ಹಣ ಎಣಿಸಲು ಬರಲ್ಲ ಎಂದು ಪದೇ ಪದೇ ಗೇಲಿ: ಸಿಟ್ಟಿಗೆದ್ದು ಸಹೋದ್ಯೋಗಿಯ ಹತ್ಯೆ!
ಬಿಲ್ ಮಾಡುವ ವಿಚಾರವಾಗಿ ಪದೇ ಪದೇ ತನ್ನನ್ನು ಗೇಲಿ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಸಿಟ್ಟಿಗೆದ್ದ ವ್ಯಕ್ತಿಯೊಬ್ಬ ಸಹೋದ್ಯೋಗಿಯನ್ನು ಇರಿದು ಹತ್ಯೆ ಮಾಡಿರುವ ಘಟನೆಯೊಂದು ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ನಡೆದಿದೆ.
Published: 29th September 2023 01:24 PM | Last Updated: 29th September 2023 08:40 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಬಿಲ್ ಮಾಡುವ ವಿಚಾರವಾಗಿ ಪದೇ ಪದೇ ತನ್ನನ್ನು ಗೇಲಿ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಸಿಟ್ಟಿಗೆದ್ದ ವ್ಯಕ್ತಿಯೊಬ್ಬ ಸಹೋದ್ಯೋಗಿಯನ್ನು ಇರಿದು ಹತ್ಯೆ ಮಾಡಿರುವ ಘಟನೆಯೊಂದು ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ನಡೆದಿದೆ.
ಮಲ್ಲಿಕಾರ್ಜುನ್ (24) ಹತ್ಯೆಯಾಗೀಡಾದ ಯುವಕ. ಪ್ರಕರಣ ಸಂಬಂಧ ಮೃತನ ಸಹೋದ್ಯೋಗಿ ರಾಜರಥನ್ ಎಂಬಾತನನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ.
ಬಳ್ಳಾರಿಯ ಪ್ರತಿಷ್ಠಿತ ಮಾಲ್‌ವೊಂದರ ಸಿದ್ಧ ಉಡುಪು ಮಾರಾಟ ಮಳಿಗೆಯಲ್ಲಿ ಇಬ್ಬರೂ ಕೆಲಸ ಮಾಡುತ್ತಿದ್ದರು. ಮಲ್ಲಿಕಾರ್ಜುನ್ ಹಾಗೂ ಆಂಧ್ರಪ್ರದೇಶದ ರಾಜರಥನ್ ಕ್ಯಾಶಿಯರ್‌ಗಳಾಗಿ ಕೆಲಸ ಮಾಡುತ್ತಿದ್ದರು. ಬಿಲ್ ಮಾಡುವ ವಿಚಾರವಾಗಿ ತನ್ನ ಸಹೋದ್ಯೋಗಿ ರಾಜರಥನ್‌ನನ್ನು ಮಲ್ಲಿಕಾರ್ಜುನ್ ಗೇಲಿ ಮಾಡುತ್ತಿದ್ದ. ಇದಕ್ಕೆ ಆತ ಆಕ್ಷೇಪಿಸಿದರೂ ರಾಜರಥನ್ ಅಣಕಿಸುವುದನ್ನು ಬಿಟ್ಟಿರಲಿಲ್ಲ.
ಇದನ್ನೂ ಓದಿ: ಬೆಂಗಳೂರು: ನೆರೆಮನೆಯಲ್ಲಿ ಕಳ್ಳತನ ಮಾಡುತ್ತಿದ್ದ ಚಾಲಾಕಿ ಬಂಧನ
ಅಂತೆಯೇ ಮಂಗಳವಾರವೂ ಕೂಡ ಬಿಲ್ ಮಾಡುವಾಗ ನಿನಗೆ ಸರಿಯಾಗಿ ಹಣ ಎಣಿಸಲು ಬರುವುದಿಲ್ಲ. ಬ್ಯಾಂಕ್‌ಗೆ ಹಣ ಜಮೆ ಮಾಡೋದಕ್ಕೂ ಬರುವುದಿಲ್ಲ ಎಂದು ರಾಜರಥನ್‌ಗೆ ಮಲ್ಲಿಕಾರ್ಜುನ್ ಛೇಡಿಸಿದ್ದಾನೆ. ಈ ಮಾತಿಗೆ ರಾಜರಥನ್ ಆಕ್ಷೇಪಿಸಿದಾಗ ಇಬ್ಬರ ನಡುವೆ ಜಗಳ ಶುರುವಾಗಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಇಬ್ಬರು ಕೈ ಕೈ ಮಿಲಾಯಿಸಿದ್ದಾರೆ. ಈ ವೇಳೆ ತಳ್ಳಾಡಿಕೊಂಡು ಟೈಲರ್ ಕೊಠಡಿಗೆ ಹೋಗಿದ್ದಾರೆ. ಈ ವೇಳೆ ಬಟ್ಟೆ ಕತ್ತರಿಸುತ್ತಿದ್ದ ಕತ್ತರಿ ತೆಗೆದುಕೊಂಡು ರಾಜರಥನ್ ಮಲ್ಲಿಕಾರ್ಜುನ ಅವರ ಎದೆಗೆ ಚುಚ್ಚಿದ್ದಾನೆ.
ಕೂಡಲೇ ಗಾಯಾಳುವನ್ನು ಮಳಿಗೆ ಕೆಲಸಗಾರರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೆ ಆತ ಮೃತಪಟ್ಟಿದ್ದಾನೆ. ಈ ಘಟನೆ ಮಾಹಿತಿ ಪಡೆದ ಸ್ಥಳಕ್ಕೆ ತೆರಳಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.