

ಬಾಳೆಗದ್ದೆ (ಉತ್ತರ ಕನ್ನಡ): ಕುಡಿದ ಅಮಲಿನಲ್ಲಿ ಶಾಲೆಗೆ ಬಂದಿದ್ದ ಶಿಕ್ಷಕರೊಬ್ಬರನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಅಮಾನತುಗೊಳಿಸಿದ್ದು, ಅಮಾನತು ಆದೇಶವನ್ನು ಗೌಪ್ಯವಾಗಿರಿಸಿರುವ ಘಟನೆ ಯಲ್ಲಾಪುರ ತಾಲೂಕಿನ ಬಾಳೆಗದ್ದೆ ಗ್ರಾಮದಲ್ಲಿ ನಡೆದಿದೆ.
ಯಲ್ಲಾಪುರ ತಾಲೂಕಿನ ಬಾಳೆಗದ್ದೆ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಪ್ರಕಾಶ್ ನಾಯ್ಕ ಅಮಾನತುಗೊಂಡಿರುವ ಶಿಕ್ಷಕ.
ಕರ್ತವ್ಯಲೋಪ ಹಾಗೂ ಕರ್ತವ್ಯಕ್ಕೆ ಗೈರು ಹಾಜರು, ನಿಯಮಾವಳಿ ಉಲ್ಲಂಘಿಸಿದ ಆರೋಪದ ಮೇಲೆ ನವೆಂಬರ್ 21, 2024ರಂದು ಪ್ರಕಾಶ ನಾಯ್ಕ ಅವರನ್ನು ಅಮಾನತುಗೊಳಿಸಲಾಗಿದೆ.
2024ರ ಆಗಸ್ಟ್ 20ರಂದು ಎಸ್‌ಡಿಎಂಸಿ ಅಧ್ಯಕ್ಷ ಬಾಳೆಗದ್ದೆ ಶಾಲೆಗೆ ಭೇಟಿ ನೀಡಿದ್ದು, ಈ ವೇಳೆ ಶಿಕ್ಷಕ ಗೈರು ಹಾಜರಾಗಿರುವುದು ಕಂಡು ಬಂದಿದೆ. ಅಂತೆಯೇ, ಆಗಸ್ಟ್ 16, ಆಗಸ್ಟ್ 22 ಮತ್ತು ಆಗಸ್ಟ್ 23, 2024 ರಂದೂ ಕೂಡ ಗೈರುಹಾಜರಾಗಿರುವುದು ಕಂಡು ಬಂದಿದೆ. ಆದರೆ, ಹಾಜರಾತಿ ಪುಸ್ತಕದಲ್ಲಿ ಶಿಕ್ಷಕ ಹಾಜರು ಇದ್ದರು ಎಂಬಂತೆ ಸಹಿ ಇರುವುದು ಕಂಡು ಬಂದಿದೆ.
ನಿಯಮ ಉಲ್ಲಂಘನೆ ಬೆನ್ನಲ್ಲೇ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು, ಶಿಕ್ಷಕನಿಗೆ ನೋಟಿಸ್ ಜಾರಿ ಮಾಡಿದ್ದು, ಕೆಸಿಎಸ್‌ಆರ್ ನಿಯಮ 106(ಎ) ಹಾಗೂ 108ನೇ ನಿಯಮದಡಿ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಬಾರದೇಕೆ? ಎಂದು ಪ್ರಶ್ನಿಸಿ, ಲಿಖಿತ ಉತ್ತರ ನೀಡುವಂತೆ ಸೂಚಿಸಿ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆಂದು ತಿಳಿದುಬಂದಿದೆ.
ಆದರೆ, ಶಿಕ್ಷಕ ಈ ವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ. ಈ ನಡುವೆ ಅಮಾನತು ಆದೇಶವನ್ನೂ ರಹಸ್ಯವಾಗಿಟ್ಟಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇನ್ನು ಅಮಾನತುಗೊಂಡಿದ್ದರೂ ಪಾನಮತ್ತ ಸ್ಥಿತಿಯಲ್ಲಿಯೇ ಶಿಕ್ಷಕ ಶಾಲೆಗೆ ಬಂದು, ಹೋಗುತ್ತಿದ್ದಾನೆಂದು ಮೂಲಗಳು ತಿಳಿಸಿವೆ.
ಬೇಲಾಪುರ ಬಿಇಒ ಎನ್.ಆರ್.ಹೆಗಡೆ ಮಾತನಾಡಿ, ಅಮಾನತುಗೊಳಿಸಿರುವುದು ಗುಟ್ಟಾಗಿ ಉಳಿದಿಲ್ಲ. ಪಾನಮತ್ತ ಸ್ಥಿತಿ ಆರೋಪ ವಿಚಾರಣೆ ನಡೆದಿದೆ. ಆದರೆ, ಅದನ್ನು ನಿರೂಪಿಸಲು ಯಾವುದೇ ಸಾಕ್ಷ್ಯಗಳಿಲ್ಲ ಎಂದು ಹೇಳಿದ್ದಾರೆ.