ಡ್ರಗ್ಸ್ ಕೇಸ್: ಬಂಧಿಸಲು ಬಂದ ಬೆಂಗಳೂರು ಪೊಲೀಸರನ್ನು ಅಟ್ಟಾಡಿಸಿ ಹೊಡೆದ ನೈಜೀರಿಯಾ ಪ್ರಜೆಗಳು!

ಡ್ರಗ್‌ ಪೆಡ್ಲರ್‌ ಇರುವಿಕೆ ಕುರಿತು ಪರಿಶೀಲನೆಗೆ ತೆರಳಿದ್ದ ಪೊಲೀಸರ ಮೇಲೆಯೇ ನೈಜೀರಿಯಾ ಪ್ರಜೆಗಳು ಹಲ್ಲೆ ನಡೆಸಿರುವ ಘಟನೆಯೊಂದು ಬೆಂಗಳೂರಿನಲ್ಲಿ ಗುರುವಾರ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಡ್ರಗ್‌ ಪೆಡ್ಲರ್‌ ಇರುವಿಕೆ ಕುರಿತು ಪರಿಶೀಲನೆಗೆ ತೆರಳಿದ್ದ ಪೊಲೀಸರ ಮೇಲೆಯೇ ನೈಜೀರಿಯಾ ಪ್ರಜೆಗಳು ಹಲ್ಲೆ ನಡೆಸಿರುವ ಘಟನೆಯೊಂದು ಬೆಂಗಳೂರಿನಲ್ಲಿ ಗುರುವಾರ ನಡೆದಿದೆ.

ಘಟನೆಯಲ್ಲಿ ಸಿಸಿಬಿ ಇನ್ಸ್ ಪೆಕ್ಟರ್ ಸುಬ್ರಹ್ಮಣ್ಯ ಸ್ವಾಮಿ ಹಾಗೂ ಹೆಡ್ ಕಾನ್ ಸ್ಟೇಬರ್ ರಾಜೀವ್ ಗಾಯಗೊಂಡಿದ್ದು, ಕೊಡಿಗೇಹಳ್ಳಿ ಬಳಿಯ ಖಾಸಗಿ ಆಸ್ಪತ್ರೆಯಲ್ಲಿ ಗಾಯಾಳು ಪೊಲೀಸರು ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯಲ್ಲಿ ಸಿಸಿಬಿ ಪೊಲೀಸರ ಜೀಪು ಹಾಗೂ ರಾಜಾನುಕುಂಟೆ ಠಾಣೆ ಹೊಯ್ಸಳ ವಾಹನ ಜಖಂಗೊಂಡಿದೆ.

ಮಾವಳ್ಳಿಪುರದಲ್ಲಿ ನೆಲೆಸಿದ್ದ ನೈಜೀರಿಯಾ ದೇಶದ ಡ್ರಗ್ಸ್ ಪೆಡ್ಲರ್ ಬಂಧನಕ್ಕೆ ಸಿಸಿಬಿ ಪೊಲೀಸರು ಮುಂದಾಗಿದ್ದಾರೆ. ಆ ವೇಳೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಿಗಳು, ತಮ್ಮ ಸ್ನೇಹಿತರ ಜೊತೆ ಪೊಲೀಸರ ಮೇಲೆ ದಾದಾಗಿರಿ ನಡೆಸಿ ಪರಾರಿಯಾಗಿದ್ದಾರೆಂದು ಅಧಿಕಾರಿಗಳು ಹೇಳಿದ್ದಾರೆ.

ಹೆಸರಘಟ್ಟದ ಮಾವಳ್ಳಿಪುರದಲ್ಲಿ ರಾತ್ರಿ 11.15 ರಿಂದ 11.30ರ ನಡುವೆ ದಾಳಿ ನಡೆದಿದೆ. ಆರು ನೈಜೀರಿಯನ್ನರ ವಿರುದ್ಧ ದೂರು ದಾಖಲಾಗಿದೆ.

