ಮುನಿರಾಬಾದ್ (ಹೊಸಪೇಟೆ): ತುಂಗಭದ್ರಾ ಡ್ಯಾಮ್ ನ ಕ್ರಸ್ಟ್ ಗೇಟ್ ನ ಚೈನ್ ಕತ್ತರಿಸಿ ನೀರು ಹರಿದು ಪೋಲಾಗಿರುವುದರಿಂದ ರಾಜ್ಯ ಸರ್ಕಾರ ತಂಗಭದ್ರಾ ಜಲಾಶಯಕ್ಕೆ ಸಮಾನಾಂತರ ಜಲಾಶಯ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಬೇಕೆಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರು ಸೋಮವಾರ ಆಗ್ರಹಿಸಿದ್ದಾರೆ.
ಬೊಮ್ಮಾಯಿಯವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಅವರೊಂದಿಗೆ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ವಿಸ್ತೃತ ಯೋಜನಾ ವರದಿಯನ್ನು ಈಗಾಗಲೇ ಸಿದ್ಧಪಡಿಸಿ ಆಂಧ್ರಪ್ರದೇಶ ಸರ್ಕಾರದೊಂದಿಗೆ ಹಂಚಿಕೊಳ್ಳಲಾಗಿದೆ. ಈ ಹಿಂದೆ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈಎಸ್ ಜಗನ್ಮೋಹನ್ ರೆಡ್ಡಿ ಅವರೊಂದಿಗೆ ಚರ್ಚೆ ನಡೆಸಲಾಗಿದ್ದು, ಆ ರಾಜ್ಯದಿಂದ ಅಧ್ಯಯನ ತಂಡವನ್ನು ಕಳುಹಿಸಲಾಗಿದೆ. ಈಗಾಗಲೇ ತಾಂತ್ರಿಕ ಅನುಮೋದನೆಯೂ ಸಿಕ್ಕಿದ್ದು, ರಾಜಕೀಯ ನಿರ್ಧಾರ ಮಾತ್ರ ಬಾಕಿ ಇದೆ. ಆದರೆ, ಸಿದ್ದರಾಮಯ್ಯ ಸರಕಾರ ಕಳೆದ ಒಂದೂವರೆ ವರ್ಷಗಳಿಂದ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಟೀಕಿಸಿದರು.
ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ 28 ಟಿಎಂಸಿ ಅಡಿ ನೀರು ಉಳಿಸುವ ಸಮಾನಾಂತರ ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗಲು ಸಿದ್ದರಾಮಯ್ಯ ಅವರು ತಮ್ಮ ಸಂಪುಟ ಸಹೋದ್ಯೋಗಿಗಳೊಂದಿಗೆ ಮಾತನಾಡಬೇಕು ಎಂದು ಹೇಳಿದರು.
