ಬೆಂಗಳೂರು: ಬೆಂಗಳೂರು ಮೂಲದ ಮಹಿಳಾ ಉದ್ಯಮಿಯೊಬ್ಬರು ತಮ್ಮ ಫೋಟೊ ಹಂಚಿಕೊಂಡು ಬರೆದ ಎರಡೇ ಎರಡು ಪದದ ಕ್ಯಾಪ್ಶನ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಜಾತೀಯತೆಯ ಬಗ್ಗೆ ವ್ಯಾಪಕ ಚರ್ಚೆಗೆ ಗ್ರಾಸವಾಗುವಂತೆ ಮಾಡಿದೆ.
ಬೆಂಗಳೂರು ಮೂಲದ ಕಂಟೆಂಟ್ ರೈಟಿಂಗ್ ಏಜೆನ್ಸಿಯ ಸಿಇಒ ಆಗಿರುವ ಅನುರಾಧಾ ತಿವಾರಿ (Anuradha Tiwari) ಎಂಬುವರು ಆಗಸ್ಟ್ 22ರಂದು ಸಾಮಾಜಿಕ ಜಾಲತಾಣ ಎಕ್ಸ್(ಟ್ವಿಟರ್)ನಲ್ಲಿ ತಮ್ಮ ಬೈಸೆಪ್ಸ್ ಫೋಟೊವನ್ನು ಪೋಸ್ಟ್ ಮಾಡಿ 'ಬ್ರಾಹ್ಮಿನ್ ಜೀನ್ಸ್' (Brahmin genes) ಎಂಬ ಶೀರ್ಷಿಕೆ ನೀಡಿದ್ದರು. ಇದೀಗ ಈ ಶಿರ್ಷಿಕೆ ಹಾಗೂ ಪೋಟೊ ವೈರಲ್ ಆಗುತ್ತಿದ್ದು ವ್ಯಾಪಕ ಚರ್ಚೆಗೆ ಗ್ರಾಸವಾಗುತ್ತಿದೆ.
ಈ ಶಿರ್ಷಿಕೆ ಹಾಗೂ ಪೋಟೊ ವೈರಲ್ ಆಗಿದ್ದು, ಅನೇಕರು ಅನುರಾಧಾ ಅವರ ನಡೆಯನ್ನು ಟೀಕಿಸಿದ್ದಾರೆ. ಜಾತೀಯತೆ ಇನ್ನೂ ಅಸ್ತಿತ್ವದಲ್ಲಿದೆ ಎಂದೆಲ್ಲ ಹೇಳಿದ್ದಾರೆ. ಸದ್ಯ ಈ ಎಲ್ಲ ಟೀಕೆಗಳಿಗೆ ಉತ್ತರಿಸಿ ಅವರು ಸರಣಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಇಷ್ಟಕ್ಕೂ ಪೋಸ್ಟ್ ನಲ್ಲೇನಿದೆ?
ಮೊದಲ ಪೋಸ್ಟ್‌ನಲ್ಲಿ ರಸ್ತೆಯಲ್ಲಿ, ಸ್ಕೂಟರ್ ಪಕ್ಕ ನಿಂತ ಅನುರಾಧಾ ತಿವಾರಿ ಅವರು ಎಡಗೈನಲ್ಲಿ ಎಳನೀರು ಹಿಡಿದುಕೊಂಡು ಬಲಗೈಯ ಬೈಸೆಪ್ಸ್ ಪ್ರದರ್ಶಿಸಿರುವ ಫೋಟೊ ಶೇರ್ ಮಾಡಿ ʼಬ್ರಾಹ್ಮಿನ್ ಜೀನ್ಸ್ʼ ಎಂದು ಬರೆದುಕೊಂಡಿದ್ದಾರೆ.
ಈ ಪೋಸ್ಟ್ ಗೆ ವ್ಯಾಪತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಫಿಟ್‌ನೆಸ್ ಬ್ರಾಹ್ಮಣರಲ್ಲಿ ಮಾತ್ರ ಕಂಡುಬರಲು ಸಾಧ್ಯ ಎಂಬಂತಿದೆ ಈ ಪೋಸ್ಟ್ ಎಂದೆಲ್ಲ ಕಮೆಂಟ್ ಮಾಡಿದ್ದಾರೆ. ಜತೆಗೆ ಜಾತೀಯತೆಯನ್ನು ಎಳೆದು ತಂದಿದ್ದಾರೆ. ಯಾಕೆ ಜಾತಿ ಪದ್ಧತಿ ಇನ್ನೂ ಬೇರೂರಿದೆ? ಇವರು ಹೇಳುತ್ತಿರುವುದು ನೋಡಿದರೆ ಉನ್ನತ ಅಥವಾ ನಿರ್ದಿಷ್ಟ ವಂಶವಾಹಿಗಳು ಫಿಟ್ ಆಗಿದ್ದಾರೆ. ಫಿಟ್ ಆಗಿರಲು ವಂಶಾವಾಹಿ ಕಾರಣ ಎಂಬಂತಿದೆ ಎಂದು ಕೆಲ ಬಳಕೆದಾರರು ಕಿಡಿಕಾರಿದ್ದಾರೆ.
