ಬೆಂಗಳೂರು: ಯುವಜನರಿಗೆ ಭಾರತದ ಬಾಹ್ಯಾಕಾಶದ ಬಗ್ಗೆ ಮಾಹಿತಿ ನೀಡಲು ಮತ್ತು ಅವರಲ್ಲಿ ಆಸಕ್ತಿ ಮೂಡಿಸಲು, ಅವರಿಗೆ ಪ್ರೇರಣೆ ನೀಡುವ ಸಲುವಾಗಿ ಜವಾಹರಲಾಲ್ ನೆಹರು ತಾರಾಲಯ (ಜೆಎನ್‌ಪಿ) ತನ್ನ ಸಭಾಂಗಣದಲ್ಲಿ ಇಂದಿನಿಂದ (ಭಾನುವಾರ) ಸ್ಕೈ ಶೋ ಸಾಕ್ಷ್ಯ ಚಿತ್ರ ಪ್ರದರ್ಶನವನ್ನು ಆರಂಭಿಸಿದೆ.
ಸಾಕ್ಷ್ಯ ಚಿತ್ರ ಪ್ರದರ್ಶನಕ್ಕೆ ಭಾರತೀಯ ಅಂತರಿಕ್ಷ ಯಾತ್ರೆ ಎಂದು ಶೀರ್ಷಿಕೆ ನೀಡಲಾಗಿದ್ದು, ಶನಿವಾರ ಇದರ ಮೊದಲ ಪ್ರದರ್ಶನಕ್ಕೆ ಇಸ್ರೋದ ಮಾಜಿ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್ ಹಾಗೂ ಇಸ್ರೋ ಗಗನ್ ಯಾನ್ ಯೋಜನಾ ನಿರ್ದೇಶಕ ಆರ್.ಹಟನ್ ಅವರು ಚಾಲನೆ ನೀಡಿದರು.
ಭಾರತೀಯ ವಿಜ್ಞಾನಿಗಳ ಅಂತರಿಕ್ಷದ ಆರಂಭಿಕ ಹೆಜ್ಜೆ, ಮೈಲುಗಲ್ಲಾದ ಪಿಎಸ್ಎಲ್'ವಿ, ಜಿಎಸ್ಎಲ್'ವಿಗಳ ಉಡಾವಣೆಗಳನ್ನು ಆ್ಯನಿಮೇಷನ್, ಅತ್ಯಾಧುನಿಕ ವಿಡಿಯೋಗ್ರಫಿ ತಂತ್ರಜ್ಞಾನದ ಮೂಲಕ ಈ ಸ್ಕೈ ಶೋ ಮೂಡಿಬಂದಿದೆ.
ಹ್ಯೂಮನ್ ಸ್ಪೇಸ್ ಫ್ಲೈಟ್ ಸೆಂಟರ್ (HSFC) ನಲ್ಲಿ ನಾಲ್ಕು ಗಗನಯಾತ್ರಿಗಳ ತರಬೇತಿ, HLVM3 ಉಡಾವಣಾ ವಾಹನದ ಅಭಿವೃದ್ಧಿ, ಉಡಾವಣೆಗೆ ನಿಖರವಾದ ಸಿದ್ಧತೆ ಮತ್ತು ಭಾರತೀಯ ಗಗನಯಾತ್ರಿಗಳು ಸುರಕ್ಷಿತವಾಗಿ ಭೂಮಿಗೆ ಮರಳುವ ವಿಧಾನವನ್ನು ವೀಡಿಯೊದಲ್ಲಿ ತೋರಿಸಲಾಗಿದೆ. ಇದು ವಯಸ್ಕರಿಗೆ ಮತ್ತು ಮಕ್ಕಳಿಗೆ ಬಾಹ್ಯಾಕಾಶದ ಕುರಿತು ಆಸಕ್ತಿಗಳನ್ನು ಮೂಡಿಸಲಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಎಎಸ್ ಕಿರಣ್ ಕುಮಾರ್ ಅವರು, 1960ರಲ್ಲಿನ ಸೌಂಡಿಂಗ್ ರಾಕೆಟ್ ನಿಂದ ಇಂದಿನ ಗಗನಯಾನದವರೆಗೆ ಮಕ್ಕಳಿಗೂ ಅರ್ಥವಾಗುವಂತೆ ಸರಳವಾಗಿ ರೂಪಿಸಲಾಗಿದೆ. ಚಂದ್ರಯಾನ-3ರ ಬಳಿಕ ವಿಶ್ವದಾದಂತ ಹೆಚ್ಚಿನ ಯುವಕರಲ್ಲಿ ವಿಜ್ಞಾನ, ಬಾಹ್ಯಾಕಾಶದ ಬಗ್ಗೆ ಆಸಕ್ತಿ ಹೆಚ್ಚಾಗಿದೆ. ಅದಕ್ಕೆ ಇಂತಹ ಶೋಗಳು ಹೆಚ್ಚು ನೀರೆರೆಯಲಿವೆ. ಸ್ಕೈ ಶೋ ಕೇವಲ ಜವಾಹರಲಾಲ್ ನೆಹರು ತಾರಾಲಯ (ಜೆಎನ್‌ಪಿ)ಗೆ ಮಾತ್ರ ಸೀಮಿತವಾಗದೆ ಹೆಚ್ಚಿನ ನಗರಗಳು ಮತ್ತು ರಾಜ್ಯಗಳನ್ನು ತಲುಪಬೇಕು ಎಂದು ಹೇಳಿದರು.
Advertisement