ತುಂಗಭದ್ರಾ ಜಲಾಶಯವು ಕಲ್ಯಾಣ-ಕರ್ನಾಟಕದ ಜೀವನಾಡಿಯಾಗಿದ್ದು, ಕರ್ನಾಟಕದ ಒಟ್ಟು ಕೃಷಿ ಆದಾಯದ ಶೇಕಡಾ 40 ಕ್ಕಿಂತ ಹೆಚ್ಚು ಕೊಡುಗೆ ನೀಡುತ್ತಿದೆಯ ಹೂಳು ಶೇಖರಣೆಯಿಂದಾಗಿ ಅಣೆಕಟ್ಟು ಸವಾಲುಗಳನ್ನು ಎದುರಿಸುತ್ತಿದೆ, ಇದರಿಂದಾಗಿ ಅಂದಾಜು 30 ಟಿಎಂಸಿಎಫ್‌ಟಿ ನೀರಿನ ಸಂಗ್ರಹ ನಷ್ಟವಾಗುತ್ತಿದೆ. ಅಣೆಕಟ್ಟೆಯಲ್ಲಿ ಕ್ರೆಸ್ಟ್ ಗೇಟ್ ನಂ.19 ಬೀಳುತ್ತಿದ್ದು, ಇದನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಅಧಿಕಾರಿಗಳು ಗೇಟ್ ನಿರ್ಮಾಣ ಮಾಡಬಹುದು., ಆದರೆ ಸಮಸ್ಯೆ ದೂರಾಗಿಸುವುದು ಅಷ್ಟು ಸುಲಭವಲ್ಲ. ಇವತ್ತಿನ ಘಟನೆ ಮುಂದಿನ ಘಟನೆಗಳಿಗೆ ಆತಂಕ ಹುಟ್ಟಿಸುವ ಘಟನೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಅಧಿಕಾರಿಗಳು ಗೇಟನ್ನು ಪ್ಯಾಬ್ರಿಕೆಟ್ ಮಾಡುತ್ತೇವೆ ಅಂತ ಹೇಳುತ್ತಾರೆ. ಅಷ್ಡೇ ಅಲ್ಲ. ನೀರು ಶಕ್ತಿ ಮೀರಿ ಬರುತ್ತದೆ.
ಓವರ್ ಲೋಡ್ ಅನಾಹುತಕ್ಕೆ ಕಾರಣವಾಗಿದೆ. ಇದರಲ್ಲಿ ಎರಡು ಸಮಸ್ಯೆ ಇದೆ. ಮುಂಗಾರು ಪೂರ್ವ ನಿರ್ವಹಣೆ ಸಮಸ್ಯೆಯಾಗಿದೆ. ಇದು ವರ್ಟಿಕಲ್ ಗೇಟ್, ಈ ಗೇಟನ್ನು ಆಪರೇಟ್ ಮಾಡುವಾಗ ಆಗುವ ಲೀಕೇಜ್ ಎಲಿಮೆಂಟ್ ಬಹಳ ಮುಖ್ಯ. ಒಂದು ಬೇರಿಂಗ್ ಹೋದರೂ ಕೂಡ ಗೇಟ್ ಕಿತ್ತು ಹೋಗುತ್ತದೆ. ಎಲ್ಲಿ ಗೇಟಿಗೆ ಸಂಪರ್ಕ ಕಲ್ಪಿಸಬೇಕಿತ್ತೊ ಅದೇ ಲಿಂಕ್ ಕಿತ್ತು ಹೋಗಿದೆ. ಇದು ನಿಷ್ಕ್ರೀಯ ಲಿಂಕ್ ಇದೆ. ಹೀಗಾಗಿ ಅದು ಕಿತ್ತು ಹೋಗಿದೆ. ಇದಕ್ಕೆ ಯಾರೂ ಕಾರಣ ಅಲ್ಲ ಅಂತ ಹೇಳುವುದನ್ನು ನಾನು ಒಪ್ಪುವುದಿಲ್ಲ. ಅಧಿಕಾರಿಗಳು, ಸರಕಾರವೂ ಕಾರಣ ಅಲ್ಲ ಆಂದರೆ ಹೇಗೆ, ಇಷ್ಟು ದಿನ ಆಗದಿರುವುದು ಈಗ ಏಕೆ ಆಯಿತು ಎಂದು ಪ್ರಶ್ನಿಸಿದರು.
