ಬೆಂಗಳೂರು: ಮಹದೇವಪುರ ವಲಯದ 19 ಕಟ್ಟಡಗಳನ್ನು ಅಕ್ರಮ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪಟ್ಟಿ ಮಾಡಿದ್ದು, ಇದರ ಬೆನ್ನಲ್ಲೇ ಕಟ್ಟಡಗಳ ಪರಿಶೀಲನೆಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಮುಂದಾಗಿದೆ.
ಕಟ್ಟಡಗಳಿಂದ ಸಂಸ್ಕರಿಸಿದ ತ್ಯಾಜ್ಯ ನೀರು ಕೆರೆಗಳಿಗೆ ಸೇರದಂತೆ ನೋಡಿಕೊಳ್ಳುವುದು ಮಂಡಳಿಯ ಕರ್ತವ್ಯವಾಗಿದೆ. ಕಟ್ಟಡಗಳಲ್ಲಿ ಅನುಮತಿಗೆ ವಿರುದ್ಧವಾಗಿ ಹೆಚ್ಚಿನ ಮಹಡಿಯಲ್ಲಿ ಮನೆ, ಶೌಚಾಲಯ, ಸ್ನಾನ ಗೃಹಗಳನ್ನು ಕಟ್ಟಲಾಗಿದ್ದು, ಹೆಚ್ಚಿನ ತ್ಯಾಜ್ಯ ನೀರು ಎಲೆಮಲ್ಲಪ್ಪ ಶೆಟ್ಟಿ ಕೆರೆಗೆ ಸೇರುತ್ತಿವೆ. ಹೀಗಾಗಿ ಪರಿಶೀಲನೆಗೆ ಮಂಡಳಿ ಮುಂದಾಗಿದ್ದು, ಕೆರೆಗೆ ತ್ಯಾಜ್ಯ ನೀರು ಹರಿಯುವಿಕೆ ತಡೆಯಲು ಕ್ರಮ ಕೈಗೊಳ್ಳಲಿದೆ ಎಂದು ಮಂಡಳಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮಹದೇವಪುರ ವಲಯದ ಕೆಎಸ್‌ಪಿಸಿಬಿ ಪರಿಸರ ಕಚೇರಿಯ ಅಧಿಕಾರಿ ಮಾತನಾಡಿ, ಬಸವನಪುರ ವಾರ್ಡ್‌ನ ನಿರ್ದಿಷ್ಟ ಬಡಾವಣೆಯಲ್ಲಿ ಕೆಲವು ಕಟ್ಟಡಗಳು ಸಂಸ್ಕರಿಸದ ತ್ಯಾಜ್ಯ ನೀರನ್ನು ಕೆರೆಗೆ ಬಿಡುತ್ತಿವೆ. ಕೆಲವು ಕಟ್ಟಡಗಳಿಗೆ ನಾಲ್ಕು ಮಹಡಿ ನಿರ್ಮಾಣಕ್ಕೆ ಅನುಮತಿ ನೀಡಿದ್ದರು, ಹೆಚ್ಚಿನ ಮಹಡಿಯಲ್ಲಿ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಇದರಿಂದ ತ್ಯಾಜ್ಯ ನೀರು ಕೆರೆಗೆ ಸೇರುತ್ತಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಪರಿಶೀಲನೆ ನಡೆಸಲು ಯೋಜನೆ ರೂಪಿಸಲಾಗಿದ್ದು, ವರದಿ ಸಿದ್ಧಪಡಿಸಲಾಗುವುದು. ದೋಷಗಳು ಕಂಡು ಬಂದರೆ ಕೆರೆಯನ್ನು ಕಲುಷಿತಗೊಳಿಸುವುದಕ್ಕೆ ನಿವೇಶನದ ಮಾಲೀಕರು ಅಥವಾ ಬಿಲ್ಡರ್ ಹೊಣೆಯಾಗಬೇಕಾಗುತ್ತದೆ. ಇದಕ್ಕೆ ಕಾರಣರಾದವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ.
ಈ ನಡುವೆ ಕೆರೆಗಳಿಗೆ ಮರುಜೀವ ನೀಡುವ ಕೆಲಸ ಮಾಡುತ್ತಿರುವ ಸ್ವಯಂಸೇವಕರು ಈ ಬೆಳವಣಿಗೆಯನ್ನು ಸ್ವಾಗತಿಸಿದ್ದಾರೆ.
ಕಟ್ಟಣ ನಿರ್ಮಾಣ ಅವಶೇಷಗಳು, ತ್ಯಾಜ್ಯ ನೀರು ಚರಂಡಿಯ ಮೂಲಕ ಕೆರೆಗೆ ಸೇರುತ್ತಿವೆ. ಸಣ್ಣ ನೀರಾವರಿ ಇಲಾಖೆ ಮತ್ತು ಬಿಡಬ್ಲ್ಯೂಎಸ್‌ಎಸ್‌ಬಿಗೆ ಇದರ ಬಗ್ಗೆ ಮಾಹಿತಿ ಇದೆ. ಸಾಯಿ ಸೆರಿನಿಟಿ, ಸಾಯಿ ಗಾರ್ಡನ್‌ನಂತಹ ಬಡಾವಣೆಗಳಲ್ಲಿನ ಕೆಲವು ಕಟ್ಟಡಗಳು ಕೊಳಚೆ ನೀರನ್ನು ಕೆರೆಗೆ ಬಿಡುತ್ತಿವೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ವೀಕ್ಷಣೆ ಹಿನ್ನೆಲೆಯಲ್ಲಿ ಮಡಿವಾಳ ಹಾಗೂ ಎಲೆ ಮಲ್ಲಪ್ಪ ಶೆಟ್ಟಿ ಕೆರೆಗಳ ಪುನಶ್ಚೇತನಕ್ಕೆ ರಾಜ್ಯ ಸರಕಾರ 120 ಕೋಟಿ ರೂ.ಗಳ ವಿಶೇಷ ಅನುದಾನ ಮಂಜೂರು ಮಾಡಿದೆ. ಆದರೆ, ಅಧಿಕಾರಿಗಳು ಕೆರೆಗೆ ಬೇಲಿ ಹಾಕುವಲ್ಲಿ ವಿಫಲರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
Advertisement