ನಗರದಲ್ಲಿ ಮಳೆ ಅವಾಂತರ ತಡೆಯಲು ಪಾಲಿಕೆ ಸಿದ್ಧತೆ: ತಗ್ಗು ಪ್ರದೇಶಗಳಲ್ಲಿ 80 ಅರ್ಥ್‌ಮೂವರ್‌ಗಳ ನಿಯೋಜನೆಗೆ ಸೂಚನೆ

ವಲಯ ಆಯುಕ್ತರೊಂದಿಗೆ ಸೋಮವಾರ ಸಭೆ ನಡೆಸಿದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.
ನಗರದಲ್ಲಿ ಮಳೆ ಅವಾಂತರ ತಡೆಯಲು ಪಾಲಿಕೆ ಸಿದ್ಧತೆ: ತಗ್ಗು ಪ್ರದೇಶಗಳಲ್ಲಿ 80 ಅರ್ಥ್‌ಮೂವರ್‌ಗಳ ನಿಯೋಜನೆಗೆ ಸೂಚನೆ
Updated on

ಬೆಂಗಳೂರು: ನೆರೆಯ ರಾಜ್ಯ ತಮಿಳುನಾಡು ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಫೆಂಗಲ್ ಚಂಡಮಾರುತದ ಅಬ್ಬರ ಜೋರಾಗಿದ್ದು, ರಾಜ್ಯದಲ್ಲೂ ಭಾರೀ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಮಳೆ ಅವಾಂತರ ತಡೆಯಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ.

ವಲಯ ಆಯುಕ್ತರೊಂದಿಗೆ ಸೋಮವಾರ ಸಭೆ ನಡೆಸಿದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ನಗರದಲ್ಲಿ ಭಾರೀ ಮಳೆಯಾಗದಿದ್ದರೂ, ಪ್ರವಾಹಕ್ಕೆ ಒಳಗಾಗುವ ತಗ್ಗು ಪ್ರದೇಶಗಳಲ್ಲಿ 80 ಅರ್ಥ್ ಮೂವರ್‌ಗಳನ್ನು ನಿಯೋಜಿಸಲು ಸೂಚನೆ ನೀಡಲಾಗಿದೆ. ಚರಂಡಿಯಲ್ಲಿನ ಹೂಳು, ತ್ಯಾಜ್ಯವನ್ನು ತೆರವುಗೊಳಿಸಲು ಮತ್ತು ಮಳೆಯ ಸಮಯದಲ್ಲಿ ಚರಂಡಿ ಮುಚ್ಚಿಹೋಗದಂತೆ ನೋಡಿಕೊಳ್ಳಲು ಎಂಜಿನಿಯರ್‌ಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ನೆರೆ ರಾಜ್ಯಗಳಿಗೆ ಹವಾಮಾನ ಇಲಾಖೆ ಮುನ್ಸೂಚನೆಗಳನ್ನು ನೀಡಿದೆ. ಆದರೂ, ಪಾಲಿಕೆ ಮುನ್ನೆಚ್ಚರಿಕೆ ವಹಿಸಿದೆ. ಎಲ್ಲಾ ವಲಯಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಸನ್ನದ್ಧರಾಗಿರಬೇಕೆಂದು ಸೂಚನೆ ನೀಡಲಾಗಿದೆ, ಜೆಸಿಬಿಗಳ ಮೂಲಕ ರಾಜಕಾಲುವೆಗಳಲ್ಲಿ ನಿರಂತರವಾಗಿ ಹೂಳನ್ನು ತೆಗೆಯುವಂತೆ, ಪ್ರಮುಖ ರಸ್ತೆಗಳ ಸೈಡ್ ಡ್ರೈನ್‌ಗಳಿಗೆ ಸರಾಗವಾಗಿ ನೀರು ಹೋಗುವಂತೆ ಸ್ವಚ್ಛಗೊಳಿಸುವಂತೆ ಜೊತೆಗೆ ಮರ ತೆರವು ತಂಡಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಮಳೆ ಹಿನ್ನೆಲೆ ರಸ್ತೆ ಗುಂಡಿಗಳನ್ನು ಮುಚ್ಚಲು ಸಮಸ್ಯೆಯಾಗುತ್ತಿದೆ. ಆದ್ದರಿಂದ ಕೋಲ್ಡ್ ಮಿಕ್ಸ್ ಮೂಲಕ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಸೂಚಿಸಲಾಗಿದೆ. ಮಳೆ ನಿಂತ ಕೂಡಲೆ ಹಾಟ್ ಮಿಕ್ಸ್ ಪ್ಲಾಂಟ್‌ನಿಂದ ಹೆಚ್ಚು ಹೆಚ್ಚು ಡಾಂಬರನ್ನು ಪಡೆದು ಶೀಘ್ರ ಗತಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಸೂಚಿಸಲಾಗಿದೆ ಎಂದರು.