ನೀರು ಎಷ್ಟು ಬಿಡಬೇಕು, ಎಷ್ಟು ಹಿಡಿದಿಟ್ಟುಕೊಳ್ಳಬೇಕೊ ಅದನ್ನು ನೋಡಿಕೊಳ್ಳಲು ನೀರು ನಿರ್ವಹಣೆ ತುಂಗಭದ್ರ ಬೊರ್ಡ್ ಇದೆ. ಅದು ಸರಿಯಾಗಿ ನೋಡಿಕೊಳ್ಳಬೇಕು.0-16 ಆಂದ್ರದ್ದು, ಆ ನಂತರದ್ದು ಕರ್ನಾಟಕದ್ದು, ಈ ರೀತಿ ಡ್ಯಾಮ್ ನ ಗೇಟುಗಳನ್ನು ಹಂಚಿಕೊಂಡಿದ್ದಾರೆ. ಇಬ್ಬರು ಮುಖ್ಯ ಎಂಜನೀಯರ್ ಇದ್ದಾರೆ. 19ನೇ ಗೇಟು ಕರ್ನಾಟಕದ ವ್ಯಾಪ್ತಿಗೆ ಬರುತ್ತದೆ. ಕರ್ನಾಟಕದ ಎಂಜನೀಯರ್ ಗಳ ಜವಾಬ್ದಾರಿ ಹೆಚ್ಚಿದೆ. ಇದನ್ನು ಎಂಜನಿಯರು ಸರಿಯಾಗಿ ನಿರ್ವಹಣೆ ಮಾಡಿಲ್ಲ. ಎಲ್ಲ ಗೇಟುಗಳನ್ನು ಪರಿಶೀಲನೆ ಮಾಡಬೇಕಿದೆ. ಈಗ ನೀರಿನ ಪ್ರಮಾಣ ಕಡಿಮೆ ಇದೆ. ನೀರು ಹೆಚ್ಚಾದಾಗ ಮತ್ತೆ ಏನು ಸಮಸ್ಯೆಯಾಗುತ್ತದೊ ಗೊತ್ತಿಲ್ಲ. ನೀರಿನ ನಿರ್ವಹಣೆಗೆ ಹೊಸ ಮಾನದಂಡ ನಿರ್ಧರಿಸಬೇಕು. ಈ ವರ್ಟಿಕಲ್ ಗೇಟ್ ಗೆ ಬೇಕಾದ ಸಾಧನಗಳ ಬಗ್ಗೆ ಪರಿಶೀಲನೆ ಮಾಡಿ ತನಿಖೆ ಮಾಡಬೇಕು ಆಗ ಎಲ್ಲಿ ವೈಫಲ್ಯ ಆಗಿದೆ ಎನ್ನುವುದು ಗೊತ್ತಾಗುತ್ತದೆ ಎಂದರು.
ಸರ್ಕಾರದವರು 3-4 ದಿನಗಳಲ್ಲಿ ಸರಿಪಡಿಸುವುದಾಗಿ ಹೇಳುತ್ತಾರೆ. ಅಖಂಡ ಗೇಟ್ ಇರುವಾಗ ಈ ಸಮಸ್ಯೆ ಆಗಿದೆ. ಫ್ಯಾಬ್ರಿಕೇಟ್ ಹಾಕಿದರೆ ಏನಾಗುತ್ತದೊ ಗೊತ್ತಿಲ್ಲ. ಎಚ್ಚರಿಕೆಯಿಂದ ಮಾಡುವಂತೆ ಸಲಹೆ ನೀಡಿದ್ದೇವೆ. ನೀರಿನ ನಿರ್ವಹಣೆಯನ್ನು ಸರಿಯಾಗಿ ಮಾಡದಿರುವ ಬಗ್ಗೆ ಸರಿಯಾದ ತನಿಖೆಯಾಗಬೇಕು. ಡ್ಯಾಂ ಸುರಕ್ಷತಾ ನಿರ್ವಹಣಾ ಸಮಿತಿ ನೀಡಿರುವ ಸಲಹೆಗಳನ್ನು ಸರಿಯಾಗಿ ಪಾಲಿಸಿಲ್ಲ. ಡ್ಯಾಮ್‌ಗಳ ನಿರ್ವಹಣೆಗೆ ವಿಶ್ವ ಬ್ಯಾಂಕ್ ಹಣ ಕೊಡುತ್ತದೆ. ಆ ಹಣವನ್ನು ಸಂಪೂರ್ಣ ಬಳಕೆ ಮಾಡಿ, ಎಲ್ಲ ಗೇಟ್‌ಗಳನ್ನು