ಬೆಂಗಳೂರು: ಬೆಂಗಳೂರಿನ ಲಾಲ್‌ಬಾಗ್ ನ ಸಿದ್ದಯ್ಯ ರಸ್ತೆಯಲ್ಲಿರುವ ಪ್ರತಿಷ್ಠಿತ ಊರ್ವಶಿ ಚಿತ್ರಮಂದಿರದ ಶೌಚಗೃಹದಲ್ಲಿ ಯುವತಿಯ ವಿಡಿಯೋ ಸೆರೆ ಹಿಡಿದಿದ್ದ ಹದಿನಾಲ್ಕು ವರ್ಷದ ಇಬ್ಬರು ಅಪ್ರಾಪ್ತ ಬಾಲಕರನ್ನು ಬಂಧಿಸಲಾಗಿದೆ.
ವಿಜಯ್ ಅಭಿನಯದ ಭೀಮ ಚಿತ್ರ ಪ್ರದರ್ಶನದ ವೇಳೆ ಕಳೆದ ಭಾನುವಾರ ರಾತ್ರಿ 11.30ರ ಸುಮಾರಿಗೆ ಈ ಘಟನೆ ನಡೆದಿದೆ. ಮಧ್ಯಂತರ ವಿರಾಮದ ವೇಳೆ ಶೌಚಗೃಹ ಬಳಸಲು ಬಂದ 23 ವರ್ಷದ ಯುವತಿ ವಾಶ್‌ರೂಮ್ ನಲ್ಲಿ ಮೊಬೈಲ್ ಇಟ್ಟು ಮಹಿಳೆಯರ ವಿಡಿಯೋಗಳನ್ನು ರೆಕಾರ್ಡ್ ಮಾಡುವುದನ್ನು ನೋಡಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಸಿಸಿಟಿವಿ ಪರಿಶೀಲನೆ ನಡೆಸಿದ್ದು ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ.
ಸಿನಿಮಾ ಮುಗಿದ ಮೇಲೆ ಚಿತ್ರಮಂದಿರದಿಂದ ಹೊರಬರುತ್ತಿದ್ದ ಪ್ರೇಕ್ಷಕರನ್ನು ಪರೀಕ್ಷಿಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಹಿಡಿದು ಕಲಾಸಿಪಾಳ್ಯ ಪೊಲೀಸ್ ಠಾಣೆಗೆ ಕರೆದೊಯ್ದರು. ಕಳೆದ ಆರು ದಿನಗಳಲ್ಲಿ ಇದೇ ರೀತಿಯ ಎರಡನೇ ಘಟನೆಯಾಗಿದೆ. ಮಹಿಳೆಯರ ವಾಶ್ ರೂಂನಲ್ಲಿ ಮೊಬೈಲ್ ಇಟ್ಟಿದ್ದಕ್ಕಾಗಿ ಬಿಇಎಲ್ ರಸ್ತೆಯ ಥರ್ಡ್ ವೇವ್ ಕಾಫಿ ಉದ್ಯೋಗಿ 23 ವರ್ಷದ ಮನೋಜ್ ಎಂಬಾತನನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದರು. ಆಗಸ್ಟ್ 10ರಂದು ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ಘಟನೆ ಬೆಳಕಿಗೆ ಬಂದಿದೆ.
23 ವರ್ಷದ ಸಂತ್ರಸ್ತೆ ತನ್ನ ಕುಟುಂಬದೊಂದಿಗೆ ಭೀಮ ಚಿತ್ರವನ್ನು ನೋಡಲು ರಾತ್ರಿ ಶೋಗೆ ಬಂದಿದ್ದಳು. ವಿರಾಮದ ವೇಳೆ ಶೌಚಗೃಹ ಬಳಸಿ ಹೊರಬಂದಾಗ ಇಬ್ಬರು ಹುಡುಗರು ಓಡಿಹೋಗುವುದನ್ನು ನೋಡಿದಳು. ತಕ್ಷಣ ಈ ವಿಷಯವನ್ನು ಥಿಯೇಟರ್ ಸಿಬ್ಬಂದಿಯ ಗಮನಕ್ಕೆ ತಂದರು. ನಂತರ ತುರ್ತು ಪ್ರತಿಕ್ರಿಯೆ ಬೆಂಬಲ ವ್ಯವಸ್ಥೆ (ERSS) ಸಂಖ್ಯೆ 112 ಗೆ ಕರೆ ಮಾಡಿ ದೂರು ನೀಡಿದ್ದರು.
ಇಬ್ಬರೂ ಬಾಲಕರು ಜಯನಗರ 1ನೇ ಬ್ಲಾಕ್ ನಿವಾಸಿಗಳು. ವಾಶ್ ರೂಂನಲ್ಲಿ ಮಹಿಳೆಯರನ್ನು ಚಿತ್ರೀಕರಿಸಲು ಬಳಸಲಾಗಿದ್ದ ಮೊಬೈಲ್ ಒಂದನ್ನು ವಶಪಡಿಸಿಕೊಂಡು ಪರಿಶೀಲನೆಗೆ ಕಳುಹಿಸಿದ್ದಾರೆ. ಈ ಸಂಬಂಧ ಕಲಾಸಿಪಾಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
Advertisement