ತಿರುಗೇಟು ಕೊಟ್ಟ ಅನುರಾಧಾ
ಈ ಪೋಸ್ಟ್ ವೈರಲ್ ಆಗಿ ವ್ಯಾಪಕ ಚರ್ಚೆಗೆ ಗ್ರಾಸವಾಗಿರುವಂತೆಯೇ ತಮ್ಮ ವಿರುದ್ಧ ಟೀಕೆಗಳಿಗೆ ತಿರುಗೇಟು ನೀಡಿರುವ ಅನುರಾಧಾ ಅವರು, “ನಿರೀಕ್ಷಿಸಿದಂತೆ ‘ಬ್ರಾಹ್ಮಣ’ ಎಂಬ ಪದದ ಉಲ್ಲೇಖವು ಅನೇಕರನ್ನು ಕೆರಳಿಸಿದೆ. ನಿಜವಾದ ಜಾತಿವಾದಿಗಳು ಯಾರು ಎಂಬುದನ್ನು ಇದು ತಿಳಿಸುತ್ತದೆ. ಸಾಮಾನ್ಯ ವಿಭಾಗದವರು ವ್ಯವಸ್ಥೆಯಿಂದ ಏನನ್ನೂ ಪಡೆಯುವುದಿಲ್ಲ – ಯಾವುದೇ ಮೀಸಲಾತಿ ಇಲ್ಲ, ಉಚಿತ ಕೊಡುಗೆಗಳಿಲ್ಲ. ನಾವು ಎಲ್ಲವನ್ನೂ ಸ್ವಂತವಾಗಿ ಸಂಪಾದಿಸುತ್ತೇವೆ ಮತ್ತು ನಮ್ಮ ವಂಶಾವಳಿಯ ಬಗ್ಗೆ ಹೆಮ್ಮೆ ಪಡಲು ಎಲ್ಲ ಹಕ್ಕು ನಮಗಿದೆʼʼ ಎಂದು ಮತ್ತೊಂದು ಪೋಸ್ಟ್ ಮಾಡಿದ್ದಾರೆ.
ಆಗಸ್ಟ್ 24ರಂದು ಮತ್ತೊಂದು ಪೋಸ್ಟ್ ಮಾಡಿದ ಅವರು ʼʼದಲಿತ / ಮುಸ್ಲಿಂ / ಬುಡಕಟ್ಟು ಜನಾಂಗ ಎಂದು ಹೆಮ್ಮೆಯಿಂದ ಹೇಳಿದರೆ ತೊಂದರೆ ಇಲ್ಲ. ಆದರೆ ಬ್ರಾಹ್ಮಣ ಎಂದು ಹೆಮ್ಮೆಯಿಂದ ಹೇಳಿದರೆ ಟೀಕಿಸುತ್ತಾರೆ. ಒಟ್ಟಿನಲ್ಲಿ ಬ್ರಾಹ್ಮಣರಲ್ಲಿ ತಪ್ಪಿತಸ್ಥ ಭಾವನೆ ಮೂಡಿಸಲು ಇಡೀ ವ್ಯವಸ್ಥೆ ಕೆಲಸ ಮಾಡುತ್ತಿದೆʼʼ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು (ಆಗಸ್ಟ್ 25) ಮತ್ತೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡ ಅನುರಾಧಾ, ʼʼಬ್ರಾಹ್ಮಣರು ಇಂದು ತಮ್ಮ ಪೂರ್ಣ ಹೆಸರನ್ನು ಬಹಿರಂಗಪಡಿಸಲು ಹೆದರುತ್ತಾರೆ. ನಮ್ಮ ವಿರುದ್ಧ ತುಂಬಾ ದ್ವೇಷವನ್ನು ಹರಡಲಾಗಿದೆ. ಸಾಮಾಜಿಕ ನ್ಯಾಯ ಕಾರ್ಯಕರ್ತರು ಮತ್ತು ರಾಜಕಾರಣಿಗಳು ನಮ್ಮನ್ನು ಖಳನಾಯಕರನ್ನಾಗಿ ಮಾಡಿದ್ದಾರೆ. ನಾವು ಯಾರಿಗೂ ಹಾನಿ ಮಾಡುವುದಿಲ್ಲ. ನಮಗೆ ಸರ್ಕಾರದಿಂದ ಯಾವುದೇ ಸಹಾಯ ಸಿಗುವುದಿಲ್ಲ. ನಾವು ಕಷ್ಟಪಟ್ಟು ಕೆಲಸ ಮಾಡುತ್ತೇವೆ. ನಮ್ಮ ಜಾತಿಯ ಬಗ್ಗೆ ನಾವೇಕೆ ನಾಚಿಕೆಪಡಬೇಕು?ʼʼ ಎಂದು ಬರೆದುಕೊಂಡಿದ್ದಾರೆ.
Advertisement