ಪರಿಶೀಲನೆ ಮಾಡಿ ಯಾವುದು ಬದಲಾವಣೆ ಮಾಡಬೇಕೊ ಅದನ್ನು ಬದಲಾಯಿಸಬೇಕು. ರಾಜ್ಯದ ಬಹುತೇಕ ಆಣೆಕಟ್ಟೆಗಳು ಐವತ್ತು ವರ್ಷ ಪೂರೈಸಿವೆ. ಬಹಳಷ್ಟು ಡ್ಯಾಮ್‌ಗಳಿಗೆ ಸ್ಟ್ರಾಪ್‌ಪ್ಲಗ್ ಗೇಟ್‌ಗಳು ಇಲ್ಲ. ಸ್ಟಾಪ್ ಪ್ಲಗ್ ಗೇಟ್‌ಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕು. ಅಲ್ಲದೇ ಡ್ಯಾಮ್‌ಗಳ ಸುರಕ್ಷತೆಯ ಒಂದು ವಿಶೇಷ ತಜ್ಞರ ತಂಡ ರಚನೆ ಮಾಡಿ, ಕೇಂದ್ರದ ಮಾದರಿಯಲ್ಲಿ ಈ ತಂಡ ಡ್ಯಾಮ್‌ಗಳ ಸುರಕ್ಷತೆಯ ಬಗ್ಗೆ ಮಾಹಿತಿ ನೀಡುವ ಕೆಲಸ ಮಾಡಬೇಕು. ಈ ಕೆಲಸವನು ಎಲ್ಲರೂ ಸೇರಿ ಮಾಡೋಣ ಎಂದರು.
ಇದೇ ವೇಳೆ ಡಿಕೆ.ಶಿವಕುಮಾರ್ ವಿರುದ್ಧ ಬೊಮ್ಮಾಯಿಯವರು ಕಿಡಿಕಾರಿದರು. ಡಿಸಿಎಂ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು ಈ ಘಟನೆಗೆ ಯಾರೂ ಹೊಣೆಯಲ್ಲ ಎಂದು ಹೇಳಿರುವುದನ್ನು ನಾನು ಒಪ್ಪುವುದಿಲ್ಲ. ಇದರಲ್ಲಿ ಲೋಪ ಇದೆ. ಅದು ಯಾರಿಂದ ಆಗಿದೆ ಎನ್ನುವುದನ್ನು ತಿಳಿಯಲು ತನಿಖೆ ಮಾಡಬೇಕು. ಆಗ ಮಾತ್ರ ಸರ್ಕಾರದ ಮೇಲೆ ನಂಬಿಕೆ ಬರುತ್ತದೆ. ನಮಗೆ 115 ಟಿಎಂಸಿ ನೀರು ಬೇಕು. ಈಗಾಗಲೇ 20 ಟಿಎಂಸಿ ನೀರು ಹರಿದು ಹೋಗಿದೆ. ಇನ್ನೂ ಮಳೆಯಿಂದ ಸುಮಾರು 40 ಟಿಎಂಸಿ ನೀರು ಬರುವ ನಿರೀಕ್ಷೆ ಇದೆ. ಆದರೆ ಅದು ಪ್ರಕೃತಿ ಮೇಲೆ ನಿರ್ಧಾರ ಆಗುತ್ತದೆ. ಈಗಿರುವ ಪರಿಸ್ಥಿತಿಯಲ್ಲಿ ಎರಡನೇ ಬೆಳೆ ಬೆಳೆಯುವುದು ಕಷ್ಟವಾಗಲಿದ್ದು ರಾಜ್ಯ ಸರ್ಕಾರ ಕೂಡಲೇ ರೈತರಿಗೆ ಪ್ರತಿ ಹೆಕ್ಟೇರ್‌ಗೆ 50 ಸಾವಿರ ರೂ. ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
Advertisement