
ಬೆಂಗಳೂರು: ಹೆಬ್ಬಾಳದ ಎಸ್ಟೀಮ್ ಮಾಲ್ ನಿಂದ ಸಿಲ್ಕ್ ಬೋರ್ಡ್ ವರೆಗೆ ಸುಮಾರು 18 ಕಿಮೀ ಉದ್ದದ 12, 690 ಕೋಟಿ ವೆಚ್ಚದಲ್ಲಿ ಸುರಂಗ ಮಾರ್ಗವನ್ನು ನಿರ್ಮಾಣ ಮಾಡಲು ಸರ್ಕಾರ ಮುಂದಾಗಿದ್ದು, ಸರ್ಕಾರದ ಈ ನಡೆಗೆ ತಜ್ಞರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಯೋಜನೆಗೆ ಸರ್ಕಾರ 12,690 ಕೋಟಿ ರೂಪಾಯಿ ಹೂಡಿಕೆ ಮಾಡಲು ಮುಂದಾಗಿದೆ. ಆದರೆ, ಯೋಜನೆ ವೆಚ್ಚ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಬೆಂಗಳೂರು ವಿಶ್ವವಿದ್ಯಾನಿಲಯದ ಪರಿಸರ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ಡಿ.ಪರಮೇಶ ನಾಯ್ಕ್ ಅವರು ಹೇಳಿದ್ದಾರೆ.
ಸುರಂಗ ಮಾರ್ಗ ತೆರೆಯುವುದು ಅತ್ಯಂತ ಕಷ್ಟಕರ ಕೆಲಸ. ಕಾಮಗಾರಿ ವೇಳೆ ಬಂಡೆ ಮತ್ತು ಬಿರುಕುಗಳು ಭೌಗೋಳಿಕ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿವೆ. ನೀರಿನ ಮೂಲ, ನೀರಿನ ಒಳಹರಿವಿನ ಮೇಲೆ ಮೇಲೆ ಪರಿಣಾಮ ಬೀರಬಹುದು, ಸುರಂಗ ಯೋಜನೆಯಲ್ಲಿ ಸ್ಫೋಟ, ಅನಿಲ ಸೋರಿಕೆ, ಮಣ್ಣು ಕುಸಿತ ಎದುರಾಗಬಹುದು. ಗಾಳಿಯ ಗುಣಮಟ್ಟದ ಮೇಲೂ ಪರಿಣಾ ಬೀರಬಹುದು. ಹೀಗಾಗಿಯೇ ಮೆಟ್ರೋ ರೈಲು ಮಾರ್ಗವನ್ನು ಭೂಗತಗೊಳಿಸುವ ಕಲ್ಪನೆಯನ್ನು ಕೈಬಿಡಲಾಗಿತ್ತು ಎಂದು ತಿಳಿಸಿದ್ದಾರೆ.
ಬೆಂಗಳೂರು ವಿಶ್ವವಿದ್ಯಾನಿಲಯದ ಭೂವಿಜ್ಞಾನದ ಮಾಜಿ ಪ್ರಾಧ್ಯಾಪಕ ಮತ್ತು ಸಂಯೋಜಕ ರೇಣುಕಾ ಪ್ರಸಾದ್ ಅವರು ಮಾತನಾಡಿ, ಬೆಂಗಳೂರಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಸುರಂಗ ಮತ್ತು ಮೆಟ್ರೋ ಪಿಲ್ಲರ್‌ಗಳನ್ನು ದೊಡ್ಡ ಮಟ್ಟಲ್ಲಿ ನಿರ್ಮಿಸಲಾಗುತ್ತಿದೆ. ಲಕ್ಷಗಟ್ಟಲೆ ಬೋರ್‌ವೆಲ್‌ಗಳನ್ನು ಆಳವಾಗಿ ಅಗೆಯಲಾಗಿದೆ ಮತ್ತು ಅನೇಕ ಅಪಾರ್ಟ್‌ಮೆಂಟ್‌ಗಳು ಮಲ್ಟಿ-ಲೆವೆಲ್ ಬೇಸ್‌ಮೆಂಟ್ ಪಾರ್ಕಿಂಗ್ ಹೊಂದಿವೆ. ಇದರ ನಡುವೆ ಸುರಂಗ ಮಾರ್ಗ ಯೋಜನೆ ಈ ಎಲ್ಲಾ ನಿರ್ಮಾಣಗಳ ಮೇಲೆ ಪರಿಣಾಮ ಬೀರಬಹುದು. ಸುರಂಗಗಳು ಅಂತರ್ಜಲದ ಹರಿವಿಗೆ ಅಡ್ಡಿಯುಂಟುಮಾಡುತ್ತವೆ ಮತ್ತು ಕುಡಿಯುವ ನೀರಿನ ಕೊರತೆಯನ್ನೂ ಉಂಟುಮಾಡುತ್ತವೆ ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ಅರಣ್ಯ ಪ್ರದೇಶವು ಶೇ.33 ಕ್ಕಿಂತ ಕಡಿಮೆಯಿದೆ. ನಗರದಲ್ಲಿ ಕೇವಲ ಶೇ.5ರಷ್ಟಿದೆ. ಯೋಜನೆಯು ನಗರದ ಹಸಿರು ಹೊದಿಕೆಯು ಪರಿಣಾಮ ಬೀರಬಹುದು. ಮಳೆ ನೀರು ಒಳಚರಂಡಿ ಪ್ರದೇಶಗಳನ್ನು ಅತಿಕ್ರಮಣ ಮಾಡಿಕೊಳ್ಳಲಾಗಿದ್ದು, ನಗರದ ನಗರದ ಸುತ್ತಮುತ್ತ ಕಲ್ಲುಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ. ಸುರಂಗ ನಿರ್ಮಾಣವು ಉಳಿದಿರುವ ಹಸಿರು ಹೊದಿಕೆ ಮತ್ತು ಒಳಚರಂಡಿ ವ್ಯವಸ್ಥೆ ನಾಶವಾಗಲು ಕಾರಣವಾಗುತ್ತದೆ, ಇದು ಮಳೆನೀರನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಮತ್ತಷ್ಟು ಕಡಿಮೆ ಮಾಡುತ್ತದೆ. ನಗರದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಲು ಕಾರಣವಾಗುತ್ತದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ತಜ್ಞರು ಸುರಂಗ ಮಾರ್ಗ ಯೋಜೆ ಬದಲಿಗೆ ಅಸ್ತಿತ್ವದಲ್ಲಿರುವ ಮೂಲಸೌಕರ್ಯವನ್ನು ಉತ್ತಮಗೊಳಿಸುವುಗು, ಸಾರ್ವಜನಿಕ ಸಾರಿಗೆಯನ್ನು ಸುಧಾರಿಸುವ ಮತ್ತು ಸುಸ್ಥಿರ ನಗರ ಯೋಜನೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಉತ್ತೇಜಿಸುವ ಮೂಲಕ ಟ್ರಾಫಿಕ್ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಒತ್ತಾಯಿಸಿದ್ದಾರೆ.
Advertisement