಿಎಸ್‌ಪಿ ಯೋಗೇಂದ್ರ ಕುಮಾರ್ ಅಫಿಡವಿಟ್‌ ಸಲ್ಲಿಸಿದ್ದಾರೆ.

ಭಿಕ್ಷಾಟನೆ ಮಾಡುತ್ತಿದ್ದ 37 ಪುರುಷರು, 74 ಮಹಿಳೆಯರು, 54 ಗಂಡು ಮಕ್ಕಳು ಹಾಗೂ 45 ಹೆಣ್ಣು ಮಕ್ಕಳು ಸೇರಿ ಒಟ್ಟು 210 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಇದರ ಜೊತೆಗೆ 115 ಎಫ್‌ಐಆರ್‌ಗಳನ್ನು ದಾಖಲಿಸಿ 82 ಪುರುಷರು ಹಾಗೂ 62 ಮಹಿಳೆಯರು ಸೇರಿ 144 ಮಂದಿಯನ್ನು ಬಂಧಿಸಲಾಗಿದೆ ಎಂದು ಅಫಿಡವಿಟ್‌ನಲ್ಲಿ ವಿವರಿಸಲಾಗಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಪುತ್ತಿಗೆ ರಮೇಶ ಅವರು “ರಕ್ಷಣೆ ಹೆಸರಿನಲ್ಲಿ ಸಣ್ಣ ಮಕ್ಕಳನ್ನು ವಶಕ್ಕೆ ಪಡೆದಿದ್ದು, ಅಂತಹ ಮಕ್ಕಳು ತನ್ನ ತಾಯಿಯಿಂದ ದೂರಾಗುವ ಸಾಧ್ಯತೆಯಿದೆ” ಎಂದು ಪೀಠಕ್ಕೆ ತಿಳಿಸಿದರು. ಇದಕ್ಕೆ ಸರ್ಕಾರದ ಪರ ವಕೀಲರು “ಮಕ್ಕಳು ತಾಯಿಯೊಂದಿಗೆ ಇರುವುದಕ್ಕೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ” ಎಂದು ವಿವರಿಸಿದರು.

ಆಗ ಪೀಠವು “ಎದೆಹಾಲು ಕುಡಿಯುವಂತಹ ಮಕ್ಕಳನ್ನು ತಾಯಿಯಿಂದ ದೂರವಾಗದಂತೆ ನೋಡಿಕೊಳ್ಳಬೇಕು. ಜೊತೆಗೆ, ಹಾಲುಣಿಸುವ ತಾಯಿ ಮತ್ತು ಮಕ್ಕಳನ್ನು ಮಕ್ಕಳ ಗೃಹಕ್ಕೆ ಸ್ಥಳಾಂತರ ಮಾಡಬೇಕು” ಎಂದು ಸರ್ಕಾರಕ್ಕೆ ನಿರ್ದೇಶನ ನೀಡಿತು.

ಇದೇ ವೇಳೆ ಬಿಬಿಎಂಪಿ ಪರ ವಕೀಲರು, ಭಿಕ್ಷುಕರ ರಕ್ಷಣೆಗಾಗಿ ಬಿಬಿಎಂಪಿಯಿಂದ ಸಂಗ್ರಹಿಸಿರುವ ಭಿಕ್ಷುಕರ ಸೆಸ್‌ನ ಬಾಕಿ ಇರುವ 55.65 ಕೋಟಿ ರೂಪಾಯಿಯನ್ನು ಕೇಂದ್ರ ಪರಿಹಾರ ಸಮಿತಿಗೆ ಮುಂದಿನ ಆರು ತಿಂಗಳಲ್ಲಿ ಮೂರು ಕಂತುಗಳಲ್ಲಿ ಪಾವತಿ ಮಾಡಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಒಪ್ಪದ ಪೀಠವು ಮುಂದಿನ ನಾಲ್ಕು ತಿಂಗಳಲ್ಲಿ ಎಲ್ಲ ಬಾಕಿ ಮೊತ್ತವನ್ನು ಕೇಂದ್ರ ಪರಿಹಾರ ಸಮಿತಿಗೆ ಪಾವತಿ ಮಾಡಬೇಕು. ಇದರಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ತಿಳಿಸಿ ಅರ್ಜಿಯ ವಿಚಾರಣೆಯನ್ನು ನಾಲ್ಕು ವಾರ ಮುಂದೂಡಿತು

Related Stories

No stories found.

Advertisement

X
Kannada Prabha
www.kannadaprabha.com