ಬೆಂಗಳೂರು: ಮಾನವ ಹಕ್ಕುಗಳ ಆಯೋಗಕ್ಕೆ ದೂರು ಕೊಟ್ಟಿರುವ ನೆಪದಲ್ಲಿ ಪೊಲೀಸರಿಗೆ ಬ್ಲ್ಯಾಕ್‌ಮೇಲ್ ಮಾಡಿ ಸುಲಿಗೆ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಬಂಧಿತ ಆರೋಪಿಯನ್ನು ಸೈಯದ್ ಸರ್ಫರಾಜ್ (35) ಎಂದು ಗುರುತಿಸಲಾಗಿದೆ. ಖಾಸಗಿ ಕಂಪನಿಯಲ್ಲಿ ವಾಹನ ಜಪ್ತಿ ವಿಭಾಗದಲ್ಲಿ ಕೆಲಸ ಮಾಡಿಕೊಂಡಿದ್ದ ಭಾರತಿ ನಗರ ನಿವಾಸಿ ಸೈಯದ್‌ಗೆ ಪೊಲೀಸರ ಪರಿಚಯವಿತ್ತು.
ಇದೇ ನೆಪದಲ್ಲಿ ಠಾಣೆಗೆ ಭೇಟಿ ನೀಡಿ, ಲಾಕ್‌ಅಪ್‌ನಲ್ಲಿದ್ದ ಆರೋಪಿಗಳನ್ನು ಮಾತನಾಡಿಸಿ ಪರಿಚಯ ಮಾಡಿಕೊಂಡು, ಅವರ ಪ್ರಕರಣದ ಬಗ್ಗೆ ತಿಳಿದು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಕೊಡುತ್ತಿದ್ದ. ಬಳಿಕ ದೂರು ವಾಪಸ್ ಪಡೆಯಲು ಪೊಲೀಸರಿಂದ ಹಣ ವಸೂಲು ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆ ಠಾಣಾ ವ್ಯಾಪ್ತಿಯ ಹೋಟೆಲ್‌ವೊಂದರಲ್ಲಿ ಟೀ ಕುಡಿದು ಹಣ ಪಾವತಿಸದೆ ದಾಂಧಲೆ ಮಾಡಿದ್ದ ವ್ಯಕ್ತಿಯನ್ನು ರಾತ್ರಿ 2.30ಕ್ಕೆ ಠಾಣೆಗೆ ಕರೆತರಲಾಯಿತು. ಈ ವಿಚಾರ ತಿಳಿದ ಸೈಯದ್, ಮಾನವ ಹಕ್ಕು ಆಯೋಗಕ್ಕೆ ದೂರು ನೀಡಿದ್ದಾನೆ. ಅದೇ ದಿನ ಆಯೋಗದ ಸದಸ್ಯರು ಠಾಣೆಗೆ ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸದಿರುವುದಕ್ಕೆ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಆರೋಪಿಯನ್ನು ಠಾಣೆಗೆ ಕರೆತಂದ ಸಮಯ ಹಾಗೂ ಸಿಸಿಟಿವಿ ಕ್ಯಾಮೆರಾದ ದೃಶ್ಯಗಳನ್ನು ಆಯೋಗಕ್ಕೆ ನೀಡಲಾಯಿತು. ಡಿವೈಎಸ್ಪಿ ಠಾಣಾಧಿಕಾರಿಯ ಹೇಳಿಕೆಗಳನ್ನು ಪಡೆದಿದ್ದರು. ಬಳಿಕ ಬಂಧನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದಾಗ ಎಲ್ಲವೂ ಕಾನೂನುಬದ್ಧವಾಗಿದ್ದವು, ಘಟನೆ ಬಳಿಕ ಆರೋಪಿಯ ಹಿನ್ನೆಲೆ ಪರಿಶೀಲಿಸಿದಾಗ ಈತ ಹೆಣ್ಣೂರು, ಆರ್‌ಟಿ ನಗರ, ಬಾಣಸವಾಡಿ, ರಾಮಮೂರ್ತಿ ನಗರ, ಶಿವಾಜಿನಗರ ಮತ್ತು ಪುಲಕೇಶಿನಗರ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿರುವುದು, ಅಲ್ಲಿ ನಡೆದ ಘಟನೆಗಳ ಹಿಂದೆ ಈತನ ಕೈವಾಡ ಇರುವುದು ಪತ್ತೆಯಾಗಿತ್ತು.
ಈ ನಡುವೆ ಆರೋಪಿ ಹಣ ನೀಡಿದರೆ ಆಯೋಗಕ್ಕೆ ನೀಡಿರುವ ದೂರು ವಾಪಸ್ ಪಡೆಯುವುದಾಗಿ ಬ್ಲ್ಯಾಕ್ ಮೇಲ್ ಮಾಡತೊಡಗಿದ. ರೂ.50 ಸಾವಿರಕ್ಕೆ ಬೇಡಿಕೆ ಇರಿಸಿದ. ಜುಲೈ 29ರಂದು ರೂ.25 ಸಾವಿರ ಪಡೆಯುವ ವೇಳೆ ಆತನನ್ನು ಬಂಧಿಸಲು ಮುಂದಾದ ವೇಳೆ ಪರಾರಿಯಾಗಿದ್ದ. ಬಳಿಕ ಆತನನ್ನು ಪತ್ತೆಹಚ್ಚಿ ಬಂಧಿಸಲಾಯಿತು.
ಇದೆಲ್ಲಾ ವಿಡಿಯೊ ಚಿತ್ರೀಕರಣ ಮಾಡಿಕೊಳ್ಳಲಾಗಿದೆ. ಆರೋಪಿ ಇದೇ ರೀತಿ ಆರ್.ಟಿ. ನಗರ ಹಾಗೂ ಭಾರತಿ ನಗರದಲ್ಲೂ ಪೊಲೀಸರಿಗೆ ಬ್ಲ್ಯಾಕ್ ಮೇಲ್ ಮಾಡಿದ್ದ ಎಂದು ಡಿಸಿಪಿ (ಪೂರ್ವ) ಡಿ ದೇವರಾಜು ಮಾಹಿತಿ ನೀಡಿದ್ದಾರೆ.
Advertisement