ಡ್ರಗ್ಸ್ ಪ್ರಕರಣ ಸಂಬಂಧ ಇತ್ತೀಚೆಗೆ ನೈಜೀರಿಯನ್ ಪ್ರಜೆಯೊಬ್ಬನನ್ನು ಬಂಧನಕ್ಕೊಳಪಡಿಸಲಾಗಿತ್ತು. ಈತನಿಂದ 4 ಕೆಜಿ ಎಂಡಿಎಂಎಯನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ವಿಚಾರಣೆ ವೇಳೆ ಈತನ ಸಹಚರರಿಗಾಗಿ ಹುಡುಕಾಟ ನಡೆಸಿದ ಅಧಿಕಾರಿಗಳಿಗೆ ಮಾವಳ್ಳಿಪುರದಲ್ಲಿ ಡ್ರಗ್ ದಂಧೆಕೋರರು ಇರುವ ಬಗ್ಗೆ ಮಾಹಿತಿ ಸಿಕ್ಕಿದೆ.

ಸಂಗ್ರಹ ಚಿತ್ರ
ಬೆಂಗಳೂರಿನಲ್ಲಿ 21 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ, ನೈಜೀರಿಯಾ ಪ್ರಜೆ ಬಂಧನ

ಇದರಂತೆ ಸುಬ್ರಹ್ಮಣ್ಯ ಸ್ವಾಮಿ ಹಾಗೂ ರಾಜೀವ್ ಸಾಮಾನ್ಯ ಉಡುಪಿನಲ್ಲಿ ಸಿಂಗನಾಯಕನಹಳ್ಳಿಗೆ ಹೋದಾಗ ಅಲ್ಲಿ ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿ ಡ್ರಗ್ ದಂಧೆಕೋರನೊಬ್ಬ ಮದ್ಯಪಾನ ಮಾಡುತ್ತಿರುವುದು ಕಂಡುಬಂದಿದೆ. ಬಳಿಕ ಆತನನ್ನು ಹಿಂಬಾಲಿಸಿದ್ದಾರೆ. ಆತ ಸ್ಕೂಟರ್‌ನಲ್ಲಿ ಮಾವಳ್ಳಿಪುರದ ಮನೆಗೆ ಹೋಗಿದ್ದಾನೆ. ಬಳಿಕ ಸ್ವಾಮಿ ಮತ್ತು ರಾಜೀವ್ ಮನೆಯ ಮೇಲೆ ದಾಳಿ ಮಾಡಿದ್ದು ಈ ವೇಳೆ ಇಬ್ಬರು ಡ್ರಗ್ಸ್ ಪೆಡ್ಲರ್ ಗಳು ಕಂಡು ಬಂದಿದ್ದಾರೆ. ಅವರನ್ನು ಬಂಧಿಸಲು ಮುಂದಾದಾಗ, ಆರೋಪಿಗಳು ಹಲ್ಲೆ ನಡೆಸಿದ್ದಾರೆ. ಕೂಡಲೇ ಪೊಲೀಸರು ಬ್ಯಾಕ್ಅಪ್ಗಾಗಿ 112ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಪೊಲೀಸರ ಗಸ್ತು ವಾಹನ ಸ್ಥಳಕ್ಕೆ ಬಂದಾಗ, ಆ ವಾಹನದ ಮೇಲೂ ದಾಳಿ ನಡೆಸಿ, ಹಾನಿ ಮಾಡಿ, ಪರಾರಿಯಾಗಿದ್ದಾರೆ.

ಗಾಯಗೊಂಡಿರುವ ಪೊಲೀಸರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆರೋಪಿಗಳಿಗೆ ಹುಡುಕಾಟ ಮುಂದುವರೆದಿದೆ. ಎರಡು ಪೊಲೀಸ್ ವಾಹನಗಳಿಗೆ ಹಾನಿಯಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.

ಆರೋಪಿಗಳ ವಿರುದ್ಧ ಐಪಿಸಿಯ ಇತರ ಸೆಕ್ಷನ್‌ಗಳ ಜೊತೆಗೆ ಕೊಲೆ ಯತ್ನ (ಐಪಿಸಿ 307) ಪ್ರಕರಣವನ್ನು ದಾಖಲಿಸಲಾಗಿದ ಎಂದು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com