ಐಎಂಡಿ ನೀಡಿರುವ ಮಾಹಿತಿಗಳ ಪ್ರಕಾರ, ನಗರದಲ್ಲಿ ಸೋಮವಾರ ಬೆಳಗ್ಗೆ 8:30 ರಿಂದ ರಾತ್ರಿ 8:30 ರವರೆಗೆ 14.5 ಮಿಮೀ ಮಳೆಯಾಗಿದೆ ಎಂದು ತಿಳಿದುಬಂದಿದೆ.

ನಗರದಲ್ಲಿ ಮಳೆ ಅವಾಂತರ ತಡೆಯಲು ಪಾಲಿಕೆ ಸಿದ್ಧತೆ: ತಗ್ಗು ಪ್ರದೇಶಗಳಲ್ಲಿ 80 ಅರ್ಥ್‌ಮೂವರ್‌ಗಳ ನಿಯೋಜನೆಗೆ ಸೂಚನೆ
Fengal Cyclone: ಮಳೆ ಇದ್ದರೂ ನಗರದ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸದ ಜಿಲ್ಲಾಡಳಿತ; ಪೋಷಕರು ಬೇಸರ

ಎಲ್ಲಾ ಇ-ಖಾತಾ ಅರ್ಜಿಗಳು ಶೀಘ್ರದಲ್ಲೇ ವಿವೇವಾರಿ

ಮುಂದಿನ 36 ಗಂಟೆಗಳ ಕಾಲ ಸಾಧಾರಣದಿಂದ ಭಾರೀ ಮಳೆ ಮತ್ತು ಮೋಡ ಕವಿದ ವಾತಾವರಣ ಹಾಗೂ ತಾಪಮಾನವು ಗರಿಷ್ಠ 23 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ಆಗಿರಲಿದೆ ಎಂದು ಮಾಹಿತಿ ನೀಡಿದೆ.

ನಗರದಲ್ಲಿ ಇದುವರೆಗೆ ಇ-ಖಾತಾ ಪಡೆಯಲು 72.96 ಲಕ್ಷ ಭೇಟಿ ನೀಡಿದ್ದು, 6 ಲಕ್ಷ ಕರಡು ಇ-ಖಾತಾ ಡೌನ್ಲೋಡ್ ಆಗಿದೆ. ಇದುವರೆಗೆ 21,369 ಅಂತಿಮ ಇ-ಖಾತಾ ನೀಡಲಾಗಿದ್ದು, ಸಹಾಯಕ ಕಂದಾಯ ಅಧಿಕಾರಿಗಳ ಲಾಗಿನ್‌ನಲ್ಲಿ ಸುಮಾರು 14,000 ಇ-ಖಾತಾ ಅರ್ಜಿಗಳು ಬಾಕಿಯಿದೆ. ಅವುಗಳನ್ನು ಶೀಘ್ರ ವಿಲೇವಾರಿ ಮಾಡಲಾಗುವುದು ಎಂದು ತುಷಾರ್ ಗಿರಿನಾಥ್ ಅವರು ಇದೇ ವೇಳೆ ಮಾಹಿತಿ ನೀಡಿದರು.

ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲಾ ವಾರ್ಡ್‌ಗಳಿಗೆ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಪ್ರತಿ ಬುಧವಾರ ವಾರ್ಡ್ ಕಛೇರಿಗಳಲ್ಲಿ ಅಧಿಕಾರಿಗಳು ಹಾಗೂ ಸಾರ್ವಜನಿಕರ ಕುಂದು-ಕೊರತೆಗಳ ಸಭೆ ನಡೆಯಲಿದೆ. ಅದಲ್ಲದೆ ಕಂದಾಯ ವಿಭಾಗದ ಅಧಿಕಾರಿಗಳ ಕಛೇರಿಗಳಲ್ಲಿ ಪ್ರತಿ ಬುಧವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ "ಕಂದಾಯ ಮತ್ತು ಕುಂದು ಕೊರತೆಗಳ ಅದಾಲತ್" ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಪಾಲಿಕೆ ವ್ಯಾಪ್ತಿಯಲ್ಲಿ ಇದೇ ಮೊದಲ ಬಾರಿಗೆ 4,250 ಹೆಚ್ಚು ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿ 5,200 ಕೋಟಿ ರೂ. ಸಂಗ್ರಹಿಸುವ ಗುರಿಯಿದೆ. ಈ ನಿಟ್ಟಿನಲ್ಲಿ ನಿಗದಿತ ಗುರಿ ಸಾಧಿಸಲು ಆಯಾ ವಲಯ ವ್ಯಾಪ್ತಿಯಲ್ಲಿ ಸೂಕ್ತ ಕ್ರಮಗಳನ್ನು ಕೈಗೊಂಡು ಬಾಕಿ ಆಸ್ತಿ ತೆರಿಗೆ ಸಂಗ್ರಹಿಸಲು ಸೂಚನೆ ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com