ಬೆಂಗಳೂರು: ಬೆಂಗಳೂರಿನಿಂದ ಸುಮಾರು 100 ಕಿ.ಮೀ ದೂರದಲ್ಲಿರುವ ಸ್ಥಳಗಳಿಗೆ ಹವಾನಿಯಂತ್ರಿತ ಬಸ್ ಸೇವೆಗಳ ಒದಗಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಚಿಂತನೆ ನಡೆಸುತ್ತಿದೆ.
ಸೇವೆ ಕುರಿತ ಕಾರ್ಯಸಾಧ್ಯತೆಗಳ ಕುರಿತು ನಿಗಮವು ಅಧ್ಯಯನ ನಡೆಸುತ್ತಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೆಎಸ್‌ಆರ್‌ಟಿಸಿ ಎಂಡಿ ಅನ್ಬು ಕುಮಾರ್ ಅವರು, ವಿವಿಧ ಉದ್ದೇಶಗಳಿಗಾಗಿ ಪ್ರತಿನಿತ್ಯ ನಗರಕ್ಕೆ ಸಾವಿರಾರು ಜನರು ಪ್ರಯಾಣಿಸುತ್ತಿರುತ್ತಾರೆ. ವಿದ್ಯಾರ್ಥಿಗಳು, ಟೆಕ್ಕಿಗಳು, ಕಾರ್ಮಿಕರು ಮತ್ತು ವ್ಯಾಪಾರಿಗಳು ಬೆಂಗಳೂರಿಗೆ ಹತ್ತಿರವಿರುವ ಕೋಲಾರ, ತುಮಕೂರು, ಆನೇಕಲ್, ರಾಮನಗರ, ಕನಕಪುರ, ಚನ್ನಪಟ್ಟಣ, ಮಂಡ್ಯ, ಚಿಕ್ಕಬಳ್ಳಾಪುರ, ಹೊಸೂರಿಗೆ ಪ್ರಯಾಣ ಮಾಡುತ್ತಿರುತ್ತಾರೆ. ಈಗಾಗಲೇ ನಿಗಮವು ಬೆಂಗಳೂರಿನಿಂದ ಚೆನ್ನೈ, ಮಂಗಳೂರು, ಬೆಳಗಾವಿ, ಗೋವಾ ಮತ್ತು ಇತರ ಮಾರ್ಗಗಳಲ್ಲಿ ಎಸಿ ಬಸ್ ಸೇವೆಗಳನ್ನು ಒದಗಿಸುತ್ತಿದೆ. ಆದರೆ, 100 ಕಿಮೀ ವ್ಯಾಪ್ತಿಯಲ್ಲಿರುವ ಸ್ಥಳಗಳಿಗೆ ಎಸಿ ಸೇವೆಗಳನ್ನು ನೀಡಲಾಗಿಲ್ಲ. ಅಶ್ವಮೇಧ ಸೇರಿದಂತೆ ಅಸ್ತಿತ್ವದಲ್ಲಿರುವ ನಾನ್-ಎಸಿ ಬಸ್‌ಗಳು ಸಾಮಾನ್ಯ ಪಾಯಿಂಟ್-ಟು-ಪಾಯಿಂಟ್ ಬಸ್‌ಗಳಾಗಿದ್ದು, ಕುಳಿತುಕೊಳ್ಳಲು ಮತ್ತು ನಿಂತು ಪ್ರಯಾಣಿಸಲು ಅನುಕೂಲಕರವಾಗಿದೆ. ಆದಾಗ್ಯೂ, ಆರಾಮ, ಚಾರ್ಜಿಂಗ್ ಪೋರ್ಟ್‌ಗಳು ಮತ್ತು ಇತರ ಸೌಕರ್ಯಗಳನ್ನು ಒದಗಿಸುವ ಎಸಿ ಬಸ್‌ಗಳಿಗೆ ಬೇಡಿಕೆಗಳು ಹೆಚ್ಚಾಗಿವೆ.
ಕಳೆದ ಮೂರು ವರ್ಷಗಳಲ್ಲಿ ನಿಗಮವು ಅಂಬಾರಿ ಉತ್ಸವ, ಅಶ್ವಮೇಧ, ಪಲ್ಲಕಿ, ಮತ್ತು EV ಪವರ್ ಪ್ಲಸ್ (ಇ-ಬಸ್) ಬಸ್ ಸೇವೆಗಳನ್ನ ಒದಗಿಸಿದ್ದು, ಈ ಎಲ್ಲಾ ಸೇವೆಗಳನ್ನು ಜನರು ಬೆಂಬಲಿಸಿದ್ದಾರೆ. ಇದೀಗ ಜನರ ಬೇಡಿಕೆಗೆ ಅನುಗುಣವಾಗಿ ಹೊಸ ಸೇವೆಯನ್ನು ಪ್ರಾರಂಭಿಸಲು ಚಿಂತನೆ ನಡೆಸುತ್ತಿದ್ದೇವೆ. ಬೆಂಗಳೂರಿನಿಂದ 100 ಕಿ.ಮೀ ದೂರದ ಪ್ರದೇಶಗಳಿಗೆ ಎಸಿ ಬಸ್‌ಗಳ ಬೇಡಿಕೆ ಇದೆ. ಹೀಗಾಗಿ ಮಾರ್ಗಗಳು ಮತ್ತು ಬೇಡಿಕೆಯ ಕುರಿತು ಕಾರ್ಯಸಾಧ್ಯತೆಗಳ ಬಗ್ಗೆ ಅಧ್ಯಯನವನ್ನು ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಎಸ್ ಬಸ್ ಗಳಲ್ಲಿ ಟಿಕೆಟ್ ದರ ಹೆಚ್ಚಾಗಿರಬಹುದು. ಆದರೆ, ಸಾಂದರ್ಭಿಕವಾಗಿ ಪ್ರಯಾಣಿಸುವುದರಿಂದ ಪಾವತಿಗೆ ಜನರು ಸಿದ್ಧರಿದ್ದಾರೆ. ನಿಗಮಕ್ಕೆ ಲಾಭವೊಂದೇ ಉದ್ದೇಶವಾಗಿರದ ಕಾರಣ ಸಾಧ್ಯಾಸಾಧ್ಯತೆ ಅಧ್ಯಯನದ ನಂತರ ದರವನ್ನು ನಿರ್ಧರಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
Advertisement