ಪೌರ ಕಾರ್ಮಿಕರಿಗೆ ಹಸಿರು ಬಣ್ಣ ಬದಲು ನೀಲಿ ಬಣ್ಣದ ಸಮವಸ್ತ್ರ ನೀಡಲು BBMP ಮುಂದು!
ಬೆಂಗಳೂರು: ಬಿಬಿಎಂಪಿ ಪೌರ ಕಾರ್ಮಿಕರ ಡ್ರೆಸ್ ಕೋಡ್ ಬದಲಾಗಿದ್ದು, ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ವೇಳೆ ಪೌರ ಕಾರ್ಮಿಕರು ಹಸಿರು ಹಾಗೂ ಕಿತ್ತಳೆ ಬಣ್ಣದ ಬದಲಿಗೆ ನೀಲಿ ಬಣ್ಣದ ಸಮವಸ್ತ್ರದೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.
ಈ ಹಿಂದೆ ಸ್ವತಃ ಬಿಬಿಎಂಪಿ ಪೌರಕಾರ್ಮಿಕರೇ ತಮ್ಮ ಸಮವಸ್ತ್ರ ಬದಲಾವಣೆ ಮಾಡಬೇಕೆಂದು ಬೇಡಿಕೆ ಇಟ್ಟಿದ್ದರು. ಅದರಂತೆಯೇ ಈಗ ಹೊಸ ಸಮವಸ್ತ್ರ ಜಾರಿಗೆ ಬಂದಿದ್ದು, ನೀಲಿ ಬಣ್ಣದ ಸಮವಸ್ತ್ರವು ಸಿದ್ಧಗೊಂಡಿದೆ.
ಪೌರಕಾರ್ಮಿಕರೊಂದಿಗೆ ಚರ್ಚಿಸಿ ಏಕರೂಪದ ಬಣ್ಣ ಮತ್ತು ವಿನ್ಯಾಸದ ಸಮವಸ್ತ್ರವನ್ನು ಬಿಬಿಎಂಪಿ ಸಿದ್ಧಪಡಿಸಿದೆ. ಈ ಸಮವಸ್ತ್ರ ಖರೀದಿಗೆ ಪಾಲಿಕೆಯು 7.3 ಕೋಟಿ ಕಾಯ್ದಿರಿಸಿತ್ತು.
ಮಹಿಳಾ ಪೌರಕಾರ್ಮಿಕರಿಗೆ ರವಿಕೆ, ಕ್ಯಾಪ್, ಸ್ವೆಟರ್, ಏಪ್ರನ್ ಸಹಿತ ಎರಡು ಸೀರೆ ಖರೀದಿಗೆ ಬಿಬಿಎಂಪಿ 4,811 ರೂ.ಗಳನ್ನು ನಿಗದಿಪಡಿಸಿದ್ದು, ಪುರುಷ ಪೌರಕಾರ್ಮಿಕರಿಗೆ ಟ್ರ್ಯಾಕ್ ಪ್ಯಾಂಟ್, ಟೀ ಶರ್ಟ್ ಮತ್ತು ಕ್ಯಾಪ್ ನೀಡಲಾಗಿದ್ದು, 3,578 ರೂ ನಿಗದಿುಡಿಸಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
ಈಗಾಗಲೇ 6 ಸಾವಿರ ಸಮವಸ್ತ್ರಗಳು ಬಂದಿವೆ. ನವೆಂಬರ್ 1 ರೊಳಗೆ (ಕನ್ನಡ ರಾಜ್ಯೋತ್ಸವ) ಉಳಿದ ಸಮವಸ್ತ್ರಗಳು ಪಾಲಿಕೆ ಕೈಸೇರಲಿವೆ ಎಂದು ತಿಳಿಸಿದರು.

